ಸಾರಾಂಶ
ಕನ್ನಡಪ್ರಭ ಸಿನಿವಾರ್ತೆವಿಘ್ನೇಶ್, ಸಂಗೀತಾ ಭಟ್ ನಟನೆಯ ‘ಕ್ಲಾಂತ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಜ.19ಕ್ಕೆ ಬಿಡುಗಡೆಯಾಗಲಿದೆ. ವೈಭವ್ ಪ್ರಶಾಂತ್ ನಿರ್ದೇಶಕರು. ನಟ ಅಜಯ್ ರಾವ್ ಟ್ರೇಲರ್ ಅನಾವರಣ ಮಾಡಿ ಮಾತನಾಡುತ್ತಾ, ‘ಆ್ಯಕ್ಷನ್‌ನಿಂದ ಕೂಡಿದ ಟ್ರೇಲರ್ ಚೆನ್ನಾಗಿದೆ. ಪ್ರಯತ್ನಕ್ಕೂ, ಪ್ರಾರಂಭಕ್ಕೂ ಒಳ್ಳೆ ಉದ್ದೇಶ ಇದ್ದಾಗ ಗೆಲುವು ಸಿಗಬೇಕು’ ಎಂದು ಶುಭ ಹಾರೈಸಿದರು. ಪ್ರೇಮಿಗಳು ಕಾಡಿನಲ್ಲಿ ಸಿಲುಕಿಕೊಂಡು ಸಮಸ್ಯೆ ಎದುರಿಸುವ ಕಥೆ ಚಿತ್ರದ್ದು. ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ವೈಭವ್ ಪ್ರಶಾಂತ್, ‘ಕ್ಲಾಂತ ಎಂದರೆ ದೂರ ಪ್ರಯಾಣ ಅಥವಾ ಕೆಲಸ ಮುಗಿಸಿದ ಮೇಲೆ ದಣಿವಾಗಿ ಸಾಕಪ್ಪ ಎನ್ನುವ ಭಾವ. ಈ ಕಥೆಯಲ್ಲಿ ಕೊರಗಜ್ಜ ದೈವದ ಶಕ್ತಿ, ನಂಬಿಕೆ ಕುರಿತ ಎಳೆ ಇದೆ. 40 ದಿನಗಳ ಕಾಲ ಗುಂಡ್ಯ, ಸುಬ್ರಹ್ಮಣ್ಯ ಸಮೀಪದ ಕಾಡಿನಲ್ಲಿ ಶೂಟಿಂಗ್ ಮಾಡಿದ್ದೇವೆ’ ಎಂದರು. ನಾಯಕ ವಿಘ್ನೇಶ್, ‘ನನ್ನದು ಬ್ಯುಸಿನೆಸ್‌ಮ್ಯಾನ್ ಪಾತ್ರ. ಗರ್ಲ್‌ಫ್ರೆಂಡ್ ಜೊತೆಗೆ ಚಾರಣಕ್ಕೆ ಹೋದಾಗ ಏನಾಗುತ್ತದೆ ಎಂಬುದು ಕಥೆಯ ಒಂದೆಳೆ’ ಎಂದರು. ವಿಲನ್ ಪಾತ್ರ ಮಾಡಿರುವ ಸ್ವಪ್ನಾ ಶೆಟ್ಟಿ ಚಿತ್ರದಲ್ಲಿ ಫೈಟ್ ಮಾಡಿದ ಸನ್ನಿವೇಶದ ಬಗ್ಗೆ ವಿವರಿಸಿದರು. ಉದಯ್ ಅಮ್ಮಣ್ಣಾಯ ಈ ಸಿನಿಮಾ ನಿರ್ಮಿಸಿದ್ದಾರೆ.