ಸಾರಾಂಶ
- ಈ ಸಿನಿಮಾದ ಹೆಸರು ‘ಸೌಜನ್ಯ’ ಅಂದಾಗ ಇದು ಧರ್ಮಸ್ಥಳದ ಸೌಜನ್ಯಾ ಪ್ರಕರಣದ ಬಗೆಗಿನ ಸಿನಿಮಾವಾ ಎಂಬ ಪ್ರಶ್ನೆ ಬರುತ್ತಿದೆ. ನನ್ನ ಸಿನಿಮಾ ನಾಯಕಿ ಹೆಸರು ಸೌಜನ್ಯ. ಹೆಣ್ಣೊಬ್ಬಳಲ್ಲಿ ಸಮಾಜ ಹೇರುವ ಸೌಜನ್ಯವೇ ಹೇಗೆ ಅವಳಿಗೆ ಕಂಟಕವಾಗುತ್ತದೆ ಎಂಬುದನ್ನು ನಾನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇನೆ. ಇದು ದೇಶಾದ್ಯಂತ ಹೆಣ್ಣಿನ ಮೇಲೆ ನಡೆಯುವ ಶೋಷಣೆ, ಅತ್ಯಾಚಾರ, ಕೊಲೆಯಂಥಾ ಹೇಯ ಕೃತ್ಯಗಳ ವಿರುದ್ಧ ದಿಟ್ಟವಾಗಿ ದನಿ ಎತ್ತುವ ಸಿನಿಮಾ.
- ಕಿಶೋರ್ ಇದರ ನಾಯಕ. ಅವರೊಬ್ಬ ಸ್ತ್ರೀ ಸಂವೇದನೆಯ ವ್ಯಕ್ತಿ ಅನ್ನುವುದು ತಿಳಿದಿತ್ತು. ಆದರೆ ಅಂಥಾ ದೊಡ್ಡ ಕಲಾವಿದ ನನ್ನ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದು ಅವರ ಮೇಲಿನ ಗೌರವ ಹೆಚ್ಚಿಸಿತು. ‘ಹೊಸ ನಿರ್ದೇಶಕಿಯೊಬ್ಬರು ಇಂಥಾ ಸೆನ್ಸಿಟಿವ್ ವಿಚಾರದ ಬಗ್ಗೆ ಸಿನಿಮಾ ಮಾಡುತ್ತಾರೆ ಎಂಬುದು ಸಣ್ಣ ವಿಚಾರ ಅಲ್ಲವೇ ಅಲ್ಲ. ಆ ಚಿತ್ರದಲ್ಲಿ ನಟಿಸುವುದಕ್ಕೆ ನನಗೆ ಹೆಮ್ಮೆ ಇದೆ’ ಅಂದಿದ್ದರು ಕಿಶೋರ್. ಉಗ್ರಂ ಮಂಜು, ಕಾಕ್ರೋಚ್ ಸುಧಿ ಮೊದಲಾದ ಜನಪ್ರಿಯ ಕಲಾವಿದರೂ ನಟಿಸುತ್ತಿದ್ದಾರೆ.- ಸದ್ಯ ಸ್ಕ್ರಿಪ್ಟ್ ವರ್ಕ್‌ಗಳೆಲ್ಲ ಭರದಿಂದ ನಡೆಯುತ್ತಿವೆ. ನನಗೆ ರೀಸರ್ಚ್‌ಗಿಂತ ಪತ್ರಿಕೆಗಳಲ್ಲಿ ಬರುವ ಸಂಗತಿಗಳೇ ಸಿನಿಮಾಕ್ಕೆ ಬೇಕಾದ ಅನೇಕ ವಿವರಗಳನ್ನು ಒದಗಿಸುತ್ತಿದೆ. ನಮ್ಮ ಸಿನಿಮಾ ಅಸಹಾಯಕ ಹೆಣ್ಣುಮಕ್ಕಳಲ್ಲಿ ಬಲ ತುಂಬುವ ಜೊತೆಗೆ ಸಮಾಜದಲ್ಲಿ ಪರಿವರ್ತನೆಗೆ ನಾಂದಿ ಹಾಡಬೇಕು ಎಂಬ ಆಶಯ ನನ್ನದು.
- ಸಿನಿಮಾ ಇನ್ನು ಒಂದೂವರೆ ತಿಂಗಳಲ್ಲಿ ಸೆಟ್ಟೇರಲಿದೆ. ಸದ್ಯ ಸೌಜನ್ಯ ಪಾತ್ರಕ್ಕೆ ಹಾಗೂ ಸಿನಿಮಾದಲ್ಲಿ ಬರುವ ಹಲವು ಪಾತ್ರಗಳಿಗೆ ಆಡಿಷನ್ ಆರಂಭವಾಗಲಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರೆ. ಇದಲ್ಲದೇ ಅನೇಕ ಮುಖ್ಯಪಾತ್ರಗಳು ಇರುತ್ತವೆ.- ಸದ್ಯ ನನ್ನ ಮಗುವಿನ ಬಾಲ್ಯದ ಪ್ರತೀ ಕ್ಷಣವನ್ನೂ ಆನಂದಿಸುತ್ತಿದ್ದೇನೆ. ಹೀಗಾಗಿ ನಟನೆಯಿಂದ ಕೆಲವು ದಿನ ಬ್ರೇಕ್ ತೆಗೆದುಕೊಂಡಿದ್ದೇನೆ. ಎರಡು ತಿಂಗಳ ಬಳಿಕ ನಿರ್ದೇಶನದ ಜೊತೆಗೆ ಭೋಜ್‌ಪುರಿ, ಕನ್ನಡ ಸಿನಿಮಾಗಳಲ್ಲಿನ ನಟನೆ ಮುಂದುವರಿಸುತ್ತೇನೆ. ನಾಲ್ಕೈದು ಸಿನಿಮಾಗಳು ಸದ್ಯ ಕೈಯಲ್ಲಿವೆ.