ಸಾರಾಂಶ
ಚಂಪಾ ಶೆಟ್ಟಿ ನಿರ್ದೇಶನದ ಕೋಳಿ ಎಸ್ರು ಹಾಗೂ ಪೃಥ್ವಿ ಕೊಣನೂರು ನಿರ್ದೇಶನದ ಹದಿನೇಳೆಂಟು ಸಿನಿಮಾಗಳ ಟ್ರೇಲರ್ ಬಿಡುಗಡೆ ಮಾಡಿದ ಗಿರೀಶ್ ಕಾಸರವಳ್ಳಿ, ಗಿರೀಶ್ ರಾವ್ ಹತ್ವಾರ್ (ಜೋಗಿ)
ಕನ್ನಡಪ್ರಭ ಸಿನಿವಾರ್ತೆ
‘ಇಂದು ಸಿನಿಮಾವನ್ನು ಮಾರ್ಕೆಟಿಂಗ್ ಮಾಡುವುದು ಚಿತ್ರತಂಡಗಳ ಮೇಲಿರುವ ಬಹುದೊಡ್ಡ ಹೊಣೆಗಾರಿಕೆ. ಅದರಲ್ಲೂ ಬ್ರಿಡ್ಜ್ ಸಿನಿಮಾಗಳ ಮುಂದೆ ಬಹುದೊಡ್ಡ ಸವಾಲಿದೆ. ಸೋಷಿಯಲ್ ಮೀಡಿಯಾ ಪಾರಮ್ಯದ ಇಂದಿನ ದಿನದಲ್ಲಿ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸುವುದು ಏಕಕಾಲಕ್ಕೆ ಸುಲಭವೂ ಹೌದು, ಕಷ್ಟವೂ ಹೌದು. ಆದರೆ ಪರಸ್ಪರ ಎನ್ನುವ ವೆಬ್‌ಸೈಟ್ ಮೂಲಕ ಕೋಳಿ ಎಸ್ರು ಹಾಗೂ ಹದಿನೇಳೆಂಟು ಚಿತ್ರತಂಡಗಳು ಜನರನ್ನು ಥಿಯೇಟರಿಗೆ ಕರೆಸುವ ಪ್ರಯತ್ನ ಮಾಡಿದ್ದಾರೆ. ಇದು ಶ್ಲಾಘನೀಯ’ ಎಂದು ಕನ್ನಡ ಪ್ರಭ ಪತ್ರಿಕೆಯ ಪುರವಣಿ ವಿಭಾಗದ ಪ್ರಧಾನ ಸಂಪಾದಕ ಜೋಗಿ ಹೇಳಿದರು.ಚಂಪಾ ಶೆಟ್ಟಿ ನಿರ್ದೇಶನದ ‘ಕೋಳಿ ಎಸ್ರು’ ಹಾಗೂ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’ ಸಿನಿಮಾಗಳ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ‘ಪ್ರೇಕ್ಷಕ ಹಾಗೂ ಸಿನಿಮಾಗಳ ನಡುವಿನ ಕೊಂಡಿ ಇಂದು ಕಳಚಿದೆ. ಹಿಂದೆ ಜನ ಮನರಂಜನಾ ಪ್ರಧಾನ ಸಿನಿಮಾ ನೋಡಬೇಕಿದ್ದರೆ ಕಲಾತ್ಮಕ ಚಿತ್ರ ನೋಡುವುದು ಅನಿವಾರ್ಯವಾಗಿತ್ತು. ಇದರಿಂದ ಪ್ರೇಕ್ಷಕನ ಅರಿವು ವಿಸ್ತರಿಸುತ್ತಿತ್ತು. ಇಂದೂ ಅಂಥಾ ಅನಿವಾರ್ಯತೆ ಸೃಷ್ಟಿಯಾಗಬೇಕಿದೆ’ ಎಂದರು.‘ಕೋಳಿ ಎಸ್ರು’ ಸಿನಿಮಾ ನಿರ್ದೇಶಕಿ ಚಂಪಾ ಶೆಟ್ಟಿ, ‘ನಾವು ಪರಸ್ಪರ ಎಂಬ ವೆಬ್‌ಸೈಟ್ ಮೂಲಕ ಎರಡೂ ಚಿತ್ರಗಳ ಟಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ. 400 ರೂಪಾಯಿ ಪಾವತಿಸಿ ಎರಡು ಚಿತ್ರಗಳ ಒಂದೊಂದು ಟಿಕೆಟ್ ಪಡೆಯಬಹುದು. ಬಿಡುಗಡೆಯ ಹಿಂದಿನ ದಿನ ನಿಮಗೆ ಯಾವ ಮಲ್ಟಿಪ್ಲೆಕ್ಸ್ ಅನುಕೂಲವಾಗುತ್ತದೆಯೋ ಅಲ್ಲಿ ಟಿಕೆಟ್ ವ್ಯವಸ್ಥೆ ಮಾಡಿಕೊಡುತ್ತೇವೆ’ ಎಂದರು.
ನಿರ್ದೇಶಕ ಪೃಥ್ವಿ ಕೊಣನೂರು, ‘ಪರಸ್ಪರ ಎಂಬ ವೆಬ್‌ಸೈಟ್ ಮೂಲಕ ಚಿತ್ರೋತ್ಸವ ಆಯೋಜಿಸುವ ಪ್ಲಾನ್ ಇದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತೇವೆ’ ಎಂದು ಹೇಳಿದರು.ಕಲಾವಿದರಾದ ಅಕ್ಷತಾ ಪಾಂಡವಪುರ, ನೀರಜ್ ಮ್ಯಾಥ್ಯೂ, ಶೆರ್ಲಿನ್, ಬಾಲ ಕಲಾವಿದೆ ಅಪೇಕ್ಷಾ ಚೋರನಹಳ್ಳಿ ವೇದಿಕೆಯಲ್ಲಿದ್ದರು.