ಜನರನ್ನು ಪ್ರಭಾವಗೊಳಿಸುವ ಸಿನಿಮಾಗಳು ಅವಶ್ಯ: ಡಾ.ನಿಂಗರಾಜ್‌ಗೌಡ

| Published : Dec 16 2023, 02:00 AM IST

ಜನರನ್ನು ಪ್ರಭಾವಗೊಳಿಸುವ ಸಿನಿಮಾಗಳು ಅವಶ್ಯ: ಡಾ.ನಿಂಗರಾಜ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಜನರನ್ನು ಪ್ರಭಾವಗೊಳಿಸುವ ಸಿನಿಮಾಗಳು ಅವಶ್ಯ, ಹಾಗೇ ಸದಭಿರುಚಿಯ ಚಲನಚಿತ್ರಗಳು ಜನಸಾಮಾನ್ಯರು ಪ್ರಭಾವಗೊಳಿಸಿ, ಪ್ರೇರಪಿಸುತ್ತವೆ: ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಮಂಡ್ಯ

ಜನಸಾಮಾನ್ಯರನ್ನು ಪ್ರಭಾವಗೊಳಿಸಿ ಪ್ರೇರೇಪಿಸುವಂತಹ ಸದಭಿರುಚಿಯ ಚಿತ್ರಗಳು ಮೂಡಿಬರಬೇಕು. ಆಗ ಕನ್ನಡ ಚಿತ್ರರಂಗದ ನೆಲಗಟ್ಟು ಇನ್ನಷ್ಟು ಸುಭದ್ರಗೊಳ್ಳುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್‌ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಜಯಲಕ್ಷ್ಮಿ ಚಿತ್ರಮಂದಿರದಲ್ಲಿ ತೆರೆಕಂಡ ನೇಗಿಲ ಧರ್ಮ ಚಲನಚಿತ್ರದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಬಂಗಾರದ ಮನುಷ್ಯ ಸಿನಿಮಾದಿಂದಾಗಿ ಎಷ್ಟೋ ಜನ ಪದವೀಧರರು ಕೃಷಿಯತ್ತ ಮರಳಿದರು. ಆ ಚಿತ್ರದ ನಾಯಕನ ಹೆಸರಾದ ರಾಜೀವಪ್ಪನ ಹೆಸರನ್ನು ಗ್ರಾಮೀಣ ಪ್ರದೇಶದ ಜನರು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದರು. ಈಗ ಹಳ್ಳಿ ಹಳ್ಳಿಗಳಲ್ಲೂ ರಾಜೀವ ಎನ್ನುವ ಹೆಸರು ಸಿಗಲೂ ಪ್ರಚಲಿತದಲ್ಲಿದೆ. ಇದಕ್ಕೆ ಡಾ.ರಾಜ್ ಕುಮಾರ್ ಅಭಿನಯದ ಬಂಗಾರ ಮನುಷ್ಯ ಚಲನಚಿತ್ರವೇ ಕಾರಣ. ಹಾಗಾಗಿ ಸದಭಿರುಚಿಯ ಚಲನಚಿತ್ರಗಳು ಜನಸಾಮಾನ್ಯರನ್ನೂ ಪ್ರಭಾವಗೊಳಿಸಿ, ಪ್ರೇರಪಿಸುತ್ತವೆ. ಇದಕ್ಕೆ ಸನಾದಿ ಅಪ್ಪಣ್ಣ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳ ಉದಾಹರಣೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕೇವಲ ಹೊಡಿಬಡಿ, ಕಥೆಯೇ ಇಲ್ಲದ ಸಿನಿಮಾಗಳ ನಡುವೆ ಗ್ರಾಮೀಣ ಸೊಗಡಿನ ರೈತರ ಬದುಕು ಹಾಗೂ ಗ್ರಾಮೀಣರ ಜೀವನವನ್ನೇ ಎಳೆಯಾಗಿಟ್ಟುಕೊಂಡು ತಯಾರಿಸಿರುವ ನೇಗಿಲಧರ್ಮ ಚಲನಚಿತ್ರ ನಿಜಕ್ಕೂ ಸಮಾಜಕ್ಕೆ ಒಂದು ಸಂದೇಶ ತಲುಪಿಸುವ ಸಿನಿಮಾವಾಗಿದೆ ಎಂದು ಪ್ರಶಂಶಿಸಿದರು.

ಚಿತ್ರವೊಂದಕ್ಕ ಕೋಟ್ಯಂತರ ರು. ಹಣ ಖರ್ಚು ಮಾಡಿ ಪ್ಯಾನ್ ಇಂಡಿಯಾ ರೀತಿಯ ಸಿನಿಮಾ ಮಾಡಿ ಕೈಸುಟ್ಟುಕೊಳ್ಳುವ ನಿರ್ಮಾಪಕರೇ ಹೆಚ್ಚಿದ್ದಾರೆ. ಇವರ ನಡುವೆ ತಮ್ಮ ಸೊಗಡಿನಲ್ಲಿ ರೂಪಿಸಿದ ಕಾಂತಾತ ದೇಶವೇ ಮೆಚ್ಚುವ ರೀತಿಯಲ್ಲಿ ದೊಡ್ಡ ಯಶಸ್ವಿ ಸಿನಿಮಾವಾಯಿತು. ಆ ಸಿನಿಮಾ ಮಾದರಿಯಲ್ಲೇ ನೇಗಿಲ ಧರ್ಮ ಯಶಸ್ಸು ಕಾಣಲೆಂದು ಆಶಿಸಿದರು.

ವಿಶ್ವಮಾನವ ಸಂದೇಶವನ್ನು ಜಗತ್ತಗೆ ನೀಡಿದ ರಾಷ್ಟ್ರಕವಿ ಕುವೆಂಪುರವರು ತಮ್ಮ 26ನೇ ವಯಸ್ಸಿನಲ್ಲಿಯೇ ಕೊಳಲು ಕವನ ಸಂಕಲನದಲ್ಲಿ “ನೇಗಿಲ ಯೋಗಿ” ಕವಿತೆಯನ್ನು ಬರೆದಿದ್ದರು. ಈ ಕವಿತೆಯಲ್ಲಿ ಕೃಷಿಯ ಮಹತ್ವ, ರೈತ ಧರ್ಮ, ಸೈನಿಕನ ಕರ್ತವ್ಯ, ನೇಗಿಲ ಧರ್ಮ ಸೇರಿದಂತೆ ಎಲ್ಲವನ್ನೂ ಒಳಗೊಂಡಿತ್ತು. ಈ ನೇಗಿಲ ಯೋಗಿ ಗೀತೆಯನ್ನೂ 1983 ರಲ್ಲಿ ತೆರೆಕಂಡ ಕಾಮನಬಿಲ್ಲು ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಯಿತು. ರಾಜ್ಯ ಸರ್ಕಾರವೂ ಈ ಗೀತೆಯನ್ನೂ ರೈತಗೀತೆಯನ್ನಾಗಿ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಚಿತ್ರದ ನಿರ್ದೇಶಕ ಎಸ್.ಕೃಷ್ಣಸ್ವರ್ಣಸಂದ್ರ ಮಾತನಾಡಿ, ಮಂಡ್ಯ, ಮೈಸೂರು ಭಾಗದಲ್ಲೇ ನಿರ್ಮಾಣಗೊಂಡಿರುವ ನೇಗಿಲಧರ್ಮ ಚಿತ್ರವು ಇಂದು ಮಂಡ್ಯ ನಗರದ ಜಯಲಕ್ಷ್ಮೀ ಚಿತ್ರಮಂದಿರ, ಮೈಸೂರಿನ ಬಾಲಾಜಿ, ಕೆ.ಎಂ.ದೊಡ್ಡಿಯ ಸುಮಾ, ಶ್ರೀರಂಗಪಟ್ಟಣದ ಶ್ರೀದೇವಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ತೆರೆ ಕಂಡಿದ್ದು, ಸಿನಿಮಾವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಹಿರಿಯ ಪತ್ರಕರ್ತ ಮತ್ತೀಕೆರೆ ಜಯರಾಮ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯ ಹೆಸರನ್ನು ಕೆಲ ಸಿನಿಮಾಗಳಲ್ಲಿ ಜನಪ್ರಿಯತೆಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಹೆಸರೇಳುವಂತೆ ಈ ಭಾಗದ ಸೊಗಡನ್ನು ಚಿತ್ರದಲ್ಲಿ ತೋರಿಸುವಲ್ಲಿ ಕೆಲ ಚಿತ್ರ ನಿರ್ದೇಶಕರು ವಿಫಲವಾಗಿದ್ದಾರೆ. ಆದರೆ ನೇಗಿಲಧರ್ಮ ಚಿತ್ರವು ಮಂಡ್ಯ ಸೊಗಡಿನಲ್ಲೇ ನಿರ್ಮಾಣವಾಗಿ ಈ ಭಾಗದ ಜನರ ಸಮಸ್ಯೆಗಳ ಕುರಿತಂತೆ ಬಹಳ ಚೆನ್ನಾಗಿ ಕಥೆಯನ್ನು ನಿರೂಪಿಸಿದ್ದಾರೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಚಿತ್ರದ ನಾಯಕ ನಟ ಮದನ್‌ಗೌಡ, ಜಿ.ಪಂ. ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪತ್ರಕರ್ತರಾದ ಸೋಮಶೇಖರ್ ಕೆರಗೋಡು, ಕೆ.ಎನ್.ನವೀನ್‌ಕುಮಾರ್, ಜೆ.ಎಂ.ಬಾಲಕೃಷ್ಣ, ಆನಂದ್, ಜಯಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಶಂಕರೇಗೌಡ, ಮುಖಂಡರಾದ ಎಂ.ಆರ್.ಮAಜುನಾಥ್, ಮಂಗಲ ಯೋಗೇಶ್, ರಾಮೇಗೌಡ ಇತರರಿದ್ದರು

ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ಮದನ್‌ಗೌಡ, ಜಿ.ಪಂ. ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪತ್ರಕರ್ತರಾದ ಸೋಮಶೇಖರ್ ಕೆರಗೋಡು, ಕೆ.ಎನ್.ನವೀನ್‌ಕುಮಾರ್, ಜೆ.ಎಂ.ಬಾಲಕೃಷ್ಣ, ಆನಂದ್, ಜಯಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಶಂಕರೇಗೌಡ, ಮುಖಂಡರಾದ ಎಂ.ಆರ್.ಮಂಜುನಾಥ್, ಮಂಗಲ ಯೋಗೇಶ್, ರಾಮೇಗೌಡ ಇತರರಿದ್ದರು.