ಸಾರಾಂಶ
ಯೋಗರಾಜ್ ಭಟ್ ನಿರ್ದೇಶನದಲ್ಲಿ, ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ‘ಹಲೋ 1 2 3’ ಚಿತ್ರದ ಮುಹೂರ್ತ ನಡೆದಿದೆ.
ಸಿನಿವಾರ್ತೆ : ಯೋಗರಾಜ್ ಭಟ್ ನಿರ್ದೇಶನದಲ್ಲಿ, ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ‘ಹಲೋ 1 2 3’ ಚಿತ್ರದ ಮುಹೂರ್ತ ನಡೆದಿದೆ. ಚಿತ್ರದ ನಾಯಕ, ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ನಿರ್ಮಾಪಕ ವಿಜಯ್ ಟಾಟಾ ಅವರು ಅಡ್ವಾನ್ಸ್ ಕೊಡುವ ಮೂಲಕ ಚಿತ್ರವನ್ನು ಘೋಷಣೆ ಮಾಡಿದ್ದು ವಿಶೇಷವಾಗಿತ್ತು.
ಯೋಗರಾಜ್ ಭಟ್, ‘ನಾನು ಅಮೆರಿಕ ಪ್ರವಾಸ ಹೊರಟಿದ್ದೇನೆ. ಹೀಗಾಗಿ ಒಳ್ಳೆಯ ದಿನ ಎನ್ನುವ ಕಾರಣಕ್ಕೆ ದಿಢೀರ್ ಎಂದು ಚಿತ್ರಕ್ಕೆ ಚಾಲನೆ ನೀಡಿದ್ದೇವೆ. ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕತೆ ಇದು. ರೊಮ್ಯಾಂಟಿಕ್ ಪ್ರೇಮ ಕತೆಯನ್ನು ಈ ಚಿತ್ರ ಮೂಲಕ ಹೇಳುತ್ತಿದ್ದೇವೆ. ಕತೆಗೆ ಸೂಕ್ತ ಎನ್ನುವ ಕಾರಣಕ್ಕೆ ‘ಹಲೋ 1 2 3’ ಎನ್ನುವ ಹೆಸರು ಇಟ್ಟಿದ್ದೇವೆ’ ಎಂದರು.
ಭುವನ್ ಪೊನ್ನಣ್ಣ, ‘ರಾಂಧವ ಚಿತ್ರದ ನಂತರ ಬರುತ್ತಿದ್ದೇನೆ. ಆ ಚಿತ್ರಕ್ಕೂ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿ ಗೆಲ್ಲಿಸಿದ ಪ್ರೇಕ್ಷಕರು, ‘ಹಲೋ 1 2 3’ ಚಿತ್ರವನ್ನು ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ’ ಎಂದರು.
ಅಕ್ಟೋಬರ್ ತಿಂಗಳಿನಿಂದ ಚಿತ್ರೀಕರಣ ನಡೆಯಲಿದೆ. ನಟಿ ಹರ್ಷಿಕಾ ಪೂಣಚ್ಚ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ, ನಿರ್ಮಾಪಕ ವಿಜಯ್ ಟಾಟಾ, ಅಮೃತಾ ವಿಜಯ್ ಟಾಟಾ ಇದ್ದರು.