ಸಾರಾಂಶ
ಉತ್ತರ ಕರ್ನಾಟಕ ಸೊಗಡಿನ ದೇಸಾಯಿ ಚಿತ್ರ. ಶೂಟಿಂಗ್ ಲೊಕೇಶನ್ ವಿಸಿಟ್
ಕನ್ನಡಪ್ರಭ ಸಿನಿವಾರ್ತೆ
ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ, ಭಾಷೆಯನ್ನು ಪ್ರತಿಬಿಂಬಿಸುವ ‘ದೇಸಾಯಿ’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರು ಹೊರವಲಯದ ರೆಸಾರ್ಟ್ ಒಂದರಲ್ಲಿ ಕಲರ್‌ಫುಲ್ ಆಗಿ ನಡೆಯಿತು. ಉತ್ತರ ಕರ್ನಾಟಕ ಜಾನಪದ ಶೈಲಿಯ ರೆಟ್ರೋ ಡ್ಯಾನ್ಸ್‌ಗೆ ನಾಯಕ ಪ್ರವೀಣ್ ಹಾಗೂ ನಾಯಕಿ ರಾಧ್ಯಾ ಹೆಜ್ಜೆ ಹಾಕಿದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ನಾಗಿರೆಡ್ಡಿ, ‘ಉತ್ತರ ಕರ್ನಾಟಕದ ಭವ್ಯ ಸಂಸ್ಕೃತಿಯ ಅರಿವು ಹೆಚ್ಚಿನವರಿಗಿಲ್ಲ. ನಮ್ಮ ಸಿನಿಮಾಗಳಲ್ಲಂತೂ ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಹೀನಾಯವಾಗಿ ನೋಡಲಾಗುತ್ತಿದೆ. ಆದರೆ ನಮ್ಮ ಚಿತ್ರದ ಅಲ್ಲಿನ ಹಿರಿಮೆಯನ್ನು ತೋರಿಸಲಿದೆ. ಸಂಬಂಧಗಳ ಹಿರಿತನ, ಅವಿಭಕ್ತ ಕುಟುಂಬದ ಮಹತ್ವ ಸಾರುವ ಚಿತ್ರವಿದು. ಎರಡು ಕಾಲಘಟ್ಟದ ಕಥೆ ಇದೆ’ ಎಂದರು.ನಾಯಕ ಪ್ರವೀಣ್, ‘ಕ್ರೀಡಾಪಟುವಾಗಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾದಲ್ಲಿ ಸಾಹಸದ ಸನ್ನಿವೇಶ ಸೊಗಸಾಗಿ ಬಂದಿದೆ. ರಿಯಲ್ ಕುಸ್ತಿ ಪಟುಗಳೊಂದಿಗೆ ಕುಸ್ತಿ ಮಾಡಿದ್ದು, 25ಕ್ಕೂ ಹೆಚ್ಚು ಫೈಟರ್‌ಗಳೊಂದಿಗೆ ಫೈಟ್ ಮಾಡಿದ್ದು ಮರೆಯಲಾಗದ ಅನುಭವ’ ಎಂದರು. ನಿರ್ಮಾಪಕ ಮಹಾಂತೇಶ್ ಕಳೆದ 25 ವರ್ಷಗಳಿಂದ ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಸಿನಿಮಾ ಮಾಡುವ ಕನಸು ಕಂಡಿದ್ದರಂತೆ. ನಾಯಕಿ ರಾಧ್ಯಾ, ಅನುಪಮಾ ಎಂಬ ಉತ್ತರ ಕರ್ನಾಟಕದ ಬೋಲ್ಡ್ ಹುಡುಗಿಯಾಗಿ ನಟಿಸಿದ್ದಾರೆ.