ಚಿರತೆಯ ವೇಗ, ನಿಖರತೆ, ಶಾರ್ಪ್‌ ಲುಕ್‌ ಇವೆಲ್ಲವನ್ನೂ ತನ್ನೊಳಗೆ ಬಚ್ಚಿಟ್ಟಕೊಂಡು ಬಾಲಿವುಡ್‌ ಬೆಡಗಿಯರ ಮೈಮೇಲೆ ವಿರಾಜಮಾನವಾಗಿರುವುದು ಲೆಪರ್ಡ್‌ ಪ್ರಿಂಟ್ ಸೀರೆ.

ಚಿರತೆಯ ವೇಗ, ನಿಖರತೆ, ಶಾರ್ಪ್‌ ಲುಕ್‌ ಇವೆಲ್ಲವನ್ನೂ ತನ್ನೊಳಗೆ ಬಚ್ಚಿಟ್ಟಕೊಂಡು ಬಾಲಿವುಡ್‌ ಬೆಡಗಿಯರ ಮೈಮೇಲೆ ವಿರಾಜಮಾನವಾಗಿರುವುದು ಲೆಪರ್ಡ್‌ ಪ್ರಿಂಟ್ ಸೀರೆ. ರೆಟ್ರೋ ಸ್ಟೈಲ್‌ನಲ್ಲಿ ಲೇಟೆಸ್ಟಾಗಿ ಫ್ಯಾಶನ್‌ ಜಗತ್ತಿಗೆ ಗತ್ತಿನಲ್ಲಿ ಬಂದಿರೋ ಈ ಸೀರೆಯ ನಿರ್ಮಾರ್ತೃ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಫ್ಯಾಶನ್‌ ಐಕಾನ್‌ ಸಭ್ಯಸಾಚಿ.

ದೆಹಲಿಯಲ್ಲಿ ನಡೆದ ಫ್ಯಾಶನ್‌ ಇವೆಂಟ್‌ನಲ್ಲಿ ಸಭ್ಯಸಾಚಿ ಡಿಸೈನ್‌ನ ಲೆಪರ್ಡ್‌ ಪ್ರಿಂಟ್‌ ಸೀರೆಯನ್ನುಟ್ಟ ಚಿರತೆಯಂಥಾ ಧೀರ ಲುಕ್‌ನೊಂದಿಗೆ ಬಿಂದಾಸ್‌ ಆಗಿ ಕಾಣಿಸಿಕೊಂಡಿದ್ದು ಬಾಲಿವುಡ್‌ ನಟಿ ಕರೀನಾ ಕಪೂರ್‌. ಸೀರೆಗೆ ಅವರು ತೊಟ್ಟಿದ್ದು ಡೀಪ್‌ ಕಟ್‌ ಬ್ಲೌಸ್‌. ಕತ್ತಿನ ತುಂಬ ಆವರಿಸಿ ಎದೆಯ ಮೇಲೆ ಹರವಿಬಿದ್ದ ಹೆವ್ವಿ ಜ್ಯುವೆಲ್ಲರಿ.

ಅನಿಮಲ್‌ ಪ್ರಿಂಟಿನ ಸೀರೆ ಫ್ಯಾಶನ್‌ ಜಗತ್ತಿಗೆ ಹೊಸತಲ್ಲ. 2015ರಲ್ಲೇ ಸಭ್ಯಸಾಚಿ ಅನಿಮಲ್‌ ಪ್ರಿಂಟ್‌ ಸೀರೆ ಪ್ರದರ್ಶಿಸಿ ಫ್ಯಾಶನ್‌ ಜಗತ್ತಿನಲ್ಲಿ ಥ್ರಿಲ್ ಮೂಡಿಸಿದ್ದರು. ಅದನ್ನೀಗ ಹತ್ತು ವರ್ಷಗಳ ಬಳಿಕ ‘ರೆಟ್ರೋ’ ಅನ್ನೋ ಟ್ಯಾಗ್‌ಲೈನ್‌ನಲ್ಲಿ ಮತ್ತೆ ಪ್ರದರ್ಶಿಸುತ್ತಿದ್ದಾರೆ. ಆದರೆ ಬ್ಲೌಸ್‌ ಡಿಸೈನ್‌ ಈಗ ಬೋಲ್ಡ್‌ ಆಗಿದೆ. ಆಭರಣಗಳು ಸೀರೆಯ ಅಂದ ಹೆಚ್ಚಿಸಿವೆ. ಎಲ್ಲಕ್ಕಿಂತ ಕರೀನಾ ಕಪೂರ್‌ ಅವರ ಆಟಿಟ್ಯೂಡ್‌ ಈ ಲುಕ್‌ಅನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ.

ಚಿರ ಯೌವ್ವನೆ ಶಿಲ್ಪಾ ಶೆಟ್ಟಿಯೂ ಈ ಲುಕ್‌ನಲ್ಲಿ ಕೆಲ ಸಮಯದ ಹಿಂದೆ ಕಾಣಿಸಿಕೊಂಡಿದ್ದರು. ಆದರೆ ಕರೀನಾ ಲುಕ್, ಸೀರೆ ಅದೆಲ್ಲವನ್ನೂ ಮೀರಿಸಿದೆ. ಟ್ರೆಂಡ್‌ ಸೆಟ್ಟರ್‌ ಆಗಿ ಹೊರಹೊಮ್ಮಿದೆ.