ಸಾರಾಂಶ
ನೀವೇನಾದರೂ ದಕ್ಷಿಣ ಕನ್ನಡದವರಾಗಿದ್ದರೆ, ಈ ಕತೆಯನ್ನೆಲ್ಲ ನೀವು ಒಂದಲ್ಲ ಒಂದು ಸಲ ಕೇಳಿರುತ್ತೀರಿ. ಹೇಳಿಕೇಳಿ ದಕ್ಷಿಣ ಕನ್ನಡ ಸೀಮೆ ದೈವಗಳ ನಾಡು. ಪ್ರತಿಯೊಂದು ದೈವದ ಕುರಿತೂ ಅಲ್ಲಿ ನೂರಾರು ದಂತಕತೆಗಳೂ ಕಾರಣಿಕದ ಕತೆಗಳೂ ಜನಜನಿತ
ನಿರ್ದೇಶನ: ರಿಷಬ್ ಶೆಟ್ಟಿ
ತಾರಾಗಣ: ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಮ್, ಗುಲ್ಷನ್ ದೇವಯ್ಯ, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ
ರೇಟಿಂಗ್: 4
- ಜೋಗಿ
ನೀವೇನಾದರೂ ದಕ್ಷಿಣ ಕನ್ನಡದವರಾಗಿದ್ದರೆ, ಈ ಕತೆಯನ್ನೆಲ್ಲ ನೀವು ಒಂದಲ್ಲ ಒಂದು ಸಲ ಕೇಳಿರುತ್ತೀರಿ. ಹೇಳಿಕೇಳಿ ದಕ್ಷಿಣ ಕನ್ನಡ ಸೀಮೆ ದೈವಗಳ ನಾಡು. ಪ್ರತಿಯೊಂದು ದೈವದ ಕುರಿತೂ ಅಲ್ಲಿ ನೂರಾರು ದಂತಕತೆಗಳೂ ಕಾರಣಿಕದ ಕತೆಗಳೂ ಜನಜನಿತ. ಆ ದಂತಕತೆಗಳು ತೀರಾ ಪ್ರಾದೇಶಿಕವಾದವು. ಅವನ್ನು ಸಾರ್ವತ್ರಿಕಗೊಳಿಸುವುದು ಅಷ್ಟು ಸುಲಭವಲ್ಲ.
ಆದರೆ ಕತೆಗೆ ಸೀಮೋಲ್ಲಂಘನ ಮಾಡುವ ಸಾಮರ್ಥ್ಯವಿರುತ್ತದೆ. ಅವು ದೇಶಾಂತರ ಹೊರಟು ನಮ್ಮನ್ನು ತಲುಪಿ, ನಮ್ಮವೇ ಆಗಿ ಉಳಿದಿರುವ ಉದಾಹರಣೆಗಳಿವೆ. ರಿಷಬ್ ಶೆಟ್ಟಿ ಪಡುವಣ ಸೀಮೆಯ ದಂತಕತೆಗಳನ್ನು ಜಗತ್ತಿಗೆ ತೋರಿಸಲು ಹೊರಟಿದ್ದಾರೆ. ಕಾಂತಾರ ಚಿತ್ರದಲ್ಲಿ ಅದು ಸಾಂದರ್ಭಿಕವಾಗಿ ಕಾಣಿಸಿಕೊಂಡಿತ್ತು. ಕಾಂತಾರ ಅಧ್ಯಾಯ 1ರಲ್ಲಿ ಅದೇ ಪ್ರಧಾನವಾಗಿದೆ. ದಂತಕತೆ ದಂಡಯಾತ್ರೆ ಹೊರಟಿದೆ.
ಈಶ್ವರನ ಹೂದೋಟ ಎಂದು ಹೆಸರಾದ ಕಾಂತಾರ ಎಂಬ ಸೀಮೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕತೆ ಇದು. ಆ ಸೀಮೆಯನ್ನು ಕಾಪಾಡುವುದಕ್ಕೆ ದೈವಗಳಿದ್ದಾವೆ. ಈಶ್ವರನ ಗಣಗಳು ಕಾವಲಿಗೆ ನಿಂತಿದ್ದಾವೆ. ಹೊರಜಗತ್ತಿಗೂ ಕಾಂತಾರಕ್ಕೂ ಸಂಬಂಧ ಇಲ್ಲ ಎಂಬಂತೆ ಬದುಕುತ್ತಿರುವವರ ಸೀಮೆಗೆ ಕದಂಬರ ಸಾಮಂತರಾಜನ ಧೂರ್ತಮಗ ಕುಲಶೇಖರ ಕಾಲಿಡುತ್ತಾನೆ. ಅದು ಯುದ್ಧಕ್ಕೆ ನಾಂದಿ. ‘ನೀವು ನಮ್ಮನ್ನು ನೋಡಲಿಕ್ಕೆ ಬರಬಹುದು, ನಾವು ನಿಮ್ಮನ್ನು ನೋಡಲು ಬರಬಾರದೇ?’ ಎಂಬ ಪ್ರಶ್ನೆಯೊಂದಿಗೆ ಸಮರವೇ ಎರಡೂ ಜಗತ್ತಿನ ನಡುವಿನ ಸೇತುವೆಯಾಗುತ್ತದೆ.
ಕಾಡು, ಅರೆಬೆಳಕು, ಫ್ಯಾಂಟಸಿ, ಚರಿತ್ರೆ, ದೈವಿಕತೆ, ನಿಗೂಢ ಎಲ್ಲವನ್ನೂ ರಿಷಬ್ ಯಥೇಚ್ಛವಾಗಿ ಬಳಸಿಕೊಂಡಿದ್ದಾರೆ. ಅವರೊಳಗಿನ ಕತೆಗಾರ ತರ್ಕವನ್ನು ಪಕ್ಕಕ್ಕಿಟ್ಟು ಪ್ರಕೃತಿಯನ್ನು ವಿಸ್ಮಯದಿಂದ ನೋಡುತ್ತಾ ಬೆರಗಾಗಿರುವುದನ್ನು ಚಿತ್ರದ ಪ್ರತಿಯೊಂದು ದೃಶ್ಯದಲ್ಲೂ ಕಾಣಬಹುದು. ಇಲ್ಲಿ ವಿಧಿಲೀಲೆಗಿಂತ ದೈವಲೀಲೆಗೇ ಪ್ರಾಧಾನ್ಯ. ಎಲ್ಲ ಐಹಿಕ ವ್ಯಾಪಾರಗಳ ನಡುವೆಯೇ ದೈವಗಳನ್ನು ಬಂಧಿಸುವ, ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಆಟ ಆಡುವ ವಿದ್ಯಮಾನವೂ ಜರಗುತ್ತಿರುತ್ತದೆ.
ಮೇಲ್ನೋಟಕ್ಕೆ ಇದು ಕಾಡಿನೊಳಗೆ ತಮ್ಮಷ್ಟಕ್ಕೇ ಬದುಕುತ್ತಿರುವ ಆದಿವಾಸಿಗಳು ಮತ್ತು ಅವರ ಸೀಮೆಗೆ ಕಾಲಿಟ್ಟು ಕೊಳ್ಳೆಹೊಡೆಯಲು ಕಾದಿರುವ ಸಾಮಂತರಾಜರ ನಡುವಿನ ಹೋರಾಟದ ಕತೆ. ದುರಾಸೆಯಿಂದಲೂ ಅಧಿಕಾರದ ಅಮಲಿನಿಂದಲೂ ಸಾಮಂತರು ಹೋರಾಟಕ್ಕಿಳಿದರೆ, ಅಸ್ತಿತ್ವಕ್ಕಾಗಿ ಆದಿವಾಸಿಗಳು ಹೋರಾಡುತ್ತಾರೆ. ಚರಿತ್ರೆಯ ಪುಟಗಳಲ್ಲಿ ಇಂಥ ಕತೆಗಳು ಅಸಂಖ್ಯ.
ಕತೆಗಿಂತ ಅದನ್ನು ಕಟ್ಟಿಕೊಟ್ಟಿರುವ ರೀತಿ ಅನನ್ಯ. ಮೊದಲ ದೃಶ್ಯದಿಂದ ಕೊನೆಯ ತನಕ ಕಣ್ಮುಂದೆ ಏನು ನಡೆಯುತ್ತಿದೆ ಅನ್ನುವುದನ್ನು ತಾಳೆಹಾಕುವುದಕ್ಕೆ ಅವಕಾಶವೇ ಇಲ್ಲದಂತೆ ಒಂದರ ಹಿಂದೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಕಣ್ಣ ಮುಂದಿರುವುದು ದಟ್ಟ ಕಾಡು. ಅದರೊಳಗೇ ವಿಸ್ಮಯಲೋಕ ತೆರೆದುಕೊಳ್ಳುತ್ತದೆ. ಮಾಯಕಾರನ ಮೋಡಿಯೋ ದೈವದ ಆಟವೋ ತಿಳಿಯದ ಹಾಗೆ ವಿಚಿತ್ರವಾದ ಪ್ರಾಣಿಗಳು, ಅರೆಕತ್ತಲಲ್ಲಿ ಕಾಣಿಸಿಕೊಳ್ಳುವ ಭಯಾನಕ ಮುಖಗಳು, ಕಾಡಿನೊಳಗೇ ಹೋದಂತೆ ಎದುರಾಗುವ ಹುಲಿ, ಸಾಮಂತರ ರಾಜಧಾನಿಯ ಚಿತ್ರ, ಸಮುದ್ರ ತೀರದ ಬಂದರು, ಮೋಹಕ ರಾಜಕುಮಾರಿ, ಕತ್ತಲ ಕೋಣೆಯ ಕಾರಾಗೃಹ- ಹೀಗೆ ಒಂದರ ಹಿಂದೊಂದು ಅಚ್ಚರಿಗಳು ಎದುರಾಗುತ್ತವೆ.
ರಿಷಬ್ ಇವೆಲ್ಲವನ್ನೂ ದೈವದ ಸಂಕೋಲೆಯಲ್ಲಿ ಬೆಸೆದಿದ್ದಾರೆ. ಕಷ್ಟದ ಸನ್ನಿವೇಶ ಬಂದಾಗೆಲ್ಲ ದೈವ ಧಾವಿಸಿಬಂದು ನೆರವಿಗೆ ನಿಲ್ಲುತ್ತದೆ. ದೈವದ ಕೈ ಕಟ್ಟಿದಾಗ ಮನುಷ್ಯ ಅದರ ನೆರವಿಗೆ ಧಾವಿಸುತ್ತಾನೆ. ಹೀಗೆ ದೈವ-ಮನುಷ್ಯನ ಅನಾದಿಕಾಲದ ಸಂಬಂಧವನ್ನು ರಿಷಬ್ ಅನನ್ಯವಾಗಿ ಕಟ್ಟುತ್ತಾ ಹೋಗುತ್ತಾರೆ.
ಇದೊಂದು ಅದ್ಭುತ ರಮ್ಯ ಜಗತ್ತು. ಕಣ್ಣಿಗೆ ಕಾಣುವುದು ಕಾಣುತ್ತಿರುವಷ್ಟು ಹೊತ್ತು ಮಾತ್ರ ಸತ್ಯ. ಇಡೀ ರಾತ್ರಿ ಕುಳಿತು ಯಕ್ಷಗಾನ ನೋಡಿ ಬಂದ ನಂತರ, ಮಾರನೆಯ ಹಗಲಿಡೀ ಎಚ್ಚರವೋ ನಿದ್ರೆಯೋ ಗೊತ್ತಿಲ್ಲದ ಸ್ಥಿತಿಯಲ್ಲಿದ್ದಾಗ ಕಣ್ಣ ಮುಂದೆ ಯಕ್ಷಗಾನದ ಜಗತ್ತು ಮತ್ತೆ ಮಗುಚಿಕೊಳ್ಳುವ ಹಾಗೆ, ಚಿತ್ರ ನೋಡಿ ಬಂದ ನಂತರವೂ ಅದರೊಳಗಿನ ಜಗತ್ತು ಕಣ್ಮುಂದೆ ಸುಳಿಯುತ್ತಿರುತ್ತದೆ. ನಾವು ಈ ಜಗತ್ತಿಗೆ ಸೇರಿದವರೋ ಕಾಂತಾರದವರೋ ಅನುಮಾನ ಹುಟ್ಟುವಷ್ಟು ಅಲ್ಲಿಯ ಚಿತ್ರಗಳು ಕಣ್ಣಲ್ಲಿ ಕೂತಿರುತ್ತವೆ.
ಇವನ್ನೆಲ್ಲ ಕಟ್ಟುವ ಹೊತ್ತಿಗೆ ರಿಷಬ್ ಕೆಲವು ಸಂಗತಿಗಳನ್ನು ಕೈಬಿಟ್ಟಿದ್ದಾರೆ. ಅವರ ನಿರ್ದೇಶನದ ಚಿತ್ರಗಳಲ್ಲಿ ಸಿಗುವ ಮಧುರವಾದ ಹಾಡು, ಪಾರಿಜಾತ ಚೆಲ್ಲಿದಂಥ ತಿಳಿಹಾಸ್ಯ, ಮನಸ್ಸಲ್ಲಿ ಬಹುಕಾಲ ಉಳಿಯುವ ಪಾತ್ರಗಳು, ಸರಳವಾಗಿ ಸಾಗುವ ಕತೆ- ಇಲ್ಲಿ ಹುಡುಕಿದರೂ ಸಿಗಲಾರದು. ಇದು ದೈವಗಳ ಜಗತ್ತು, ಈಶ್ವರನ ಹೂದೋಟ. ನೀವು ನೋಡುವುದು ಬೆಳಕಲ್ಲ, ದರ್ಶನ.
ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಸಂಕಲನ, ಅಭಿನಯ- ಹೀಗೆ ಒಂದೊಂದೇ ವಿಭಾಗಗಳನ್ನು ಹೆಸರಿಸುತ್ತಾ ತಂತ್ರಜ್ಞರ ಕಲಾವಿದರ ಬಗ್ಗೆ ಮೆಚ್ಚುಗೆ ಸೂಚಿಸುವುದಕ್ಕೆ ಅವಕಾಶವೇ ಇಲ್ಲದಂತೆ ಇಡೀ ಚಿತ್ರವೇ ಒಂದು ಅನುಭವವಾಗಿ ನಿಂತುಬಿಡುತ್ತದೆ. ಮಳೆ ಸುರಿಯುತ್ತಿರುವ ರಾತ್ರಿ ದಟ್ಟ ಕಾಡಿನೊಳಗೆ ನಿಂತು ಮಿಂಚಿನ ಬೆಳಕಲ್ಲಿ ಸುತ್ತಲೂ ನೋಡುತ್ತಾ ನಿಂತವನಿಗೆ ಆಗುವ ಜ್ಞಾನೋದಯ, ಭಯ, ಮೋಕ್ಷ ಮತ್ತು ವೈರಾಗ್ಯವನ್ನು ಈ ಚಿತ್ರ ಕರುಣಿಸುತ್ತದೆ.