ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಡ್ಮಿಂಟನ್‌ ಕ್ರೀಡೋತ್ಸವ ಹವಾ - ಬೆಂಗಳೂರಿನಲ್ಲಿ 2 ದಿನಗಳ ಕ್ರೀಡಾಕೂಟಕ್ಕೆ ರವಿಚಂದ್ರನ್‌ ಚಾಲನೆ

| Published : Sep 29 2024, 09:58 AM IST

v ravichandran
ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಡ್ಮಿಂಟನ್‌ ಕ್ರೀಡೋತ್ಸವ ಹವಾ - ಬೆಂಗಳೂರಿನಲ್ಲಿ 2 ದಿನಗಳ ಕ್ರೀಡಾಕೂಟಕ್ಕೆ ರವಿಚಂದ್ರನ್‌ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಚಿತ್ರರಂಗದ ಸಾರಥ್ಯದಲ್ಲಿ ಆರಂಭವಾಗಿರುವ ಎರಡು ದಿನಗಳ ಕಾಲ ಸ್ಯಾಂಡಲ್‌ವುಡ್‌ ಷಟಲ್ ಬ್ಯಾಡ್ಮಿಂಟನ್‌ ಕ್ರೀಡೋತ್ಸವಕ್ಕೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಶನಿವಾರ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.

ಬೆಂಗಳೂರು  : ಕನ್ನಡ ಚಿತ್ರರಂಗದ ಸಾರಥ್ಯದಲ್ಲಿ ಆರಂಭವಾಗಿರುವ ಎರಡು ದಿನಗಳ ಕಾಲ ಸ್ಯಾಂಡಲ್‌ವುಡ್‌ ಷಟಲ್ ಬ್ಯಾಡ್ಮಿಂಟನ್‌ ಕ್ರೀಡೋತ್ಸವಕ್ಕೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಶನಿವಾರ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.

ಟೂರ್ನಮೆಂಟ್‌ ಉದ್ಘಾಟನೆ ಮಾಡಿ ಮಾತನಾಡಿದ ಕ್ರೇಜಿಸ್ಟಾರ್‌ ರವಿಚಂದ್ರನ್‌, ‘ಕ್ರೀಡೆ ಎಂದ ಮೇಲೆ ಸೋಲು ಮತ್ತು ಗೆಲುವು ಇದ್ದೇ ಇರುತ್ತದೆ. ಆದರೆ, ನನ್ನ ಪ್ರಕಾರ ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯ ಆಗಬಾರದು. ಈ ಕ್ರೀಡೆಯ ನೆಪದಲ್ಲಾದರೂ ಎಲ್ಲರೂ ಜತೆಗೆ ಇದ್ದೇವೆ ಎಂಬುದು ಮುಖ್ಯವಾಗಬೇಕು. ಯಾಕೆಂದರೆ ಇದು ಸಿನಿಮಾ. ನಾವೆಲ್ಲ ಕಲಾವಿದರು, ತಂತ್ರರು. ಜತೆಗೆ ಮಾಧ್ಯಮ ಕ್ಷೇತ್ರದವರೂ ಇದ್ದಾರೆ. ಸಿನಿಮಾ, ಕಿರುತೆರೆ, ಮಾಧ್ಯಮ ಹೀಗೆ ಮೂರು ಕ್ಷೇತ್ರಗಳ ವಿಶೇಷ ಸಂಗಮದ ಕ್ರೀಡಾ ಹಬ್ಬಇದು. ಇಲ್ಲಿ ನೀವು ಆಡೋ ಆಟದಲ್ಲಿ ಮಾತ್ರ ಫೈಯರ್‌ ಇರಲಿ. ನಗು ನಗುತ್ತಾ ಖುಷಿಯಿಂದ ಈ ಕ್ರೀಡಾ ಉತ್ಸವವನ್ನು ಹೆಚ್ಚಿಸೋಣ. ನಾನು ಈ ರೀತಿ ಹೊರಗೆ ಕಾರ್ಯಕ್ರಮಗಳಿಗೆ ಹೋಗಿ ನಾಲ್ಕು ತಿಂಗಳು ಆಯಿತು. ನನ್ನ ಈ ವೇದಿಕೆಗೆ ಕರೆದುಕೊಂಡು ಬಂದಿದ್ದು ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌’ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ಮಾತನಾಡಿ, ‘ಚಿತ್ರರಂಗಕ್ಕೆ ಇಂಥದ್ದೊಂದು ಕಾರ್ಯಕ್ರಮದ ಅಗತ್ಯ ಇತ್ತು. ಚಿತ್ರರಂಗದ ಎಲ್ಲಾ ವಿಭಾಗದ ಕಲಾವಿದರು, ತಂತ್ರಜ್ಞರ ಬೆಂಬಲ, ಪ್ರೋತ್ಸಾಹದೊಂದಿಗೆ ಈ ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸ್ಯಾಂಡಲ್‌ವುಡ್ ಕ್ರೀಡೆ ಮತ್ತು ಸಾಂಸ್ಕೃತಿಕ ಒಕ್ಕೂಟ ವತಿಯಿಂದ ಇಂಥ ಕ್ರೀಡೋತ್ಸವ ಆಯೋಜಿಸುತ್ತೇವೆ’ ಎಂದು ಹೇಳಿದರು.

ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ‘ಎಲ್ಲಾರು ಒಟ್ಟಿಗೆ ಅಭಿಮಾನ, ಸ್ನೇಹಪೂರ್ವಕವಾಗಿ ಆಡುತ್ತಿರುವ ಪಂದ್ಯಾವಳಿ ಇದು. ಯಾರೇ ಗೆಲ್ಲಲಿ, ಯಾರೇ ಸೋಲಲಿ ನಾವೆಲ್ಲ ಒಂದೇ. ಇಲ್ಲಿ ಆಟ ಮುಖ್ಯವಾಗಿರುತ್ತದೆ. ಸೋಲು ಮತ್ತು ಗೆಲುವು ಕ್ರೀಡೆಯ ಒಂದು ಭಾಗ’ ಎಂದು ಅಭಿಪ್ರಾಯಪಟ್ಟರು.

ಭಾ.ಮ.ಹರೀಶ್ ಮಾತನಾಡಿ, ‘ಕ್ರೀಡೆ ಮತ್ತು ಮನರಂಜನೆ ಕ್ಷೇತ್ರಗಳ ನಡುವೆ ತುಂಬಾ ಹತ್ತಿರದ ನಂಟು ಇದೆ. ಈಗ ಚಿತ್ರರಂಗದವರೇ ಸೇರಿ ಕ್ರೀಡೆ ಆಡುತ್ತಿರುವುದು ವಿಶೇಷ. ಚಿತ್ರರಂಗದಲ್ಲಿ ಹೊಸ ಉತ್ಸಾಹ ಮತ್ತು ಕ್ರೀಡಾ ಮನೋಭಾವನೆ ಬೆಳೆಸುವ ಜತೆಗೆ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರಿಗೆ ನೆರವಾಗುವ ಉದ್ದೇಶದಿಂದ ಈ ಸ್ಯಾಂಡಲ್‌ವುಡ್‌ ಕಪ್‌- 2024 ಆಯೋಜಿಸಲಾಗಿದೆ. ಒಂದು ಒಳ್ಳೆಯ ಉದ್ದೇಶದಿಂದ ಆಯೋಜನೆಗೊಂಡಿರುವ ಈ ಕ್ರೀಡೆ ಎಲ್ಲರ ಸಹಕಾರದಿಂದ ಯಶಸ್ವಿ ಆಗಲಿದೆ’ ಎಂದು ತಿಳಿಸಿದರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ, ವಾಣಿಜ್ಯ ಮಂಡಳಿಯ ಪ್ರಮುಖರಾದ ಸುಂದರ್‌ ರಾಜ್‌, ಎ.ಗಣೇಶ್‌, ಪ್ರವೀಣ್‌ ಕುಮಾರ್‌, ಜಯಸಿಂಹ ಮುಸರಿ, ಎಸ್‌.ವಿ.ಬಾಬು, ಪ್ರಮೀಳಾ ಜೋಷಾಯ್‌ ಮುಂತಾದವರು ಹಾಜರಿದ್ದರು.

ಮೊದಲ ದಿನದ ಪಂದ್ಯದಲ್ಲಿ 4 ತಂಡಗಳಿಗೆ ಮೇಲುಗೈ

ಸ್ಯಾಂಡಲ್‌ವುಡ್ ಕಪ್ 2024 ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಮೊದಲನೇ ದಿನದ ಲೀಗ್‌ ಪಂದ್ಯಾಟದಲ್ಲಿ 4 ತಂಡಗಳು ಮೇಲುಗೈ ಸಾಧಿಸಿವೆ. ಎ ಗ್ರೂಪ್‌ನಲ್ಲಿ ನಟ ವಿಕ್ರಮ್‌ ರವಿಚಂದ್ರನ್‌ ನಾಯಕತ್ವದ ಅಮೃತವರ್ಷಿಣಿ ಅವೆಂಜರ್ಸ್ ಹಾಗೂ ನಟ ಶ್ರೀನಗರ ಕಿಟ್ಟಿ ನಾಯಕತ್ವದ ಸೂರ್ಯವಂಶ ಸ್ಕ್ವಾಡ್‌ ಅಗ್ರ ಎರಡು ಸ್ಥಾನದಲ್ಲಿದೆ. ಬಿ ಗ್ರೂಪ್‌ನಲ್ಲಿ ಸೃಜನ್ ಲೋಕೇಶ್ ನಾಯಕತ್ವದ ಅಪ್ಪು ಪ್ಯಾಂಥರ್ಸ್ ಮತ್ತು ಸಿಂಧು ಲೋಕನಾಥ್ ನಾಯಕತ್ವದ ಗಂಧದಗುಡಿ ಗ್ಯಾಂಗ್ ಅಗ್ರ ಸ್ಥಾನದಲ್ಲಿದೆ. ಇವತ್ತು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಎ ಮತ್ತು ಬಿ ಗ್ರೂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಈ ನಾಲ್ಕು ತಂಡಗಳೇ ಸೆಮಿ ಫೈನಲ್ ತಲುಪುವುದು ಬಹುತೇಕ ಖಚಿತವಾಗಿದೆ.

ಅತ್ಯುತ್ತಮ ಪಂದ್ಯಾವಳಿ ಆಯೋಜನೆ

ಸ್ಯಾಂಡಲ್‌ವುಡ್‌ ಕಪ್ 2024 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿತ್ತು. ಪಂದ್ಯಾವಳಿಯ ಮಧ್ಯೆ ಬೆರಗುಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಊಟೋಪಚಾರ ವ್ಯವಸ್ಥೆ ಕೂಡ ಸೊಗಸಾಗಿತ್ತು. ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಎಲ್ಲಾ ಪಂದ್ಯಗಳು ನಡೆಯಿತು.

ಫ್ಯಾಮಿಲಿ ಆಟ

ಈ ಬಾರಿಯ ಸ್ಯಾಂಡಲ್‌ವುಡ್‌ ಕಪ್ 2024 ಬ್ಯಾಡ್ಮಿಂಟನ್ ಪಂದ್ಯಾವಳಿಯ ವಿಶೇಷ ಒಂದೇ ಕುಟುಂಬಕ್ಕೆ ಸೇರಿದ ಮೂವರು, ಇಬ್ಬರು ಆಡಿದ್ದು. ಟೂರ್ನಮೆಂಟ್‌ನ ಮೊದಲ ದಿನ ಎರಡು ಕೋರ್ಟ್‌ಗಳ ಪೈಕಿ ಒಂದು ಕೋರ್ಟ್‌ನಲ್ಲಿ ಇಂದ್ರಜಿತ್‌ ಲಂಕೇಶ್‌ ಆಡುತ್ತಿದ್ದರೆ ಮತ್ತೊಂದು ಪಂದ್ಯದ ವಿರುದ್ಧ ಕವಿತಾ ಲಂಕೇಶ್‌ ಅವರು ಆಡುತ್ತಿದ್ದರು. ಇನ್ನು ಇಂದ್ರಜಿತ್‌ ಲಂಕೇಶ್‌ ಪುತ್ರ ಸಮರ್ಜಿತ್‌ ಲಂಕೇಶ್‌, ತಮ್ಮ ಸರದಿಗಾಗಿ ಕಾಯುತ್ತ ತಮ್ಮ ತಂದೆಯ ಕ್ರೀಡಾ ಸ್ಫೂರ್ತಿಗೆ ಚಪ್ಪಾಳೆ ತಟ್ಟುತ್ತಿದ್ದರು. ಅಕ್ಕ, ತಮ್ಮ ಮತ್ತು ಮಗ ಈ ಮೂವರು ಬೇರೆ ಬೇರೆ ತಂಡಗಳಲ್ಲಿ ಆಡಿದರು. ಇನ್ನು ಕ್ರೇಜಿಸ್ಟಾರ್‌ ರವಿಚಂದ್ರನ್‌ ಮಕ್ಕಳಾದ ವಿಕ್ರಮ್‌ ರವಿಚಂದ್ರನ್‌ ಹಾಗೂ ಮನುರಂಜನ್‌ ಬೇರೆ ಬೇರೆ ತಂಡಗಳಲ್ಲಿ ಆಡಿದ್ದು ವಿಶೇಷವಾಗಿತ್ತು.

ಗಮನ ಸೆಳೆದ ಸೆಲೆಬ್ರಿಟಿಗಳು

ಮೊದಲ ದಿನ ಬ್ಯಾಡ್ಮಿಂಟನ್‌ ಪಂದ್ಯಾವಳಿಗಳಲ್ಲಿ ತಮ್ಮ ಆಟದ ಮೂಲಕ ಗಮನ ಸೆಳೆದಿದ್ದು ಸಿಂಧು ಲೋಕನಾಥ್, ದಿವ್ಯಾ ಉರುಡುಗ, ವಾಣಿಶ್ರೀ, ಶ್ರುತಿ ಹರಿಹರನ್, ರಾಮ್, ವಿಕ್ರಮ್ ರವಿಚಂದ್ರನ್, ಮನು ರಂಜನ್, ಮೈತ್ರೇಯಾ ಮುಂತಾದವರು.