ಸಾರಾಂಶ
ಸಿನಿವಾರ್ತೆ
ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಟೈಟಲ್ ಹಾಗೂ ಟೀಸರ್ ಬಿಡುಗಡೆಯಿಂದಲೇ ಕುತೂಹಲ ಮೂಡಿಸಿದ್ದ ಸಿನಿಮಾ ಇದು. ಮಾಸ್ ಹಾಗೂ ಆ್ಯಕ್ಷನ್ ಜಾನರಿನ ಈ ಚಿತ್ರ ಯಾವಾಗ ತೆರೆ ಮೇಲೆ ಬರಲಿದೆ ಎಂದು ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಕ್ರಿಸ್‌ಮಸ್ ರಜೆ ಸಂದರ್ಭದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು, ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ವಿಶ್ವಾದ್ಯಂತ ಸಿನಿಮಾ ತೆರೆಗೆ ಬರಲಿದೆ. ಡಿ.20ರಂದು ಉಪೇಂದ್ರ ನಟನೆ, ನಿರ್ದೇಶನದ ‘ಯುಐ’ ರಿಲೀಸ್ ಆಗಲಿದ್ದು, ಡಿ.25ರಂದು ಸುದೀಪ್ ಬರಲಿದ್ದಾರೆ. ಐದು ದಿನಗಳ ಅಂತರದಲ್ಲಿ ಎರಡು ಸ್ಟಾರ್ ಸಿನಿಮಾ ಬರುತ್ತಿದೆ.
ಕಲೈಪುರಿ ಎಸ್ ಧನು ನಿರ್ಮಾಣದ ‘ಮ್ಯಾಕ್ಸ್’ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದಾರೆ. ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತಾ ಹೊರನಾಡು, ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.