ಕೆರೆ ದಂಡೆ ಮೇಲೆ ಕೆರೆಬೇಟೆ ಚಿತ್ರ

| Published : Jan 05 2024, 01:45 AM IST / Updated: Jan 05 2024, 05:55 PM IST

ಸಾರಾಂಶ

ಗೌರಿಶಂಕರ್‌ ನಟಿಸಿ, ನಿರ್ಮಿಸಿರುವ ‘ಕೆರೆಬೇಟೆ’ ಚಿತ್ರದ ಟೀಸರ್‌ ಅನ್ನು ನಿರ್ದೇಶಕರಾದ ದಿನಕರ್‌, ಪವನ್‌ ಒಡೆಯರ್‌, ನಟ ಧನಂಜಯ್‌ ಬಿಡುಗಡೆ ಮಾಡಿದರು. ಬೆಂಗಳೂರಿನ ಕೆಂಗೇರಿ ಬಳಿ ಇರುವ ಮಲ್ಲತ್ತಹಳ್ಳಿ ಕೆರೆ ದಂಡೆ ಮೇಲೆ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ಸಿನಿವಾರ್ತೆ

ಗೌರಿಶಂಕರ್‌ ನಟಿಸಿ, ನಿರ್ಮಿಸಿರುವ ‘ಕೆರೆಬೇಟೆ’ ಚಿತ್ರದ ಟೀಸರ್‌ ಅನ್ನು ನಿರ್ದೇಶಕರಾದ ದಿನಕರ್‌, ಪವನ್‌ ಒಡೆಯರ್‌, ನಟ ಧನಂಜಯ್‌ ಬಿಡುಗಡೆ ಮಾಡಿದರು.

ಬೆಂಗಳೂರಿನ ಕೆಂಗೇರಿ ಬಳಿ ಇರುವ ಮಲ್ಲತ್ತಹಳ್ಳಿ ಕೆರೆ ದಂಡೆ ಮೇಲೆ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಯಿತು. ಇದಕ್ಕೂ ಮುನ್ನ ಸಾಗರದಿಂದ ಬಂದಿದ್ದ ಕೆರೆಬೇಟೆಗಾರರ ತಂಡದ ಜತೆಗೆ ಚಿತ್ರದ ನಾಯಕ ಗೌರಿ ಶಂಕರ್‌, ನಾಯಕಿ ಬಿಂದು ಶಿವರಾಮ್‌ ಮೀನು ಹಿಡಿದು ಕೆರೆ ದಂಡೆ ಮೇಲೆ ಸೈಕಲ್‌ ಸವಾರಿ ಮಾಡಿ ಗಮನ ಸೆಳೆದರು.

‘ಜೋಕಾಲಿ, ರಾಜಹಂಸ ಚಿತ್ರಗಳ ನಂತರ ಕೆರೆಬೇಟೆ ಮೂಲಕ ಮತ್ತೆ ನಿಮ್ಮ ಮುಂದೆ ಬರುತ್ತಿದ್ದೇನೆ. ಇದು ನಮ್ಮ ನಾಡಿನ ಹಬ್ಬದ ಕತೆ. ನಮ್ಮ ನೆಲದ ಸೊಗಡಿನ ಸಿನಿಮಾ. ಶ್ರದ್ಧೆಯಿಂದ ಸಿನಿಮಾ ಮಾಡಿದ್ದೇವೆ. ಎಲ್ಲರೂ ಸಿನಿಮಾ ನೋಡಿ’ ಎಂದು ಗೌರಿ ಶಂಕರ್‌ ಹೇಳಿದರು. 

ನಿರ್ದೇಶಕ ರಾಜ್‌ಗುರು, ‘ನಾನು ಮಲೆನಾಡಿನ ಹುಡುಗ‌. ಚಿಕ್ಕ ವಯಸ್ಸಿನಿಂದ ಕೆರೆಬೇಟೆ ನೋಡಿಕೊಂಡು ಬಂದವನು. ಈ ಕತೆಯನ್ನು ಸಿನಿಮಾ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಇದೀಗ ನನಸಾಗಿದೆ’ ಎಂದರು.

ಬಿಂದು ಶಿವರಾಮ್‌, ಸಂಪತ್, ಗೋಪಾಲ್ ದೇಶಪಾಂಡೆ, ಹರಿಣಿ ಚಿತ್ರದ ಕುರಿತು ಮಾತನಾಡಿದರು. ನಿರ್ದೇಶಕರಾದ ಗುರು ದೇಶಪಾಂಡೆ, ಜಡೇಶ್‌ ಕೆ ಹಂಪಿ, ಗುರುವೇಂದ್ರ ಶೆಟ್ಟಿ, ದೀಪಕ್‌, ಸಂತೋಷ್‌ ಕೈದಾಳ್‌ ಚಿತ್ರತಂಡಕ್ಕೆ ಶುಭ ಕೋರಿದರು.