ಜನಪ್ರಿಯ ನಿರೂಪಕಿ ಅನುಶ್ರೀ, ಕೊಡಗು ಮೂಲದ ಉದ್ಯಮಿ ರೋಷನ್‌ ರಾಮ್‌ಮೂರ್ತಿ ಜೊತೆಗೆ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ.

ಜನಪ್ರಿಯ ನಿರೂಪಕಿ ಅನುಶ್ರೀ, ಕೊಡಗು ಮೂಲದ ಉದ್ಯಮಿ ರೋಷನ್‌ ರಾಮ್‌ಮೂರ್ತಿ ಜೊತೆಗೆ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ.

ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಶಿವರಾಜ್‌ ಕುಮಾರ್‌ ದಂಪತಿ, ಹಂಸಲೇಖ, ರಾಜ್‌ ಬಿ ಶೆಟ್ಟಿ, ಡಾಲಿ ಧನಂಜಯ, ನಿರ್ದೇಶಕ ತರುಣ್‌ ಸುಧೀರ್‌, ಶರಣ್‌, ನೆನಪಿರಲಿ ಪ್ರೇಮ್‌, ನಟಿ ಪ್ರೇಮಾ, ವಿಜಯ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ನಾನು ಚೆನ್ನಾಗಿ ಅಡುಗೆ ಮಾಡ್ತೀನಿ, ಅವಳು ಇಷ್ಟಪಟ್ಟು ತಿಂತಾಳೆ: ರೋಷನ್

ವಿವಾಹದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅನುಶ್ರೀ ಪತಿ ರೋಷನ್‌, ‘ಅನುಶ್ರೀ ಬಹಳ ಸಿಂಪಲ್‌ ಹುಡುಗಿ. ನನಗೆ 5 ವರ್ಷದಿಂದ ಪರಿಚಯ. ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ನನ್ನ ಬಾಲ್ಯದ ಸ್ನೇಹಿತೆ. ಅವರ ಮೂಲಕ ಅನು ಪರಿಚಯ ಆಯ್ತು. ಉಳಿದಂತೆ ನಾನು ಚೆನ್ನಾಗಿ ಅಡುಗೆ ಮಾಡ್ತೀನಿ, ಅವಳು ಚೆನ್ನಾಗಿ ಇಷ್ಟಪಟ್ಟು ತಿಂತಾಳೆ’ ಎಂದರು.

ಅಪ್ಪು ಸರ್‌ ನಮ್ಮಿಬ್ಬರನ್ನು ಸೇರಿಸಿದ್ರು: ಅನುಶ್ರೀ

ವಿವಾಹದ ಬಗ್ಗೆ ಮಾತನಾಡಿದ ಅನುಶ್ರೀ, ‘ನಾವಿಬ್ರೂ ಫ್ರೆಂಡ್ಸ್‌ ಆಗಿದ್ವಿ. ಜೊತೆಯಾಗಿ ಕಾಫಿ ಕುಡಿದ್ವಿ. ನಂಗೆ ಅವ್ರು ಇಷ್ಟ ಆದ್ರು. ಅವರಿಗೆ ನಾನಿಷ್ಟ ಆದೆ. ಲವ್ವಾಯ್ತು, ಮದುವೆ ಆಗಿ ನಿಮ್ಮ ಮುಂದೆ ಕೂತಿದ್ದೀವಿ. ರೋಷನ್‌, ಅಪ್ಪು ಸರ್‌ನ ಬಹಳ ಇಷ್ಟ ಪಡುವವರು. ಅವರ ಆತ್ಮೀಯ ಸ್ನೇಹಿತರು. ಒಂದು ಲೆಕ್ಕದಲ್ಲಿ ಅಪ್ಪು ಸರ್‌ ನಮ್ಮನ್ನು ಸೇರಿಸಿದ್ದಾರೆ. ಉಳಿದಂತೆ ನಾವಿಬ್ಬರೂ ಬದುಕನ್ನು ಸಿಂಪಲ್ಲಾಗಿ ನೋಡೋರು. ಚಿಕ್ಕ ಖುಷಿಗಳನ್ನೂ ಅನುಭವಿಸುವವರು. ರೋಷನ್‌ ಅವರದು ಸ್ನೇಹಮಯಿ ವ್ಯಕ್ತಿತ್ವ, ಅವರಿಗೆ ಸಹಾಯ ಮನೋಭಾವ ಜಾಸ್ತಿ. ಸರಳವಾಗಿ ಮದುವೆ ಆಗಬೇಕೆಂಬ ಬಯಕೆಯಿಂದ ಕೆಲವೇ ಜನರ ಸಮ್ಮುಖದಲ್ಲಿ ವಿವಾಹವಾಗಿದ್ದೇವೆ’ ಎಂದರು.

ಇವರ ಮದುವೆ ಮಂಟಪದಲ್ಲೇ ಹೂಗಳಿಂದ ಅಲಂಕೃತಗೊಂಡ ಪುನೀತ್‌ ರಾಜ್‌ಕುಮಾರ್‌ ಅವರ ಫೋಟೋವನ್ನು ಇಟ್ಟಿದ್ದು ವಿಶೇಷವಾಗಿತ್ತು.