ತನ್ನ ಅಪರ್ಣಾ ಒಡನಾಟದ ನೆನಪುಗಳನ್ನು ಸೃಜನ್‌ ಲೋಕೇಶ್‌ ಹಂಚಿಕೊಂಡಿದ್ದಾರೆ.

- ಸೃಜನ್‌ ಲೋಕೇಶ್‌

ಅಪರ್ಣಾಗೆ ಒಂದು ವಿಚಿತ್ರ ಅಭ್ಯಾಸ ಇತ್ತು. ಇಡೀ ದಿನ ಏನಾದ್ರೂ ತಿನ್ನುತ್ತಾ ಇರೋದು. ಕಳ್ಳೇಪುರಿನೋ, ಕಡ್ಲೆಬೀಜನೋ ಏನಾದ್ರೂ. ನಮ್ಮ ಮಜಾ ಟಾಕೀಸ್‌ ಸ್ಕಿಟ್‌ ರಿಹರ್ಸಲ್‌ಗಳಲ್ಲೆಲ್ಲ ಬಾಯಾಡಿಸ್ತಾನೇ ಇರ್ತಿದ್ರು. ಅದಕ್ಕೆ ನಾನವರಿಗೆ ‘ಹಸು’ ಅಂತ ಹೆಸರಿಟ್ಟಿದ್ದೆ.

ಕೆಲವು ದಿನಗಳ ಹಿಂದೆಯಷ್ಟೇ ಅವರ ಜೊತೆ ಮಾತಾಡಿದ್ದು. ಈಗ ಅವರಿಲ್ಲ ಅನ್ನೋದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಮಜಾ ಟಾಕೀಸ್‌ನಿಂದ ನಿಮ್ಮ ಜೀವನದಲ್ಲಿ ಹೊಸ ಹುರುಪು ಬರ್ತಿದೆ, ಅದನ್ನು ರೆಗ್ಯುಲರ್‌ ಆಗಿ ಮಾಡಿ ಅಂತ ಡಾಕ್ಟರೇ ಅವರಿಗೆ ಹೇಳಿದ್ರಂತೆ. 

‘ಥ್ಯಾಂಕ್ಯೂ ಸೃಜಾ ನಂಗೆ ಅವಕಾಶ ಕೊಟ್ಟಿದ್ದಕ್ಕೆ’ ಅಂದಿದ್ರು ಅಪರ್ಣಾ . ನಾನಾಗ, ‘ಥ್ಯಾಂಕ್ಯೂ ನಿಮಗೆ. ನಿಮ್ಮ ಜೊತೆ ಆಕ್ಟ್‌ ಮಾಡೋಕೆ ಚಾನ್ಸ್‌ ಕೊಟ್ಟಿದ್ದಕ್ಕೆ’ ಅಂದಿದ್ದೆ.ಈ ಕಾರ್ಯಕ್ರಮದ ಆರಂಭದಲ್ಲಿ ಅವರಿಗೆ ಭಯ ಇತ್ತು. ಮೊದಲ ಎಪಿಸೋಡ್‌ ಶೂಟಿಂಗ್‌ ಆದ ಮೇಲಂತೂ ಕಾಲ್‌ ಮಾಡಿ ‘ಸೃಜಾ ಭಯ ಆಗ್ತಿದೆ, ಬೇಡ’ ಅಂದಿದ್ರು. ‘ನನ್ನ ಮೇಲೆ ನಂಬಿಕೆ ಇದ್ರೆ ಮಾಡಿ’ ಅಂದಿದ್ದೆ.

 ಬಹಳ ದಿನಗಳ ಬಳಿಕ ಈ ಕಾರ್ಯಕ್ರಮಕ್ಕಾಗಿ ಆಸ್ಟ್ರೇಲಿಯಾಗೆ ಹೋಗಬೇಕಾದ್ರೆ ಫ್ಲೈಟಲ್ಲಿ ಕೂತು ಹೇಳಿದ್ರು, ‘ನಿನ್ನ ಆ ಕಾಲ್‌ ಇವತ್ತು ಆಸ್ಟ್ರೇಲಿಯಾಗೆ ಕರ್ಕೊಂಡು ಹೋಗ್ತಿದೆ’ ಅಂತ.ಮಹಾನ್‌ ಪ್ರತಿಭಾನ್ವಿತೆಯ ಕೊನೆಯ ಯಾತ್ರೆಗೆ ಸರ್ಕಾರಿ ಗೌರವ ಸಿಕ್ಕಿದೆ. ನಮ್ಮ ಮೆಟ್ರೋದಲ್ಲಿ ಅವರ ದನಿ ಕೊನೆಯವರೆಗೂ ಇರಬೇಕು ಎಂಬುದು ಎಲ್ಲ ಕನ್ನಡಿಗರ ಇಂಗಿತ.