ಸಾರಾಂಶ
ಭೀಮ ಚಿತ್ರದ ಸಕ್ಸಸ್ ಪತ್ರಿಕಾಗೋಷ್ಟಿಯಲ್ಲಿ ನಟ ದುನಿಯಾ ವಿಜಯ್ ತಂಡ ಸಂಭ್ರಮ ಹಂಚಿಕೊಂಡಿತು.
ಕನ್ನಡಪ್ರಭ ಸಿನಿವಾರ್ತೆ
ದುನಿಯಾ ವಿಜಯ್ ಅವರ ‘ಭೀಮ’ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ಈ ಖುಷಿಯಲ್ಲೇ ಚಿತ್ರತಂಡ ಸಂಭ್ರಮಾಚರಿಸಿತು.ಈ ಸಂದರ್ಭದಲ್ಲಿ ದುನಿಯಾ ವಿಜಯ್, ‘ನನಗೆ ಸ್ವತಂತ್ರವಾಗಿ ಸಿನಿಮಾ ಮಾಡುವ ಅವಕಾಶ ಕೊಟ್ಟ ನಿರ್ಮಾಪಕರಾದ ಜಗದೀಶ್ ಗೌಡ ಹಾಗೂ ಕೃಷ್ಣಸಾರ್ಥಕ್ ಅವರಿಗೆ ಋಣಿಯಾಗಿದ್ದೇನೆ. ನಮ್ಮನ್ನು ಕೆಣಕಿ, ಹಂಗಿಸಿದವರಿಗೆ ಈ ಚಿತ್ರದ ಯಶಸ್ಸು ಉತ್ತರ ಕೊಟ್ಟಿದೆ. ಎಲ್ಲರೂ ಇಂಥ ಚಿತ್ರಗಳನ್ನು ನೋಡಬೇಕು, ಮಕ್ಕಳು, ಪೋಷಕರು ಎಲ್ಲರೂ ಕೂತು ನೋಡುವ ಚಿತ್ರವಿದು ಎಂದು ಮೆಚ್ಚಿಕೊಳ್ಳುತ್ತಿದ್ದಾರೆ. ಒಳ್ಳೆಯ ವಿಚಾರ- ಸಂದೇಶ ಹೇಳುವುದಕ್ಕೆ ನಾನು ರಗಡ್ ದಾರಿಯನ್ನು ಆಯ್ಕೆ ಮಾಡಿಕೊಂಡೆ. ಇರೋ ಸಂಗತಿಗಳನ್ನು ಯಥಾವತ್ತಾಗಿ ಹೇಳಿದ್ದೇನೆ. ಭೀಮ ಚಿತ್ರದಲ್ಲಿರುವ ಕತೆ ಸಮಾಜಕ್ಕೆ ಎಚ್ಚರಿಕೆಯ ಗಂಟೆ’ ಎಂದರು.
ಕೃಷ್ಣಸಾರ್ಥಕ್, ಜಗದೀಶ್ ಗೌಡ, ‘ಪ್ರೀ ರಿಲೀಸ್ ಬಿಸಿನೆಸ್ ಇಲ್ಲದೆ ಇರುವ ಹೊತ್ತಿನಲ್ಲಿ ಶೇ.99ರಷ್ಟು ರಿಸ್ಕ್‌ನಲ್ಲಿ ಪ್ರೇಕ್ಷಕರ ಮೇಲೆ ನಂಬಿಕೆ ಇಟ್ಟು ನಮ್ಮ ಚಿತ್ರವನ್ನು ಬಿಡುಗಡೆ ಮಾಡಿದ್ದೆವು. ಆ ನಂಬಿಕೆ ಈಗ ನಿಜವಾಗಿದೆ. ನಮ್ಮ ಚಿತ್ರದ ಓಟಿಟಿ, ಟೀವಿ ಹಕ್ಕು ಯಾವುದೇ ವ್ಯಾಪಾರ ಆಗಿಲ್ಲ. ಚಿತ್ರಮಂದಿರ ನಂಬಿಕೊಂಡು ಸಿನಿಮಾ ಮಾಡಿದರೆ ಗೆದ್ದೇ ಗೆಲ್ಲುತ್ತೇವೆ ಎಂಬುದು ಸಾಬೀತಾಗಿದೆ. ಹಿಂದಿನಂತೆ ಈಗ ಚಿತ್ರಮಂದಿರಗಳನ್ನೇ ನಂಬಿಕೊಂಡು ಸಿನಿಮಾ ಮಾಡಬೇಕಿದೆ’ ಎಂದರು.ಸಂಭಾಷಣೆಕಾರ ಮಾಸ್ತಿ, ಸಂಗೀತ ನಿರ್ದೇಶಕ ಚರಣ್ ರಾಜ್, ನಾಯಕಿ ಅಶ್ವಿನಿ, ಪ್ರಮುಖ ಪಾತ್ರಧಾರಿಗಳಾದ ಡ್ರ್ಯಾಗನ್ ಮಂಜು, ಪ್ರಿಯಾ ಷಟಮರ್ಶನ, ನಯನಾ ಸೂಡ, ಜಯಸೂರ್ಯ, ಆಂಟೋನಿ, ನೃತ್ಯ ನಿರ್ದೇಶಕ ಧನು, ಸಾಹಸ ನಿರ್ದೇಶಕ ಶಿವು ಇದ್ದರು.