ಸಾರಾಂಶ
ಕಾಟೇರ ಸಿನಿಮಾವನ್ನು ಮುಂಜಾನೆ ಮೂರರಿಂದಲೇ ನೋಡಿದ ಜನ. ಅತ್ಯುತ್ತಮ ಪ್ರತಿಕ್ರಿಯೆ. ಮೊದಲ ದಿನವೇ ಅತ್ಯುತ್ತಮ ಕಲೆಕ್ಷನ್.
ಕನ್ನಡಪ್ರಭ ಸಿನಿವಾರ್ತೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾಗೆ ಎಲ್ಲೆಡೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ರಾಜ್ಯದ ಹೆಚ್ಚಿನೆಲ್ಲ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ. ಹಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಗುರುವಾರ ಮಧ್ಯರಾತ್ರಿಯಿಂದಲೇ ಹಲವು ಚಿತ್ರಮಂದಿರಗಳ ಮುಂಭಾಗ ಜನ ಜಾತ್ರೆ ನೆರೆದಿತ್ತು. ವಿವಿಧ ಥಿಯೇಟರ್ ಮುಂಭಾಗ ಸುಮಾರು 158 ದರ್ಶನ್ ಕಟೌಟ್‌ಗಳು ರಾರಾಜಿಸಿವೆ. ಸೂರ್ಯ ಹುಟ್ಟುವ ಮೊದಲೇ ರಾಜ್ಯದ 335 ಕಡೆ ‘ಕಾಟೇರ’ ಪ್ರದರ್ಶನ ನಡೆದಿದೆ. 21 ಕಡೆ ಮಧ್ಯರಾತ್ರಿ 12ಕ್ಕೆ ಪ್ರದರ್ಶನ ನಡೆದರೆ, ಬೆಳಗಿನ ಜಾವ 3 ಗಂಟೆಗೆ 43 ಕಡೆ, 4 ಗಂಟೆಗೆ 77 ಕಡೆ, ಬೆಳಗಿನ ಜಾವ 5 ಗಂಟೆಗೆ 89 ಕಡೆ, 6 ಗಂಟೆಗೆ 107 ಕಡೆ ಶೋ ನಡೆದಿದೆ. ಇಡೀ ದಿನ 1670 ಶೋಗಳು ನಡೆದಿರುವುದು ವಿಶೇಷ. ತುಮಕೂರಿನ ಮಾರುತಿ ಚಿತ್ರಮಂದಿರದಲ್ಲಿ ಮೂರು ದಿನಕ್ಕೆ ‘ಕಾಟೇರ’ ಚಿತ್ರದ ಎಲ್ಲಾ ಶೋಗಳು ಬುಕ್ ಆಗಿವೆ. ರಾಜ್ಯದ 389 ಥಿಯೇಟರ್‌ಗಳಲ್ಲಿ ಚಿತ್ರ ಪ್ರದರ್ಶನ ನಡೆಯುತ್ತಿದ್ದು, ಒಂದಿಷ್ಟು ಮಲ್ಟಿಪ್ಲೆಕ್ಸ್‌ಗಳಲ್ಲಿ 9 ಶೋಗಳು ಸಿಕ್ಕಿವೆ. ಬೆಂಗಳೂರಿನ ಸಿದ್ದೇಶ್ವರ ಥಿಯೇಟರ್‌ನಲ್ಲಿಮೊದಲ ಶೋ ಮಧ್ಯರಾತ್ರಿ 12 ಗಂಟೆಗೆ ಆರಂಭವಾಯಿತು. ವಿಪರೀತ ಜನ ನೆರೆದಿದ್ದರು. ಇಲ್ಲಿ ಕಾಟೇರಮ್ಮನ ಗುಡಿಯನ್ನು ನಿರ್ಮಿಸಿ ಮೂರ್ತಿ ಸ್ಥಾಪಿಸಿ ಪೂಜಿಸಿದ್ದು ವಿಶೇಷವಾಗಿತ್ತು. ಅಭಿಮಾನಿಗಳಿಂದ ಅನ್ನದಾನವೂ ನಡೆಯಿತು. ‘ಕಾಟೇರ’ ನಾಯಕಿ ಆರಾಧನಾ ತಮ್ಮ ತಾಯಿ ಮಾಲಾಶ್ರೀ ಅವರೊಂದಿಗೆ ಇಲ್ಲಿ ಅಭಿಮಾನಿಗಳ ಜೊತೆಗೆ ಸಿನಿಮಾ ವೀಕ್ಷಿಸಿದರು.