ಹುಣಸೂರು ಎಪಿಎಂಸಿ ಬಳಿ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ

| Published : Dec 23 2023, 01:47 AM IST / Updated: Dec 23 2023, 12:39 PM IST

ಸಾರಾಂಶ

ಹುಣಸೂರು ಪಟ್ಟಣದ ಎಪಿಎಂಸಿ ಬಳಿ ಡಿ. 19ರ ರಾತ್ರಿ ಕೊಲೆಯಾದ ವ್ಯಕ್ತಿ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕನ್ನಡಪ್ರಭ ವಾರ್ತೆ ಹುಣಸೂರು

ಪಟ್ಟಣದ ಎಪಿಎಂಸಿ ಬಳಿ ಡಿ. 19 ರಾತ್ರಿ ಕೊಲೆಯಾದ ವ್ಯಕ್ತಿಯನ್ನು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ.

ಕೊಲೆಯಾದವರು ಕೊಡಗಿನ ಪಾಲಿಬೆಟ್ಟದ ಲೇಟ್ ಕಾಳಪ್ಪ ಅವರ ಪುತ್ರ ಚಂಗಪ್ಪ (52) ಎಂದು ಗುರುತಿಸಲಾಗಿದೆ, ಹಣಕ್ಕಾಗಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ಮೃತ ಚಂಗಪ್ಪನಿಗೆ ಕೊಡಗಿನ ಪಾಲಿಬೆಟ್ಟಕ್ಕೆ 9 ಕಿ.ಮಿ ಸಮೀಪದಲ್ಲಿ ಯಾಡಿಯುರಿನಲ್ಲಿ 11 ಎಕರೆ ಕಾಫಿ ತೋಟ ಹಾಗೂ 5 ಎಕರೆ ಗದ್ದೆವುಳ್ಳ ಶಾಂತಿ ಬಿಬಿ ಏಸ್ಟೇಟ್ ಇದ್ದು, ಇದನ್ನು ಬೇರೆಯವರಿಗೆ ಲೀಸ್ ಗೆ ನೀಡಿ ಬೆಂಗಳೂರಿನಲ್ಲಿ ವಾಸವಿದ್ದರು. ಅಲ್ಲದೆ ಕಳೆದ ಹದಿನೈದು ವರ್ಷಗಳ ಹಿಂದೆಯೆ ಇವರ ಪತ್ನಿ ಸವಿತಾ ಅವರು ಇವರಿಂದ ವಿವಾಹ ವಿಚ್ಚೇದನ ಪಡೆದು ಅವರು ಸಹ ಬೆಂಗಳೂರಿನಲ್ಲಿ ವಾಸವಿದ್ದಾರೆಂದು ತಿಳಿದು ಬಂದಿದೆ.

ಮೃತ ಚಂಗಪ್ಪ ಡಿ. 19ರಂದು ವಿರಾಜಪೇಟೆ ಹತ್ತಿರದ ಅಮ್ಮತ್ತಿ ಸಮೀಪದಲ್ಲಿನ ಯಾಡಿಯುರು ಗ್ರಾಮದಲ್ಲಿ ತಂಗಿ ಗಂಡನ ಸಾವಿನ ಅಂತ್ಯಕ್ರಿಯೆಗೆ ಬೆಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಸ್ನೇಹಿತನೊಂದಿಗೆ ಬಂದು ಅಂತ್ಯಕ್ರಿಯೆ ಮುಗಿಸಿಕೊಂಡು ಮಂಗಳವಾರ ಡಿ. 19ರಂದು ರಾತ್ರಿಯೆ ವಾಪಸ್ ಬೆಂಗಳೂರಿಗೆ ಹೋಗುವಾಗ ಹುಣಸೂರಿನಲ್ಲಿ ರಾತ್ರಿ 1 ರಿಂದ 2ರ ಸಮಯದಲ್ಲಿ ಕೊಲೆಯಾಗಿದ್ದಾರೆ. ಇವರ ಜೊತೆಯಲ್ಲಿ ಬಂದಿದ್ದ ಸ್ನೇಹಿತ ಯಾರೆಂಬುದು ತಿಳಿದಿಲ್ಲ. ಹಾಗೂ ಬಾಡಿಗೆ ಕಾರು ಮತ್ತು ಚಾಲಕ ಸಹ ಯಾರು ಎಂದು ತಿಳಿದು ಬಂದಿಲ್ಲ.

ಕೊಲೆಯಾಗಿರುವ ಬಗ್ಗೆ ಮಾಹಿತಿ ತಿಳಿದು ಪಾಲಿಬೆಟ್ಟದ ಪಿ.ಕೆ. ಮುತ್ತಪ್ಪ ಅವರು ಮೈಸೂರಿನ ಶೈತಗಾರಕ್ಕೆ ತೆರಳಿ ಮೃತದೇಹವನ್ನು ನೋಡಿ ಇದು ನನ್ನ ತಮ್ಮ ಚಂಗಪ್ಪ ಎಂದು ಗುತಿಸಿದ್ದಾರೆ. ಹುಣಸೂರು ಪಟ್ಟಣ ಪೊಲೀಸರು ಮೃತರ ಅಣ್ಣ ಮುತ್ತಪ್ಪ ಅವರಿಂದ ಮಾಹಿತಿ ಪಡೆದು ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ನೀಡಿದ್ದಾರೆ.

ಎಸ್.ಪಿ ಅವರ ಸೂಚನೆ ಮೇರೆಗೆ ಹೆಚ್ಚುವರಿ ಎಸ್ಪಿ ಡಾ. ನಂದಿನಿ ಅವರ ನಿರ್ದೇಶನದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಹುಣಸೂರು ಪೋಲಿಸರ ತಂಡ ಮೃತರ ಅಣ್ಣ ಮುತ್ತಪ್ಪ ಅವರಿಂದ ಮಾಹಿತಿ ಪಡೆದು, ಆರೋಪಿಯ ಪತ್ತೆ ಕಾರ್ಯ ಮುಂದುವರೆಸಿದ್ದಾರೆ.