ಸಾರಾಂಶ
ನಿರ್ದೇಶಕನಾಗಬೇಕು ಎಂದು ಸಿಟಿಗೆ ಬಂದಿಳಿಯುವ ಹಳ್ಳಿ ಹುಡುಗ ಕುಮಾರ. ಅವನ ಕನಸಿನ ಹಿನ್ನೆಲೆ ಮತ್ತು ಕನಸನ್ನು ಬೆಂಬತ್ತುವ ಪಯಣ
ಚಿತ್ರ: ಅಂದೊಂದಿತ್ತು ಕಾಲ
ನಿರ್ದೇಶನ: ಕೀರ್ತಿ
ತಾರಾಗಣ: ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್
ಪ್ರಿಯಾ ಕೆರ್ವಾಶೆ
ರೇಟಿಂಗ್: 3
ನಿರ್ದೇಶಕನಾಗಬೇಕು ಎಂದು ಸಿಟಿಗೆ ಬಂದಿಳಿಯುವ ಹಳ್ಳಿ ಹುಡುಗ ಕುಮಾರ. ಅವನ ಕನಸಿನ ಹಿನ್ನೆಲೆ ಮತ್ತು ಕನಸನ್ನು ಬೆಂಬತ್ತುವ ಪಯಣ ಒಟ್ಟಾಗಿ ‘ಅಂದೊಂದಿತ್ತು ಕಾಲ’ ಸಿನಿಮಾವಾಗಿದೆ. ಕೆಲವೊಂದು ಕಡೆ ಇದು ರಾಷ್ಟ್ರಪ್ರಶಸ್ತಿ ವಿಜೇತ ಕಿರುಚಿತ್ರ ‘ಮಧ್ಯಂತರ’ವನ್ನು ನೆನಪಿಸುತ್ತದೆ. ಉಳಿದಂತೆ ಭಾವನೆಗಳ ಜೋಕಾಲಿಯಲ್ಲಿ ಪ್ರೇಕ್ಷಕನನ್ನು ಜೀಕಿಸುತ್ತ, ಮನಸ್ಸಲ್ಲಿ ಉಳಿಯುವ ಇಮೇಜ್‌ಗಳನ್ನು ಕಟ್ಟಿಕೊಡುತ್ತಾ ಸಾಗುತ್ತದೆ.
ಚಿಕ್ಕ ವಯಸ್ಸಿನಲ್ಲಿ ‘ನಾಗರಹಾವು’ ಸಿನಿಮಾ ನೋಡಿ ಪುಟ್ಟಣ್ಣ ಕಣಗಾಲ್‌ರಿಂದ ಪ್ರಭಾವಿತನಾಗಿ ತಾನೂ ನಿರ್ದೇಶಕ ಆಗಲು ಹೊರಡುವ ಕುಮಾರ ಅಂದುಕೊಂಡ ಗುರಿ ತಲುಪಿದನಾ, ಕೊನೆಗೂ ಆತನ ಚಿತ್ತ ಹರಿಯುವುದು ಎತ್ತ ಇನ್ನುವುದು ಸಿನಿಮಾ ಕಥೆ. ಇಲ್ಲಿ ಆತ ಕನ್ನಡ ಮೀಡಿಯಂ ಅನ್ನೂ ಪ್ರತಿನಿಧಿಸುತ್ತಾನೆ.
ಈ ಸಿನಿಮಾ ನೋಡುವಾಗ ಕಥೆಯ ಜೊತೆಗೆ ವಿನಯ್ ಅವರ ತಣ್ಣನೆಯ ಸೂಕ್ಷ್ಮ ಅಭಿನಯ, ಬದುಕಿನ ಮಾರ್ಪಾಡನ್ನು ಪಾತ್ರವಾಗಿ ಪ್ರತಿಬಿಂಬಿಸಿದ ರೀತಿ ಪರಿಣಾಮಕಾರಿಯಾಗಿದೆ. ಸಿನಿಮಾ ನೋಡಿ ಹೊರಬರುವ ಪ್ರೇಕ್ಷಕರ ಕಣ್ಣ ಚಲನೆಯಲ್ಲೇ ತನ್ನ ಸೋಲು ಗೆಲುವಿನ ಲೆಕ್ಕಾಚಾರ ಹಾಕುವ ಹೊಸ ನಿರ್ದೇಶಕನ ತಲ್ಲಣಗಳನ್ನು ದಾಟಿಸಿದ ಬಗೆ ತೀವ್ರವಾಗಿದೆ. ಕಡ್ಡಿಪುಡಿ ಚಂದ್ರು ಅವರ ಸಂಪಂಗಿ ಪಾತ್ರ, ಅರುಣ ಬಾಲರಾಜ್ ನಟನೆಯ ಅಮ್ಮನ ಕಥೆ ಮನಸ್ಸಿಗಿಳಿಯುತ್ತದೆ.
ಆದರೆ ಕೊನೆಯ ಭಾಗದ ವೈಭವೀಕರಣ ಕೊಂಚ ಹೆಚ್ಚಾಯ್ತೇನೋ. ಜೊತೆಗೆ ಸಕ್ಸಸ್ ಕಂಡಾಗ ಕುಮಾರನಿಗೆ ಕನ್ನಡ ಮೇಷ್ಟ್ರೇ ನೆನಪಾಗಲಿಲ್ಲವೇಕೆ ಎಂಬ ಪ್ರಶ್ನೆಯೂ ಬರುತ್ತದೆ. ನಿರ್ದೇಶಕ ಕೀರ್ತಿ ಇಲ್ಲಿ ಹೇಳಿದ ಕಥೆ ನಮಗೆ ನಿಮಗೆ ಗೊತ್ತಿಲ್ಲದ್ದಲ್ಲ. ಆದರೆ ನಮಗೆ ಗೊತ್ತಿರುವ ಕಥೆಯನ್ನೇ ಆಸಕ್ತಿಕರವಾಗಿ, ತನ್ಮಯಗೊಳಿಸುವಂತೆ ಹೇಳಿದ್ದು ನಿರ್ದೇಶಕರ ಮೇಲೆ ಭರವಸೆ ಮೂಡಿಸುತ್ತದೆ.