ಬಡವರಿಗೆ ಉಚಿತವಾಗಿ, ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯಲಿ

| Published : Dec 23 2023, 01:45 AM IST

ಬಡವರಿಗೆ ಉಚಿತವಾಗಿ, ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯಲಿ
Share this Article
  • FB
  • TW
  • Linkdin
  • Email

ಸಾರಾಂಶ

ಬಡವರಿಗೆ ಉಚಿತವಾಗಿ, ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯಲಿ,ಮೈಸೂರುಬಡವರಿಗೆ ಉಚಿತವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆ ದೊರೆಯಬೇಕು. ಇದು ನಮ್ಮ ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ನಗರದ ಪಿಕೆಟಿಬಿ ಅಸ್ಪತ್ರೆ ಆವರಣದಲ್ಲಿ ಮೈಸೂರು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಫೆರಿಫೆರಲ್ ಕ್ಯಾನ್ಸರ್ ಕೇಂದ್ರ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸೇರಿದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

- ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ----

ಕನ್ನಡಪ್ರಭ ವಾರ್ತೆ ಮೈಸೂರುಬಡವರಿಗೆ ಉಚಿತವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆ ದೊರೆಯಬೇಕು. ಇದು ನಮ್ಮ ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಪಿಕೆಟಿಬಿ ಅಸ್ಪತ್ರೆ ಆವರಣದಲ್ಲಿ ಮೈಸೂರು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಫೆರಿಫೆರಲ್ ಕ್ಯಾನ್ಸರ್ ಕೇಂದ್ರ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸೇರಿದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಬೆಂಗಳೂರು ನಗರವನ್ನು ಬಿಟ್ಟರೆ ಅತಿ ಹೆಚ್ಚು ಬೆಳವಣಿಗೆ ಆಗುತ್ತಿರುವ ನಗರ ಮೈಸೂರು. ಬೆಂಗಳೂರು ಮೈಸೂರು ನಡುವೆ 140 ಕಿ.ಮೀ. ಅಂತರ ಇದೆ. ಬೆಂಗಳೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಇದೆ. ಅಲ್ಲಿ ಹೆಚ್ಚಿನ ಒತ್ತಡ ಇದೆ. ಅಲ್ಲಿನ ಒತ್ತಡ ಕಡಿಮೆ ಮಾಡಲು ಜಿಲ್ಲಾ ಕೇಂದ್ರಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭ ಮಾಡಬೇಕು. ನಾನು ಡಾಕ್ಟರ್ ಆಗಬೇಕು ಎಂದು ನಮ್ಮ ತಂದೆಯ ಆಸೆ ಇತ್ತು. ನನಗೆ ಡಾಕ್ಟರ್ ಆಗುವಷ್ಟು ಅಂಕ ಬರಲಿಲ್ಲ. ನಾನು ಡಾಕ್ಟರ್ ಆಗಿದ್ದರೆ ಇಂದು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಅವರು ಸ್ಮರಿಸಿದರು.

ವೈದ್ಯ ವೃತ್ತಿಯು ಸಮಾಜ ಸೇವೆ ಮಾಡಲು ಉತ್ತಮ ವೃತ್ತಿ. ಬಡವರಿಗೆ ಉಚಿತ ಹಾಗೂ ಉತ್ತಮ ಚಿಕಿತ್ಸೆ ನೀಡಿದರೆ ಅವರು ನಿಮ್ಮನ್ನು ನೆನೆದುಕೊಳ್ಳುತ್ತಾರೆ. ಜಯದೇವ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡುತ್ತಾರೆ ಎಂದು ಜನರೇ ಹೇಳುತ್ತಾರೆ. ಅಲ್ಲಿ ಉತ್ತಮ ಸೇವೆ ಸಿಗುವಾಗ ಬೇರೆ ಆಸ್ಪತ್ರೆಗಳಲ್ಲಿ ಕೂಡ ಉತ್ತಮ ಚಿಕಿತ್ಸೆ ದೊರೆಯಬೇಕು ಎಂದರು.

ಹೃದಯ ಸಂಬಂಧಿ ಕಾಯಿಲೆಗೆ ಹಿಂದೆ ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳ ಜನರು ಬೆಂಗಳೂರಿಗೆ ಬರುತ್ತಿದ್ದರು. ಆದರೆ, ನಾನು ಇಲ್ಲಿ ಜಯದೇವ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯನ್ನು ಪ್ರಾರಂಭಿಸಿದೆ. ಮುಂದೆ ನೆಫ್ರೂ ಯುರಾಲಜಿ ಸೆಂಟರ್ ಅನ್ನು ನೀಡಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಮನುಷತ್ವ ಇರಬೇಕು. ಆಗ ಮಾತ್ರ ಬಡವರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂದರು.

ಶ್ರೀಮಂತರಲ್ಲಿ ಹಣ ಇರುತ್ತದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಮೈಸೂರು ಜಿಲ್ಲೆಗೆ ಎಲ್ಲಾ ರೀತಿಯ ಸೌಲಭ್ಯನ್ನು ಒದಗಿಸಿ ಕೊಡಲಾಗುವುದು. ಮೈಸೂರು ಪಾರಂಪರಿಕ ನಗರವಾಗಿದೆ. ನಿವೃತ್ತಿ ಆದವರು ಹೆಚ್ಚಾಗಿ ಮೈಸೂರು ನಗರದಲ್ಲಿ ವಾಸಿಸಲು ಇಷ್ಟ ಪಡುತ್ತಾರೆ ಎಂದು ಅವರು ತಿಳಿಸಿದರು.

ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಜಿಲ್ಲೆಯಿಂದ ಪ್ರತಿ ತಿಂಗಳು 10 ಸಾವಿರ ಜನ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಮೈಸೂರು ನಗರದಲ್ಲಿಯೇ ಚಿಕಿತ್ಸೆ ದೊರೆಯುವಂತೆ ಮಾಡಲು ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆಯನ್ನು ಸ್ಥಾಪಿಸಲು ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. 2 ವರ್ಷಗಳಲ್ಲಿ ಅಸ್ಪತ್ರೆ ಪ್ರಾರಂಭ ವಾಗುತ್ತದೆ. ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಗೆ ಜಿಲ್ಲಾ ಆಸ್ಪತ್ರೆ ಹಾಗೂ ಜಯದೇವ ಆಸ್ಪತ್ರೆಯನ್ನು ನೀಡಿದ್ದಾರೆ. ಮೈಸೂರಿನ ಕಿದ್ವಾಯಿ ಆಸ್ಪತ್ರೆಗೆ 5 ಎಕರೆ ಜಾಗ ನೀಡಿದ್ದು ಇದರಲ್ಲಿ ಮೊದಲ ಹಂತದಲ್ಲಿ 100 ಹಾಸಿಗೆಗಳ ಕಟ್ಟಡ ಕಟ್ಟಲಾಗುತ್ತದೆ. ಇದಕ್ಕೆ 50 ಕೋಟಿ ಹಣ ಮಂಜೂರಾಗಿದೆ. ಜಿಲ್ಲೆಗೆ ನೆಫ್ರೋ ಯುರಾಲಾಜಿ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಡಿ. ರವಿಶಂಕರ್, ಅನಿಲ್ ಚಿಕ್ಕಮಾದು, ಮರಿತಿಬ್ಬೇಗೌಡ, ಸಿ.ಎನ್. ಮಂಜೇಗೌಡ, ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಡಾ. ಯತಿಂದ್ರ ಸಿದ್ದರಾಮಯ್ಯ, ಕಿದ್ವಾಯಿ ಸಂಸ್ಥೆ ನಿರ್ದೇಶಕಿ ಡಾ. ಲೋಕೇಶ್ ಮೊದಲಾದವರು ಇದ್ದರು.