ಸಿನಿಮಾ ಮಾಡಬಾರದು ಎಂದಿದ್ದರೆ ದೈವವೇ ನಿಲ್ಲಿಸುತ್ತಿತ್ತಲ್ಲ: ರಿಷಬ್ ಶೆಟ್ಟಿ

| N/A | Published : Sep 26 2025, 12:10 PM IST

Rishab Shetty in Kollur

ಸಾರಾಂಶ

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 1’ ಸಿನಿಮಾ ಅ.2ರಂದು ದೇಶ, ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕುರಿತಾಗಿ ರಿಷಬ್‌ ಶೆಟ್ಟಿ ಜೊತೆ ಮಾತುಕತೆ.

 - ರಾಜೇಶ್ ಶೆಟ್ಟಿ

ಪ್ರೀಕ್ವೆಲ್‌ನಲ್ಲಿ ಏನು ಹೇಳಲು ಹೊರಟಿದ್ದೀರಿ?

ಸಿನಿಮಾ ಎಂದಾಗ ಅದೊಂದು ಹೋರಾಟ. ಈ ಸಿನಿಮಾದಲ್ಲಿಯೂ ಹೋರಾಟ ಇದೆ. ಮೂಲತಃ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷವಿದೆ. ಕಾಂತಾರ ಎಂದರೆ ನಿಗೂಢತೆ ತುಂಬಿರುವ ಕಾಡು. ಈ ಕಾಡಿನ ಕತೆ ಇದೆ. ಅಲ್ಲಿನ ಮೂಲನಿವಾಸಿಗಳು, ಬುಡಕಟ್ಟು ಬದುಕಿನ ಕತೆ ಇದೆ.

ಸಿನಿಮಾದಲ್ಲಿ ಜಾನಪದ ಕತೆ ಎಷ್ಟಿದೆ, ಕಲ್ಪನೆ ಎಷ್ಟಿದೆ?

ಜಾನಪದವೆಲ್ಲಾ ಕತೆಯೇ ಅಲ್ಲವೇ. ಅದು ಕಲ್ಪನೆಯೂ ಆಗಿರಬಹುದು. ಅದಕ್ಕೆ ಐತಿಹಾಸಿಕ ದಾಖಲೆಗಳಿಲ್ಲ. ಹಿಂದೆ ನಡೆದಿತ್ತು ಅಂತ ಹೇಳುವುದಕ್ಕೆ ಪುರಾವೆಗಳಿಲ್ಲ. ಆದರೆ ನಾವು ಈ ಸಿನಿಮಾ ಮಾಡಬೇಕು ಎಂದಾಗ ಬಹಳ ಅಧ್ಯಯನ ಮಾಡಿದ್ದೇವೆ. ಪ್ರೊಫೆಸರ್ ವಿವೇಕ್‌ ರೈ, ಚಿನ್ನಪ್ಪ ಗೌಡರು ಮತ್ತು ಈ ವಿಚಾರದಲ್ಲಿ ಅಧ್ಯಯನ ಮಾಡಿರುವವರನ್ನು ಸಂಪರ್ಕಿಸಿ ಈ ಕುರಿತು ಮಾಹಿತಿ ಪಡೆದಿಕೊಂಡಿದ್ದೇವೆ. ಜೊತೆಗೆ ಹಳೆಯ ಪಾಡ್ದನಗಳ ಕತೆಯನ್ನು ಇಟ್ಟುಕೊಂಡು ನಮ್ಮದೇ ಕಲ್ಪನೆಯನ್ನು ಬಳಸಿ ಈ ಸಿನಿಮಾ ರೂಪಿಸಿದ್ದೇವೆ. ಸಾಮಾನ್ಯವಾಗಿ ಒಂದು ಸಿನಿಮಾ ಸ್ಟ್ರಕ್ಚರ್‌ ಸಿದ್ಧವಾದ ಮೇಲೆ ಅದಕ್ಕೆ ಬೇಕಾದದ್ದನ್ನು ನಾವು ಹುಡುಕುತ್ತಾ ಹೋಗುತ್ತೇವೆ. ನಮಗೆ ಬೇಕಾದದ್ದು ಸಿಗುತ್ತದೆ.

ಸಿನಿಮಾ ಚಿತ್ರೀಕರಣ ನಡೆಯುವಾಗ ಪೂರ್ತಿ ಆತಂಕಗಳೇ ಎದುರಾದವು. ಅದನ್ನೆಲ್ಲಾ ಹೇಗೆ ದಾಟಿಬಂದಿರಿ?

ಅಡೆತಡೆಗಳು ಇದ್ದಿದ್ದೇ. ಯಾವುದೂ ಸುಲಭವಾಗಿ ದಕ್ಕುವುದಿಲ್ಲ. ಪ್ರತಿದಿನ ಕಷ್ಟ ಎದುರಿಸಿಕೊಂಡೇ ಬಂದಿದ್ದೇವೆ. ಆದರೆ ಮಧ್ಯದಲ್ಲಿ ಕೆಲವು ಸಾವುಗಳಾದಾಗ ಕಾಂತಾರ ಸಿನಿಮಾ ವಿರುದ್ಧದ ನರೇಟಿವ್‌ಗಳು ಹುಟ್ಟಿಕೊಂಡವು. ಆದರೆ ಆ ಯಾವ ಸಾವುಗಳೂ ಕಾಂತಾರ ಸೆಟ್‌ನಲ್ಲಿ ಆಗಿರಲಿಲ್ಲ. ರಾಕೇಶ್‌ ತೀರಿಕೊಂಡಾಗ ಅವರ ಭಾಗದ ಶೂಟಿಂಗ್‌ ಮುಗಿದು ಇಪ್ಪತ್ತು ದಿನಗಳು ಕಳೆದಿದ್ದವು. ರಾಕೇಶ್‌ ಬಹಳ ಒಳ್ಳೆಯ ನಟ. ಅಂಥಾ ಒಬ್ಬ ಪಾಸಿಟಿವ್‌ ವ್ಯಕ್ತಿಯನ್ನು ನಾನು ನೋಡಿದ್ದೇ ಅಪರೂಪ. ಅವರ ಅಗಲಿಕೆ ಸಹಿಸಿಕೊಳ್ಳುವುದು ಕಷ್ಟ. ಅವರ ಸಾವು ತುಂಬಾ ದೊಡ್ಡ ನಷ್ಟ. ಆದರೆ ಅದನ್ನು ಸಿನಿಮಾ ವಿರುದ್ಧ ನರೇಟಿವ್ ಕಟ್ಟಲು ಬಳಸಿಕೊಂಡಿದ್ದು ನೋವಾಯಿತು.

ಪತ್ರಿಕಾಗೋಷ್ಠಿಯಲ್ಲಿ ನಾಲ್ಕೈದು ಬಾರಿ ಸಾವಿನ ಹತ್ತಿರ ಹೋಗಿದ್ದೆ ಎಂದಿರಿ. ಏನಾಗಿತ್ತು?

ಬೇರೆ ನಟರ ಸಾವಿನ ಕುರಿತು ಮಾತು ಬಂದಾಗ ನಾನು ಆ ಮಾತನ್ನು ಹೇಳಿದೆ. ಮೊದಲ ಭಾಗ ಮಾಡುವಾಗಲೂ ಆ ಥರದ ಸನ್ನಿವೇಶ ಎದುರಾಗಿತ್ತು. ಈ ಸಲವೂ ಅಂಥಾ ಸನ್ನಿವೇಶಗಳು ಎದುರಾಗಿದೆ. ಆದರೆ ಅದನ್ನು ದಾಟಿ ಬಂದಿದ್ದೇನೆ. ದೈವ ದೇವರು ರಕ್ಷಿಸಿದ್ದಾರೆ. ಕೆಲವು ವಿಚಾರಗಳನ್ನು ಹೇಳಬಾರದು ಮತ್ತು ಕೇಳಬಾರದು.

ಬೆರ್ಮೆರ್‌ ತುಳುನಾಡಿನ ಮೂಲದೈವ ಎಂಬ ಪರಿಕಲ್ಪನೆ ಇದೆ. ಟ್ರೇಲರ್‌ನಲ್ಲಿ ಬೆರ್ಮೆ ಎಂಬ ಪ್ರಸ್ತಾಪ ಬರುತ್ತದೆ. ಮೂಲದೈವದ ಕತೆಯೇ?

ಆ ಕುರಿತು ನಾನು ಜಾಸ್ತಿ ಮಾತನಾಡಲು ಆಗುವುದಿಲ್ಲ. ಸಿನಿಮಾ ಬಂದ ಮೇಲೆ ಗೊತ್ತಾಗುತ್ತದೆ. ಬೆರ್ಮೆ ಎಂಬುದು ನಮ್ಮ ಸಿನಿಮಾದ ಒಂದು ಪಾತ್ರ.

ತುಳುನಾಡಿನ ಅರಸರಿಗೂ ಕತೆಗೂ ಸಂಬಂಧ ಇದೆಯೇ?

ಈ ಸಿನಿಮಾದ ಕತೆ ಕದಂಬರ ಕಾಲದಲ್ಲಿ ನಡೆಯುವ ಕತೆ ಹೊಂದಿದೆ. ಆದರೆ ಕದಂಬರ ಕತೆ ಅಲ್ಲ. ಬಾರ್ಕೂರು, ಬಸ್ರೂರು ಸಂಸ್ಥಾನಗಳ ಬಗೆಗೆ ಕೂಡ ನಾವು ಅಧ್ಯಯನ ಸಂದರ್ಭದಲ್ಲಿ ತಿಳಿದುಕೊಂಡಿದ್ದೇವೆ. ಭೂತಾಳ ಪಾಂಡ್ಯನ ಕತೆಯಲ್ಲಿಯೂ ಹಡಗಿನ ಪ್ರಸ್ತಾಪ ಬರುತ್ತದೆ. ಹಡಗು ಯಾಕೆ ಎಂದರೆ ವ್ಯಾಪಾರ ಸಲುವಾಗಿ. ಅದರಿಂದ ತುಳುನಾಡಿಗೂ ಹೊರ ಜಗತ್ತಿಗೂ ಸಂಬಂಧ ಇರುವುದನ್ನು ತಿಳಿಯಬಹುದು. ಆ ಸಂದರ್ಭವನ್ನು ಕನೆಕ್ಟ್‌ ಮಾಡಿಕೊಂಡು ಕತೆ ಮಾಡಿದ್ದೇವೆಯೇ ಹೊರತು ಈ ಕತೆ ಯಾರಿಗೂ ಸಂಬಂಧಿಸಿದ್ದಲ್ಲ.

ಭೂತಾರಾಧನೆಯ ಭಾಗಗಳು ಎಷ್ಟಿವೆ?

ಅದನ್ನೆಲ್ಲಾ ಸಿನಿಮಾದಲ್ಲಿಯೇ ನೋಡಬೇಕು.

ಈಗೀಗ ದೈವವೇ ಈ ಸಿನಿಮಾ ಮಾಡಿಸಿದ್ದು ಎನ್ನುತ್ತಿದ್ದೀರಿ ಯಾಕೆ?

ನಾನು ದೈವ, ದೇವರನ್ನು ನಂಬುವವ. ದೈವದ ಮುಂದೆ ನಿಂತು ರಕ್ಷಣೆ ನೀಡು ಎಂದು ಕೇಳಿಕೊಳ್ಳುತ್ತೇವೆ. ಬದುಕಿನಲ್ಲಿ ಕೆಲವು ಹೇಳಲಾಗದ ಘಟನೆಗಳು ನಡೆದಾಗ, ಕೈಮೀರಿ ಕೆಲವು ಸಂದರ್ಭಗಳು ನಡೆದಾಗ ಮತ್ತು ಆ ಸಂದರ್ಭವನ್ನು ದಾಟಿ ಬಂದಾಗ ದೈವವೇ ನಮ್ಮನ್ನು ರಕ್ಷಿಸಿತು ಎಂಬ ಭಾವನೆ ನಮಗೆ ಬರುತ್ತದೆ. ನನ್ನ ಬದುಕಲ್ಲಿ ಹಾಗೆ ಆಗಿದೆ. ನಾನು ನಂಬುತ್ತೇನೆ. ಈ ಸಿನಿಮಾ ಮಾಡಬಾರದು ಎಂದಾಗಿದ್ದರೆ ದೈದವೇ ನಿಲ್ಲಿಸುತ್ತಿತ್ತು. ಅಂಥಾ ಕತೆಗಳನ್ನು ನಾವು ಬಹಳ ಕೇಳಿದ್ದೇವೆ. ನಂಬಿದ್ದೇವೆ. ಹಾಗಾಗಲಿಲ್ಲ ಎಂದರೆ ದೈವವೇ ಈ ಸಿನಿಮಾ ಮಾಡಿಸಿದೆ. ದೈವಾನುಗ್ರಹದಿಂದ ಈ ಸಿನಿಮಾ ಕೆಲಸ ನಡೆದಿದೆ. ದೈವಾನುಗ್ರಹ ಇಲ್ಲದಿದ್ದರೆ ಹೀಗೆಲ್ಲಾ ಆಗುತ್ತಲೇ ಇರಲಿಲ್ಲ. ಕೆರಾಡಿ ಎಂಬ ಹಳ್ಳಿಯಿಂದ ಬಂದು ಕಾಂತಾರ ಸಿನಿಮಾ ಮಾಡಿ, ಅದು ಈ ಮಟ್ಟಕ್ಕೆ ಹೋಗಿ ಈಗ ಕಾಂತಾರ 1 ನಡೆದು ಈಗ ಹೊಂಬಾಳೆ ಫಿಲಂಸ್‌ ದೇಶದ ಅತ್ಯಂತ ಪವರ್‌ಪುಲ್‌ ನಿರ್ಮಾಣ ಸಂಸ್ಥೆ ಆಗಿದೆ. ಅಂಥಾ ವಿಜಯ್‌ ಕಿರಗಂದೂರು ಅವರು ಬಂದು ದೈವದ ಎದುರು ನಿಂತು ಆಶೀರ್ವಾದ ಬೇಡುತ್ತಾರೆ ಎಂದರೆ ಎಲ್ಲವೂ ದೈವಾನುಗ್ರಹವೇ ಅಲ್ಲವೇ.

ತಯಾರಿ ಹೇಗಿತ್ತು?

ಸುಮಾರು ಸಾವಿರ ವರ್ಷಗಳ ಹಿಂದಿನ ಕತೆ ಹೇಳುತ್ತಿದ್ದೇವೆ. ಆ ಕಾಲದ ರೆಫರೆನ್ಸ್‌ ಇರಲಿಲ್ಲ. ಸಾಕಷ್ಟು ಅಧ್ಯಯನ ಮಾಡಿದೆವು. ಆ ಕಾಲದ ಯುದ್ಧ ಸನ್ನಿವೇಶಕ್ಕೆ ತಯಾರಿಗಳು ಬೇಕಿದ್ದುವು. ಮೊದಲೆಲ್ಲಾ ಗರಡಿ ಮನೆ ಇತ್ತು. ಕೇರಳ ಭಾಗದಲ್ಲಿ ಕಳರಿ ಪಯಟ್ಟು ಇತ್ತು. ಸಾಹಸ ಸನ್ನಿವೇಶಗಳಿಗೆ ಅದನ್ನೆಲ್ಲಾ ಕಲಿತೆ. ನಮ್ಮ ಭಾಗದಲ್ಲಿ ಮೊದಲು ನೂರಾರು ಗರಡಿಮನೆಗಳಿದ್ದವು. ಈಗ ಕೆಲವೇ ಗರಡಿಮನೆಗಳಿವೆ. ರೆಫರೆನ್ಸ್‌ ಇಟ್ಟುಕೊಂಡು, ಕಲ್ಪನೆ ಬಳಸಿ ಬಹಳಷ್ಟು ತಯಾರಿ ನಡೆಸಿದ್ದೇವೆ.

ಕೆರಾಡಿಯಲ್ಲಿಯೇ ಸಿನಿಮಾ ಮಾಡಬೇಕು ಅನ್ನುವುದು ಅನಿವಾರ್ಯವಾಗಿತ್ತಾ? ನಿಮ್ಮ ಇಷ್ಟವೇ?

ಕೆರಾಡಿಯಲ್ಲಿ, ನಮ್ಮ ಊರಿನಲ್ಲಿ ಸಿನಿಮಾ ಮಾಡಬೇಕು ಅನ್ನುವುದು ನನ್ನ ಆಸೆ ಆಗಿತ್ತು. ಅದರ ಹೊರತಾಗಿ ಕಾಂತಾರ ಸಿನಿಮಾ ಅಲ್ಲಿಯೇ ಆಗಬೇಕಿತ್ತು. ಅದಕ್ಕೆ ಪೂರಕವಾಗಿ ಅಲ್ಲೊಂದು ಫಿಲ್ಮ್‌ ಸಿಟಿಯನ್ನೇ ಕಟ್ಟಿದ್ದೇವೆ. ಚಿತ್ರಕ್ಕಾಗಿ ಸಾವಿರಾರು ಮಂದಿ ಕೆಲಸ ಮಾಡಿದ್ದಾರೆ. ಜನಸಾಗರವೇ ಕೆಲಸ ಮಾಡಿದೆ ಅಂದರೆ ಅತಿಶಯೋಕ್ತಿಯೇನಲ್ಲ. ಇಲ್ಲಿಯೇ ಮುಂದೆ ಒಂದಷ್ಟು ಸಿನಿಮಾ ಮಾಡುವ ಆಲೋಚನೆ ಇದೆ. ನನ್ನ ಹೊರತಾಗಿ ಬೇರೆ ತಂಡಗಳೂ ಇಲ್ಲಿ ಸಿನಿಮಾ ಮಾಡುತ್ತಿವೆ ಎಂದು ಸುದ್ದಿ ಕೇಳಿದೆ.

ಮುಂದಿನ ಸಿನಿಮಾಗಳೆಲ್ಲಾ ಪ್ಯಾನ್‌ ಇಂಡಿಯಾ ಸಿನಿಮಾಗಳೇ?

ಅದೆಲ್ಲಾ ಮಾಡಿದ್ದು ಕನ್ನಡಿಗರು. ಅಷ್ಟೆತ್ತರಕ್ಕೆ ಕರೆದುಕೊಂಡು ಹೋದರು. ನೀವು ಹೇಳುವ ಪ್ಯಾನ್‌ ಇಂಡಿಯಾ ಸಿನಿಮಾಗಳು ನನಗೆ ಕನ್ನಡ ಸಿನಿಮಾಗಳೇ. ಜೈ ಹನುಮಾನ್ ವಿಚಾರಕ್ಕೆ ಬಂದರೆ ಅದು ನನಗೆ ಕನ್ನಡ ಸಿನಿಮಾ. ನಿರ್ದೇಶಕ ಪ್ರಶಾಂತ್‌ ವರ್ಮರಿಗೆ ತೆಲುಗು ಸಿನಿಮಾ. ನಿರ್ಮಾಪಕರಿಗೆ ಪ್ಯಾನ್‌ ಇಂಡಿಯಾ ಸಿನಿಮಾ. ಮುಂದೆ ಏನಾಗತ್ತೋ ನೋಡೋಣ.

 ಕಾಂತಾರ ಚಾಪ್ಟರ್‌1 ಇಂದಿನಿಂದ ಟಿಕೆಟ್‌ ಬುಕಿಂಗ್‌ ಆರಂಭ

ಇಂದಿನಿಂದ ಕರ್ನಾಟಕದಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗುತ್ತಿದೆ. ಇಂದು (ಸೆ.26) ಮಧ್ಯಾಹ್ನ 12.29ಕ್ಕೆ ಬುಕಿಂಗ್‌ ಆರಂಭವಾಗಲಿದೆ ಎಂದು ಹೊಂಬಾಳೆ ಫಿಲಂಸ್‌ ಘೋಷಿಸಿದೆ.

Read more Articles on