ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ‘ಮಾರ್ಕ್‌’ ಚಿತ್ರದ ಟ್ರೇಲರ್‌ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಟ್ರೇಲರ್‌ಗೆ ಕೆಲವೇ ಗಂಟೆಗಳಲ್ಲಿ ಕನ್ನಡದಲ್ಲಿ 1 ಕೋಟಿ 30 ಲಕ್ಷ, ತೆಲುಗು ಮತ್ತು ತಮಿಳಿನಲ್ಲಿ 15 ಲಕ್ಷ ವೀಕ್ಷಣೆ ಗಳಿಸಿದೆ.

 ಸಿನಿವಾರ್ತೆ

ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ‘ಮಾರ್ಕ್‌’ ಚಿತ್ರದ ಟ್ರೇಲರ್‌ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಟ್ರೇಲರ್‌ಗೆ ಕೆಲವೇ ಗಂಟೆಗಳಲ್ಲಿ ಕನ್ನಡದಲ್ಲಿ 1 ಕೋಟಿ 30 ಲಕ್ಷ, ತೆಲುಗು ಮತ್ತು ತಮಿಳಿನಲ್ಲಿ 15 ಲಕ್ಷ ವೀಕ್ಷಣೆ ಗಳಿಸಿದೆ.

ತಮಿಳು ನಟ ಯೋಗಿಬಾಬು, ಮಲಯಾಳಂನ ಶೈನ್‌ ಟಾಮ್ ಚಾಕೋ ಸೇರಿದಂತೆ ಸ್ಟಾರ್‌ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ವಿಜಯ್ ಕಾರ್ತಿಕೇಯ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರನ್ನು ಬೆಂಗಳೂರಿನ ವೀರೇಶ್‌, ಮೈಸೂರಿನ ಗಾಯತ್ರಿ, ದಾವಣಗೆರೆಯ ತ್ರಿಶೂಲ್‌, ಶಿವಮೊಗ್ಗದ ಮಲ್ಲಿಕಾರ್ಜುನ್‌, ಚಾಮರಾಜನಗರದ ಸಿದ್ಧಾರ್ಥ್‌ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಪ್ರದರ್ಶನ ಮಾಡಲಾಯಿತು.

ಬೆಂಗಳೂರಿನಲ್ಲಿ ಆಯೋಜಿಸಿದ್ದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಸುದೀಪ್‌ ಹೇಳಿದ ಮಾತುಗಳು ಇಲ್ಲಿವೆ.

1. ಈ ಚಿತ್ರಕ್ಕೆ ನಾನು 166 ಕಾಲ್‌ಶೀಟ್‌ ಕೊಟ್ಟಿದ್ದೇನೆ. ಆದರೆ 80 ರಿಂದ 90 ಸ್ಥಳಗಳಲ್ಲಿ 107 ದಿನ ಚಿತ್ರೀಕರಣ ಮಾಡಿದ್ದೇವೆ. ಸುಮಾರು 18 ರಿಂದ 20 ಸೆಟ್​​ಗಳನ್ನು ಹಾಕಿದ್ದೇವೆ. ಈ ಚಿತ್ರ ಆರಂಭವಾದಾಗಿನಿಂದಲೂ ಕೊನೆವರೆಗೂ ವಿವಿಧ ವಿಭಾಗಗಳಲ್ಲಿ ಸುಮಾರು ಒಂದು ಲಕ್ಷ ಜನ ಕೆಲಸ ಮಾಡಿದ್ದಾರೆ.

2. ಈ ಚಿತ್ರಕ್ಕಾಗಿ ನಾವು ಎಲ್ಲವನ್ನೂ ದೊಡ್ಡ ಪ್ರಮಾಣದಲ್ಲೇ ಮಾಡಿದ್ದೇವೆ. ಆದರೆ, ನಿದ್ದೆ ಮಾತ್ರ ಕಡಿಮೆ ಮಾಡಿದ್ದೇವೆ. ವಿಶ್ರಾಂತಿ ಕೂಡ ಕಡಿಮೆ ಮಾಡಿದ್ದೇವೆ. ಕೆಲವೊಮ್ಮೆ ಬೆಳಗಿನ ಜಾವ ಮೂರು ಗಂಟೆವರೆಗೂ ಚಿತ್ರೀಕರಣ ಮಾಡಿದ್ದೇವೆ. ನಾನು ಮೂರು ಗಂಟೆಗೆ ಶೂಟಿಂಗ್‌ ಮುಗಿಸಿಕೊಂಡು ಸೆಟ್‌ನಿಂದ ಹೊರಡುವಾಗ ಮತ್ತೊಂದು ಬ್ಯಾಚ್‌ ಬರುತ್ತಿತ್ತು. ಹೀಗೆ ನಿರಂತರವಾಗಿ ಕೆಲಸ ಮಾಡಿದ್ದಕ್ಕೆ ಶೂಟಿಂಗ್‌ ಬೇಗ ಮುಗಿದಿದೆ.

ಇಬ್ಬರು ನಿಜವಾದ ನಾಯಕರು

3. ಈ ಚಿತ್ರಕ್ಕೆ ಇಬ್ಬರು ನಿಜವಾದ ನಾಯಕರು. ಒಬ್ಬರು ಕ್ಯಾಮೆರಾಮ್ಯಾನ್‌ ಶೇಖರ್‌ ಚಂದ್ರ, ಮತ್ತೊಬ್ಬರು ನಿರ್ದೇಶಕ ವಿಜಯ್‌ ಕಾರ್ತಿಕೇಯ. ಈ ಇಬ್ಬರೂ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ.

4. ನನಗೆ ಕೆಲಸ ಮಾಡುವುದು ಇಷ್ಟ. ಕೆಲಸ ಮಾಡಿ ದಣಿಯುವುದು ಮತ್ತಷ್ಟು ಇಷ್ಟ. ನಿಜವಾಗಲೂ ತೃಪ್ತಿ ಸಿಗುವುದು ಕೆಲಸದಲ್ಲಿ ಮತ್ತು ನನ್ನ ನಿರ್ಮಾಪಕರ ಮುಖದಲ್ಲಿ ಕಾಣುವ ಖುಷಿಯಲ್ಲಿ. ನನ್ನ ಸಿನಿಮಾಗಳಿಂದ ನನ್ನ ನಿರ್ಮಾಪಕರ ಜೇಬು ತುಂಬಿದರೆ ಅದೇ ನನಗೆ ನಿಜವಾದ ಖುಷಿ.

5. ‘ಮಾರ್ಕ್’ ಸಿನಿಮಾ ಡಿ.25ಕ್ಕೆ ಅದ್ದೂರಿಯಾಗಿ ತೆರೆಗೆ ಬರಲಿದೆ. ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದೇನೆ.