ನಿಮ್ಮ ಚಿತ್ರ ಸೂಪರ್‌ಹಿಟ್‌ ಮಾಡುವುದು ನಿಮ್ಮಕೈಯಲ್ಲೇ ಇದೆ: ರಮೇಶ್ ಅರವಿಂದ್

| Published : Dec 31 2023, 01:30 AM IST / Updated: Jan 03 2024, 01:20 PM IST

Ramesh Aravind
ನಿಮ್ಮ ಚಿತ್ರ ಸೂಪರ್‌ಹಿಟ್‌ ಮಾಡುವುದು ನಿಮ್ಮಕೈಯಲ್ಲೇ ಇದೆ: ರಮೇಶ್ ಅರವಿಂದ್
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ವರ್ಷದ ಕನಸು ಕನವರಿಕೆಗಳು ಹಾಗೂ ಸ್ಫೂರ್ತಿಯ ಮಾತುಗಳು

ನಿಮ್ಮ ಚಿತ್ರ ಸೂಪರ್‌ಹಿಟ್‌ ಮಾಡುವುದು ನಿಮ್ಮಕೈಯಲ್ಲೇ ಇದೆ

- ರಮೇಶ್ ಅರವಿಂದ್

ಮತ್ತೆ ಹೊಸ ವರ್ಷ ಬಂತು. ಏನೇನು ಮಾಡಬೇಕು ಅಂದುಕೊಂಡಿದ್ದೀರಿ? ಹೊಸ ವರ್ಷದ ಮೊದಲ ಮೂರು ತಿಂಗಳ ಪ್ಲಾನ್ ಏನು? ಆಮೇಲೆ ಏಪ್ರಿಲ್, ಮೇ, ಜೂನ್‌, ಮೂರನೇ ತ್ರೈಮಾಸಿಕ, ಕಡೆಯ ಮೂರು ತಿಂಗಳು ಹೀಗೆ ಆಯಾಯ ಕಾಲದಗಲ್ಲಿ ಏನೆಲ್ಲಾ ಮಾಡುತ್ತೀರಿ?

ನಾನೊಂದು ವಿಷಯ ಹೇಳಲೇ. ಜನವರಿ ಒಂದರಂದು ವರ್ಷದ ಮೊದಲ ದಿನ, ಆ ಒಂದು ದಿನ ಮಾಡುವಂತಹ ಎಲ್ಲಾ ಕೆಲಸಗಳನ್ನೂ ಅತ್ಯುತ್ತಮವಾಗಿ, ಸ್ವಲ್ಪವೂ ಕೊರಗದೆ, ಹ್ಯಾಪ್ಪಿಯಾಗಿ, ನಗ್‌ನಗ್ತಾ, ಮನಸ್ಫೂರ್ತಿಯಾಗಿ, ಪ್ರತೀ ಕ್ಷಣವನ್ನೂ ತೊಡಗಿಸಿಕೊಂಡು ಮಾಡಿ. ಎರಡನೇ ದಿನವೂ ಅದನ್ನೇ ಮಾಡಿ. ಮೂರನೇ ದಿನವೂ ಅದೇ ಥರ. ಆಮೇಲೆ ಪ್ರತೀ ದಿನ. ಆಗ ನೋಡಿ ನಿಮ್ಮ ಹೊಸ ವರ್ಷ ಹೇಗಿರುತ್ತದೆ ಅಂತ. ಇಡೀ ಜೀವನದ ಅತ್ಯುತ್ತಮ ವರ್ಷವಾಗಿ 2024 ಮಾರ್ಪಾಡಾಗುತ್ತದೆ.

ಆ ಒಂದು ದಿನವನ್ನು ಹೇಗೆ ಕಳೆಯಬಹುದು ಎಂದು ಯೋಚಿಸುತ್ತಿದ್ದೀರಾ. ಒಬ್ಬ ಸಿನಿಮಾ ವ್ಯಕ್ತಿಯಾಗಿ ಯೋಚನೆ ಮಾಡಿ. ಚಿತ್ರರಂಗದಲ್ಲಿರುವವರು ಹೇಗೆ ಯೋಚನೆ ಮಾಡುತ್ತಾರೋ ಆ ಥರ ಯೋಚನೆ ಮಾಡಿ. ಒಬ್ಬ ಕ್ಯಾಮೆರಾಮನ್ ಥರ ಯೋಚನೆ ಮಾಡಿ. ಕ್ಯಾಮರಾಮನ್‌ ಏನು ಯೋಚನೆ ಮಾಡುತ್ತಾನೆ ಎಂದರೆ ಪ್ರತಿಯೊಂದು ಫ್ರೇಮನ್ನೂ ಚೆಂದವಾಗಿ ಇರುವಂತೆ ನೋಡಿಕೊಳ್ಳುತ್ತಾನೆ. ಅದೇ ಥರ ಪ್ರತೀ ಕ್ಷಣವನ್ನೂ ಸೌಂದರ್ಯ ಪ್ರಜ್ಞೆಯಿಂದ ತುಂಬಿರುವ ಹಾಗೆ ನೋಡಿಕೊಳ್ಳಿ. ಒಬ್ಬ ಸಂಗೀತ ನಿರ್ದೇಶಕನ ಥರ ಯೋಚನೆ ಮಾಡಿದರೆ ಆತ ಸಿನಿಮಾದಲ್ಲಿರುವ ಪ್ರತಿಯೊಂದು ಮುಖ್ಯವಾದ ಅಂಶಗಳನ್ನೂ ಸಂಗೀತದ ಮೂಲಕ ಅಂಡರ್‌ಲೈನ್‌ ಮಾಡುತ್ತಾರೆ. ನಿಮ್ಮ ಜೀವನದಲ್ಲಿ ಅಗತ್ಯವಾದ ವಿಷಯಗಳಿವೆಯೋ ಅದನ್ನು ಅಂಡರ್‌ಲೈನ್‌ ಮಾಡಿ. ಅವುಗಳಿಗೆ ಜಾಸ್ತಿ ಒತ್ತು ಕೊಡಿ, ಗಮನ ಕೊಡಿ, ಸಮಯ ಕೊಡಿ.ಒಬ್ಬ ನಾಯಕ ನಟ ಅಥವಾ ನಾಯಕ ನಟಿಯಂತೆ ಯೋಚನೆ ಮಾಡಿದರೆ ಅವರು ಅವರವರ ಪಾತ್ರಕ್ಕೆ ತಕ್ಕಂತೆ ವರ್ತಿಸಬೇಕು. ನಿಮಗೂ ಜೀವನದಲ್ಲಿ ಬೇರೆ ಬೇರೆ ಪಾತ್ರಗಳಿವೆ. ಅಣ್ಣನ ಪಾತ್ರ ಇರಬಹುದು, ಗಂಡನ ಪಾತ್ರ ಆಗಿರಬಹುದು, ತಂಗಿ, ಗೆಳತಿ, ಬಾಸ್ ಹೀಗೆ ಪಾತ್ರಗಳಿರಬಹುದು. ನಿಮ್ಮ ಜೀವನದಲ್ಲಿ ಆ ಎಲ್ಲಾ ಪಾತ್ರಗಳನ್ನೂ ಒಬ್ಬರೇ ನಿರ್ವಹಿಸಬೇಕಾಗಿರುತ್ತದೆ. ಆ ಎಲ್ಲಾ ಪಾತ್ರಗಳಿಗೂ ನ್ಯಾಯ ಸಲ್ಲಿಸುವ ಹಾಗೆ ನೋಡಿಕೊಳ್ಳಿ. ಅಥವಾ ಒಬ್ಬ ಎಡಿಟರ್‌ ಥರ ಯೋಚನೆ ಮಾಡಿದರೆ ಅವರು ಸಾವಿರಾರು ನಿಮಿಷಗಳ ಫೂಟೇಜ್ ಅನ್ನು ಸ್ಟಡಿ ಮಾಡಿ ಅನಗತ್ಯವಾದ ವಿಶುವಲ್‌ಗಳನ್ನು ಕಟ್ ಮಾಡಿ ಕಿತ್ತು ಬಿಸಾಕುತ್ತಾರೆ. ಅದೇ ಥರ ನಿಮ್ಮ ಜೀವನದಲ್ಲಿನ ಬೇಡವಾದ ವಿಷಯಗಳನ್ನು, ಅಹಿತಕರವಾದ ನೆನಪುಗಳು, ನಿಮ್ಮನ್ನು ಕಾಡುವಂತಹ ಗಾಯಗಳು, ಎಲ್ಲವನ್ನೂ ಎಡಿಟ್ ಮಾಡಿ ಬಿಸಾಕಿ. ನಿಮ್ಮ ಕತೆಗೆ ಅಗತ್ಯವಾಗಿರುವುದನ್ನು ಮಾತ್ರ ಒಬ್ಬ ಒಳ್ಳೆಯ ಎಡಿಟರ್ ಥರ ಉಳಿಸಿಕೊಳ್ಳಿ.

ಒಬ್ಬ ಒಳ್ಳೆಯ ನಿರ್ದೇಶಕನ ಕೆಲಸ ಏನೆಂದರೆ ಸರಿಯಾದ ಆಯ್ಕೆಗಳನ್ನು ಮಾಡುವುದು. ಸೀನ್‌ನ ಲೈಟಿಂಗ್‌ ಹೇಗಿರಬೇಕು, ಕಾಸ್ಟ್ಯೂಮ್‌ ಹೇಗಿರಬೇಕು, ಯಾವ ಥರ ಹಾಡುಗಳಿರಬೇಕು ಹೀಗೆ ನೂರಾರು ಆಯ್ಕೆಯಗಳ ಮಧ್ಯೆ ಸರಿಯಾದ ಆಯ್ಕೆಗಳನ್ನು ಮಾಡುವವನೇ ಒಳ್ಳೆಯ ನಿರ್ದೇಶಕ. ಹಾಗಾಗಿ ನಿಮ್ಮ ಜೀವನದಲ್ಲಿ ಪ್ರತೀ ಹೆಜ್ಜೆಯಲ್ಲೂ ಸರಿಯಾದ ಆಯ್ಕೆಗಳನ್ನು ಮಾಡುವಂತಹ ಬುದ್ಧಿವಂತ ನಿರ್ದೇಶಕನ ಥರ ಯೋಚನೆ ಮಾಡಿ.ಚಿತ್ರರಂಗದಲ್ಲಿ ಕೆಲಸ ಮಾಡುವ ಎಲ್ಲರೂ ಕತೆಗೆ ಪೂರಕವಾಗಿ ಕೆಲಸ ಮಾಡಬೇಕು. ಅದೇ ಥರ ನಿಮ್ಮ ಜೀವನವೇ ನಿಮ್ಮ ಕತೆ. ಅದರ ನಾಯಕನೋ ನಾಯಕಿಯೋ ನೀವೇ. ಅದರ ನಿರ್ದೇಕರೂ ನೀವೇ. ನಿಮ್ಮ ಚಿತ್ರವನ್ನು ಸೂಪರ್‌ಹಿಟ್‌ ಮಾಡುವುದು ನಿಮ್ಮಕೈಯಲ್ಲೇ ಇದೆ. 2024 ನಿಮ್ಮ ಜೀವನದ ಅತೀ ಅರ್ಥಪೂರ್ಣವಾದ ವರ್ಷವಾಗಲಿ. Happy New Year One day at a time.

ಮತ್ತಷ್ಟು ಪದಕಗಳನ್ನು ಗೆಲ್ಲುವ ಗುರಿ!- ದಿವ್ಯಾ ಟಿ.ಎಸ್‌, ಏಷ್ಯನ್‌ ಗೇಮ್ಸ್‌ ಪದಕ ವಿಜೇತ ಶೂಟಿಂಗ್‌ ತಾರೆಹೊಸ ವರ್ಷವನ್ನು ಹೊಸ ಕನಸುಗಳೊಂದಿಗೆ ಆರಂಭಿಸಲಿದ್ದೇನೆ. 2024 ನನ್ನ ಪಾಲಿಗೆ ಅತ್ಯುತ್ತಮ ಕ್ಷಣಗಳನ್ನು ಕಟ್ಟಿಕೊಡಲಿದೆ ಎನ್ನುವ ಭರವಸೆ ನನ್ನಲ್ಲಿದೆ.

2024ರಲ್ಲಿ ಹಲವು ಮಹತ್ವದ ಅಂತಾರಾಷ್ಟ್ರೀಯ ಕೂಟಗಳು ನಡೆಯಲಿದ್ದು, ಅವುಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಉತ್ಸುಕಳಾಗಿದ್ದೇನೆ. ಕಠಿಣ ಸಿದ್ಧತೆಯಲ್ಲೂ ತೊಡಗಿದ್ದೇನೆ. ದೇಶಕ್ಕಾಗಿ ಮತ್ತಷ್ಟು ಪದಕಗಳನ್ನು ಗೆಲ್ಲುವುದು, ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸುವುದು ನನ್ನ ಬಹು ದೊಡ್ಡ ಗುರಿ.ಇದೇ ವೇಳೆ ಯುವಕರಿಗೆ ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳುವಂತೆ ನಾನು ಸಲಹೆ ನೀಡಲು ಬಯಸುತ್ತೇನೆ. ಕ್ರೀಡೆ ನನ್ನ ಜೀವನವನ್ನೇ ಬದಲಿಸಿದೆ. ಅದೇ ರೀತಿ, ಕ್ರೀಡೆಯು ಎಲ್ಲರ ಜೀವನಗಳ ಭಾಗವಾಗಬೇಕು. ಕ್ರೀಡೆಯಿಂದ ಇರುವ ದೈಹಿಕ, ಮಾನಸಿಕ ಉಪಯೋಗಗಳು ಎಲ್ಲರಿಗೂ ಸಿಗಬೇಕು ಎನ್ನುವುದು ನನ್ನ ಬಯಕೆ.

2024 ನಾಡಿನ ಪ್ರತಿಯೊಬ್ಬರಿಗೂ ಖುಷಿ ತರುವ ವರ್ಷವಾಗಿರಲಿ. ಎಲ್ಲರ ಬಾಳಲ್ಲೂ ಶಾಂತಿ, ನೆಮ್ಮದಿ ನೆಲೆಸಲಿ. ಎಲ್ಲರೂ ಆರೋಗ್ಯದಿಂದ ಇರಲಿ ಎಂದು ಆಶಿಸುತ್ತೇನೆ.ಧನಾತ್ಮಕ ಆಲೋಚನೆಗಳು ಹೆಚ್ಚಾಗಬೇಕು

- ಆಭರಣ್‌ ಸುದೇವ್‌, ಅಂತಾರಾಷ್ಟ್ರೀಯ ಹಾಕಿ ಆಟಗಾರ

ಜೀವನದಲ್ಲಿ ಹಲವು ಬಾರಿ ಸೋತಿರುವವರಿಗೆ ಹೊಸ ಜೀವನ ಆರಂಭಿಸಲು 2024 ವೇದಿಕೆಯಾಗಲಿ. ವೈಯಕ್ತಿಕವಾಗಿ ಹೊಸ ವರ್ಷದಲ್ಲಿ ನಾನು ಕೆಲ ಯೋಜನೆಗಳನ್ನು ಹಾಕಿಕೊಂಡಿದ್ದೇನೆ.

ನನ್ನಲ್ಲಿ ನಾನು ಇನ್ನಷ್ಟು ವಿಶ್ವಾಸವಿಡಬೇಕು, ಸದಾ ಧನಾತ್ಮಕ ಆಲೋಚನೆಗಳನ್ನೇ ಮಾಡಬೇಕು, ಫಿಟ್ನೆಸ್‌ಗಾಗಿ ಹೆಚ್ಚು ವರ್ಕ್‌ ಔಟ್‌ ಮಾಡಬೇಕು, ಪ್ರತಿಯೊಬ್ಬರನ್ನೂ ಪ್ರೀತಿ, ವಿಶ್ವಾಸದಿಂದ ಕಾಣಬೇಕು, ತಿಂಗಳಿಗೆ ಒಂದಾದರೂ ಪುಸ್ತಕ ಓದಬೇಕು ಎನ್ನುವುದು ಹೊಸ ವರ್ಷಕ್ಕೆ ನಾನು ಹಾಕಿಕೊಂಡಿರುವ ಯೋಜನೆಗಳು.ಯುವಕರಿಗೆ ಕೆಲ ಸಲಹೆಗಳನ್ನೂ ನೀಡಲು ನಾನು ಇಚ್ಛಿಸುತ್ತೇನೆ. ಧ್ಯಾನ ಮಾಡಿ, ಇದರಿಂದ ಮಾನಸಿಕ ಸದೃಢತೆ ಹೆಚ್ಚುತ್ತದೆ. ಮನಸು ಶಾಂತವಾಗಿದ್ದರೆ ಅಸಾಧ್ಯವೆನಿಸಿದ್ದನ್ನೂ ನಾವೂ ಸಾಧಿಸಬಹುದು. ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಇತರರಿಗೆ ಸಹಾಯ ಮಾಡಿ, ನಿಮಗೆ ಅಗತ್ಯವಿದ್ದಾಗ ನಿಮಗೇ ಗೊತ್ತಿಲ್ಲದ ರೀತಿಯಲ್ಲಿ ನಿಮಗೆ ಸಹಾಯ ಸಿಗುತ್ತದೆ.

ಹೊಸ ವರ್ಷ ಎಲ್ಲರಿಗೂ ಖುಷಿ ತರಲಿ, ಹ್ಯಾಪಿ 2024.ಕ್ವಿಅರ್‌ ಆ್ಯಂಡ್‌ ಟ್ರಾನ್ಸ್‌ ಸಮುದಾಯಕ್ಕೆ ಇತಿಹಾಸ ಸೃಷ್ಟಿಸಬೇಕು

- ರೂಮಿ ಹರೀಶ್‌ (ಗಾಯಕ, ಕ್ವಿಅರ್‌ ಆ್ಯಂಡ್‌ ಟ್ರಾನ್ಸ್‌ ಹೋರಾಟಗಾರ)ನಾಳೆಗಳ ಬಗ್ಗೆ ಬಹಳ ಕನಸುಗಳಿವೆ. ಕೆಲವು ವೈಯುಕ್ತಿಕ, ಕೆಲವು ನಮ್ಮ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ್ದು. ವೈಯುಕ್ತಿಕವಾಗಿ ಹೇಳುವುದಾದರೆ ನೊಮ್ಯಾಡಿಕ್‌ ಆಗಿ ಎಲ್ಲೂ ನಿಲ್ಲದೇ ಜಗತ್ತನ್ನು ಸುತ್ತಬೇಕು. ಕೊನೆಯಿಲ್ಲದಂತೆ ಕೆಲಸ ಮಾಡಬೇಕು. ಸಾಯುವ ದಿನವೂ ಕೆಲಸ ಮಾಡಬೇಕು. ಉಸಿರಿರುವ ತನಕ ನನ್ನ ಸಮುದಾಯ, ದುರ್ಬಲ ಸಮುದಾಯಗಳ ಪರ ನಿಲ್ಲಬೇಕು.ಉಳಿದಂತೆ ಈಗೀಗ ಬರವಣಿಗೆ ಆರಂಭಿಸಿದ್ದೇನೆ. ಪದ್ಯ, ಕಥೆ ಬರೆಯಲು ಕಲಿಯುತ್ತಿದ್ದೇನೆ. ಇದರ ಜೊತೆಗೆ ಪೇಂಟಿಂಗ್‌ ಮಾಡಬೇಕಿದೆ. ನನ್ನ ಜೀವಕ್ಕೆ ಜೀವದಂತಿರುವ ಹಾಡುಗಾರಿಕೆಯನ್ನು ಮತ್ತೆ ಆರಂಭಿಸಬೇಕು. ಕೆಲವು ಕಾಲದಿಂದ ಲಿಂಗ ಪರಿವರ್ತನೆ ಹಾರ್ಮೋನು ತೆಗೆದುಕೊಳ್ಳುತ್ತಿರುವುದರಿಂದ ದನಿ ಬದಲಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಪೂರ್ಣವಾಗದ ಕಾರಣ ಹಾಡಲು ಸಮಸ್ಯೆ ಆಗುತ್ತಿದೆ. ಇದರಿಂದ ಪ್ರರ್ಸ್ಟೇಶನ್‌ ಅನುಭವಿಸುತ್ತಿದ್ದೇನೆ. ಟ್ರಾನ್ಸ್‌ಜೆಂಡರ್‌ ಆಗಿ ನನ್ನ ಹಾಡುವ ಹುಚ್ಚಿನಲ್ಲಿ ಆರಾಮವಾಗಿ ನನಗೆ ಬೇಕಾಗಿರುವ ರೀತಿಯಲ್ಲಿ ಹಾಡಬೇಕು. ನನ್ನದೇ ಆವಾಜ್ ರೂಪಿಸಬೇಕು.ಸಮುದಾಯದ ವಿಚಾರಕ್ಕೆ ಬಂದರೆ ನಮ್ಮ ಸಮುದಾಯಕ್ಕೆ ಮೂಲಭೂತ ಹಕ್ಕುಗಳೇ ಸಿಗುತ್ತಿಲ್ಲ. ಎಲ್ಲ ಕಾನೂನಿನಲ್ಲಿ ಮಾತ್ರ ಇವೆ. ಆ ಹಕ್ಕುಗಳು ದಕ್ಕುವಂತೆ ಮಾಡುವುದು ನಮ್ಮ ಜವಾಬ್ದಾರಿ.ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ನನಗೆ ಬಹುದೊಡ್ಡ ಕನಸೊಂದಿದೆ. ನಮ್ಮಂಥಾ ‘ಕ್ವಿಅರ್‌ ಆ್ಯಂಡ್‌ ಟ್ರಾನ್ಸ್‌’ ಸಮುದಾಯಕ್ಕೆ ಇತಿಹಾಸವಾಗಲೀ, ಪುರಾಣವಾಗಲೀ ಇಲ್ಲ. ಜನರ ಕುಹಕದ ಪ್ರಶ್ನೆಗಳಿಗೆ ಉತ್ತರ ಕೊಡುವಂತೆ ನಾವೇ ಒಂದು ಇತಿಹಾಸ, ಪುರಾಣ ಕಟ್ಟಿ ಮುಂದಿನ ಜನರೇಶನ್‌ಗೆ ಸಮಸ್ಯೆಗಳು ಕಾಡದ ಹಾಗೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಸಂಶೋಧನಾ ಕೆಲಸಗಳು ಶುರುವಾಗಿವೆ. ಇಲ್ಲಿ ಧರ್ಮ, ಜಾತಿ ಇರೋದಿಲ್ಲ. ದೇವರು ನಮಗೆ ಬೇಡ. ಅಂಬೇಡ್ಕರ್‌, ಸಾವಿತ್ರೀ ಬಾ ಫುಲೆ ಮೊದಲಾದ ವ್ಯಕ್ತಿಗಳ ಸೆನ್ಸಿಬಿಲಿಟಿ, ಒಳಗೊಳ್ಳುವಿಕೆಯ ಚಿಂತನೆಗಳಲ್ಲಿ ಇತಿಹಾಸ ಕಟ್ಟಬೇಕು. ಬರಹಕ್ಕಿಂತಲೂ ದೃಶ್ಯ ಮಾಧ್ಯಮ, ಥಿಯೇಟರ್‌, ಆಡಿಯೋ ಬುಕ್‌, ಆರ್ಟ್‌ ಮೂಲಕ ಈ ಮಹತ್ವದ ಕಾರ್ಯ ಮಾಡಬೇಕು.ಇವೆಲ್ಲದರ ಜೊತೆಗೆ ಇಂಥವರು, ಅಂಥವರು ಎನ್ನುವ ಅಂತರವಿಲ್ಲದೇ ಎಷ್ಟು ಜನರನ್ನು ಪ್ರೀತಿಸಲು ಸಾಧ್ಯವಾಗುತ್ತದೋ ಅಷ್ಟು ಜನರನ್ನು ಪ್ರೀತಿಸಬೇಕು. ಪ್ರೀತಿಗೆ ಯಾವುದೇ ರೀತಿಯ ಇತಿಮಿತಿಗಳಿಲ್ಲ. ಅದನ್ನು ಇಡಿಯಾಗಿ ಕಾಣಬೇಕು. ಪ್ರತಿಯೊಬ್ಬರೂ ಪ್ರೇಮದಲ್ಲಿ ಬಿದ್ದರೆ ಜಗತ್ತಿನಲ್ಲಿ ಯುದ್ಧ, ದ್ವೇಷಗಳು ಇರುವುದಿಲ್ಲ. ಆ ಪ್ರೇಮಕ್ಕೆ ನಾವೆಲ್ಲ ಶರಣಾಗೋ ಔಷಧಿ ಸಿಗಬೇಕು. ಇದು ನನ್ನ ಆಸೆ, ಇದು ನನ್ನ ಕನಸು.*ಮುಂದಿನ ಪೀಳಿಗೆಯ ಅಭಿರುಚಿಗೆ ತಕ್ಕಂತೆ ವಿದ್ಯಾರ್ಥಿ ಭವನವನ್ನು ಬೆಳೆಸಬೇಕು- ಅರುಣ್‌ ಅಡಿಗ (ವಿದ್ಯಾರ್ಥಿ ಭವನ ಮಾಲೀಕ)ಸದ್ಯ ನನ್ನ ಮುಂದಿರುವ ಕನಸು ವಿದ್ಯಾರ್ಥಿ ಭವನವನ್ನು ಅದರ ಪಾರಂಪರಿಕ ಹಿನ್ನೆಲೆಯನ್ನು ಉಳಿಸಿಕೊಂಡೇ ಈ ಕಾಲದ ಮಂದಿಗೂ ಪ್ರಿಯವಾಗುವ ಹಾಗೆ ರೂಪಿಸುವುದು.ವಿದ್ಯಾರ್ಥಿ ಭವನ ದಶಕಗಳಿಂದ, ಎಷ್ಟೋ ಜನರ ಪರಿಶ್ರಮದಿಂದ ಪರಂಪರೆಯ ಗಂಧದೊಂದಿಗೆ ನಡೆದುಕೊಂಡು ಬಂದಿದೆ. ಇದಕ್ಕಿರುವ ಹೆಸರು ದೊಡ್ಡದು. ಹದಿನೈದು ವರ್ಷದಿಂದ ನಾನು ಇದರ ಚುಕ್ಕಾಣಿ ಹಿಡಿದಿದ್ದೇನೆ. ಹಾಗೆ ನೋಡಿದರೆ ನಾವು ಹೆಸರಿಗೆ ಮಾತ್ರ ಮಾಲೀಕರು. ಜನರೇ ಅಭಿಮಾನದಿಂದ ಇದನ್ನು ಮುನ್ನಡೆಸುತ್ತಿದ್ದಾರೆ.ಇಂಥಾ ಹಳೆಯ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುವುದು ದೊಡ್ಡ ಸವಾಲು. ಈಗ ಸೋಷಿಯಲ್‌ ಮೀಡಿಯಾಗಳಿಂದಲೂ ಹೈಪ್‌ ಸೃಷ್ಟಿಯಾಗಿದೆ. ಇದರಿಂದ ಜನರ ನಿರೀಕ್ಷೆಯೂ ಬೆಳೆಯುತ್ತದೆ. ನಿರೀಕ್ಷೆಗೆ ಕಡಿವಾಣ ಹಾಕಲಿಕ್ಕಾಗೋದಿಲ್ಲ. ಅದರಲ್ಲೂ ಮುಂದಿನ ಪೀಳಿಗೆಯವರ ನಿರೀಕ್ಷೆಯ ರೀತಿಯೇ ಭಿನ್ನ. ನಮ್ಮ ಈಟ್‌ಔಟ್‌ ಅವರ ನಿರೀಕ್ಷೆಯನ್ನೂ ತಲುಪಬೇಕು. ಜೊತೆಗೆ ತನ್ನ ಮೂಲ ಪರಂಪರೆಯನ್ನು ಬಿಡಬಾರದು. ಜೊತೆಗೆ ನಮ್ಮಲ್ಲಿಗೆ ಬರುವ ಎಲ್ಲ ಗ್ರಾಹಕರನ್ನೂ ಸಂತೃಪ್ತ ಪಡಿಸುವುದು ಕಷ್ಟ. ಆದರೆ ಶೇ.80 ಜನರಾದರೂ ವಿದ್ಯಾರ್ಥಿ ಭವನದ ದೋಸೆ ತಿಂದು ಸಂತೃಪ್ತಿಯಿಂದ ಮರಳಿದರೆ ನಮ್ಮ ಶ್ರಮಕ್ಕೂ ಸಾರ್ಥಕತೆ ಬರುತ್ತದೆ.*ಹುಡುಗಿಯರಲ್ಲಿ ಯಕ್ಷಗಾನದ ಕಿಚ್ಚು ಹಚ್ಚಬೇಕು

- ಕಾವ್ಯಶ್ರೀ ಅಜೇರು, ಜನಪ್ರಿಯ ಭಾಗವತರುನಾನು ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟದ್ದು 20 ವರ್ಷಗಳ ಹಿಂದೆ. ಮೊದಲ ಕಾರ್ಯಕ್ರಮ ಕೊಟ್ಟಾಗ ನನಗೆ ಹತ್ತು ವರ್ಷ. ನನ್ನ ತಂದೆ ಯಕ್ಷಗಾನ ಭಾಗವತರಾಗಿದ್ದರು. ಮಗಳಿಗೆ ಭಾಗವತಿಕೆ ಕಲಿಸಬೇಕು ಎಂಬ ಕನಸಲ್ಲಿ ಅವರು ತಾವು ಭಾಗವತಿಕೆ ಮಾಡುವುದನ್ನೇ ನಿಲ್ಲಿಸಿಬಿಟ್ಟರು. ಆರಂಭಿಕ ಹಂತದಲ್ಲಿ ತಂದೆ ಹಾಗೂ ನಾನು ಎದುರಿಸಿದ ಸವಾಲುಗಳು ಅನೇಕ.ಆಗ ಯಕ್ಷಗಾನದಲ್ಲಿ ಹೆಣ್ಣುಮಕ್ಕಳು ಭಾಗವತಿಕೆ ಮಾಡುತ್ತಿದ್ದದ್ದು ತೀರಾ ಕಡಿಮೆ. ಭಾಗವತಿಕೆಗೆ ಬೇಕಾದ ಧ್ವನಿ ಹೆಣ್ಣುಮಕ್ಕಳದಲ್ಲ ಎಂಬುದು ಜನರ ನಂಬಿಕೆಯಾಗಿತ್ತು. ಅಪ್ಪ ತಾವು ಹಾಡುವುದನ್ನು ಬಿಟ್ಟು ನನಗೆ ತರಬೇತಿ ಕೊಡುತ್ತಿದ್ದದ್ದನ್ನು ಬಹಳ ಮಂದಿ ಲೇವಡಿ ಮಾಡಿದ್ದರು.ನಾನು ಭಾಗವತಿಕೆ ಮಾಡಲು ಶುರು ಮಾಡಿದ ಮೊದಲ ಹತ್ತು ವರ್ಷ ಜನ ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ. ಹುಡುಗಿಯ ಧ್ವನಿಯಲ್ಲಿ ಭಾಗವತಿಕೆ ಕೇಳಲೇ ಅವರು ಸಿದ್ಧರಿರಲಿಲ್ಲ. ಆದರೆ ಕಳೆದ ಹತ್ತು ವರ್ಷಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.ಈ ಅನುಭವ ನನ್ನಲ್ಲೊಂದು ಕನಸನ್ನು ಹುಟ್ಟುಹಾಕಿದೆ. ನಾನು ಬೆಳೆದರೆ ಸಾಲದು, ಇನ್ನೊಂದಿಷ್ಟು ಮಹಿಳಾ ಭಾಗವತರನ್ನು ತಯಾರು ಮಾಡಬೇಕು. ಹುಡುಗಿಯರಲ್ಲಿ ಯಕ್ಷಗಾನದ ಕಿಚ್ಚು ಹಚ್ಚಬೇಕು. ಜನ ಬೊಟ್ಟು ಮಾಡುವಂಥಾ ಸಣ್ಣ ಕೊರತೆಯೂ ಇಲ್ಲದ ಹಾಗೆ ಅವರು ಬೆಳೆಯಬೇಕು. ಜೊತೆಗೆ ನಮ್ಮ ಯಕ್ಷಗಾನ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂಬುದು ಸದ್ಯ ನನ್ನ ಮುಂದಿರುವ ಗುರಿ.*ಹಿಂದಿನ ವರ್ಷದ ಕನಸು, ಗುರಿಗಳು ಮುಂದಿನ ವರ್ಷ ಈಡೇರುವ ನಂಬಿಕೆ

- ಅಂಕಿತಾ ಅಮರ್, ಕಲಾವಿದೆ2023ರಲ್ಲಿ ಅಂದುಕೊಂಡಿದ್ದು, ಹೊಸದಾಗಿ ಆರಂಭಿಸಿದ ಯೋಜನೆಗಳು 2024ನೇ ವರ್ಷದಲ್ಲಿ ಈಡೇರುತ್ತವೆ ಎನ್ನುವ ದೊಡ್ಡ ಭರವಸೆ, ನಂಬಿಕೆ ಇದೆ. ಹೀಗೆ ಈ ಹಳೆಯ ವರ್ಷದ ಕನಸುಗಳು, ಹೊಸ ವರ್ಷಕ್ಕೆ ಸಂಪೂರ್ಣವಾಗಿ ನಿಜವಾಗಲಿ ಎನ್ನುವುದು ಸದ್ಯ ನನ್ನ ಭವಿಷ್ಯದ ಕನಸು ಅಥವಾ ನ್ಯೂ ಇಯರ್ ರೆಸೆಲ್ಯೂಷನ್ ಅಂದುಕೊಳ್ಳಬಹುದು.ನನ್ನ ಮುಂದಿನ ಕನಸುಗಳ ಪೈಕಿ ಮೂರು ಸಿನಿಮಾಗಳ ಬಿಡುಗಡೆ ಪ್ರಮುಖವಾಗಿವೆ. ಕಿರುತೆರೆಯಿಂದ ಹಿರಿತೆರೆಗೆ ಬಂದ ನಾನು, 2023ರಲ್ಲಿ ಮೂರು ಚಿತ್ರಗಳಿಗೆ ನಾಯಕಿ ಆದೆ. ‘ಇಬ್ಬನಿ ತಬ್ಬಿದ ಇಳೆಯಲಿ’, ‘ಜಸ್ಟ್ ಮ್ಯಾರೀಡ್’ ಹಾಗೂ ಹೆಸರಿಡದ ಮತ್ತೊಂದು ಸಿನಿಮಾ. ಇದರ ಜತೆಗೆ ಚಿತ್ರೋತ್ಸವಗಳಿಗಾಗಿ ಮಾಡಿದ ಆಂಗ್ಲೋ ಇಂಡಿಯನ್ ಸಿನಿಮಾ ‘ಮೈ ಹೀರೋ’ ಕೂಡ ಇದೆ. ಇವಿಷ್ಟು ಚಿತ್ರಗಳು ನನ್ನ ಈ ಹೊಸ ವರ್ಷದ ಭರವಸೆಗಳು.ಒಂದಿಷ್ಟು ಹೊಸ ಅವಕಾಶಗಳು ಕೂಡ ನನ್ನ ಮುಂದಿವೆ. ಐಪಿಎಲ್ ಕ್ರಿಕೆಟಿಗೆ ಕನ್ನಡ ನಿರೂಪಕಿ ಆಗಿ ಆಯ್ಕೆ ಆಗಿದ್ದೇನೆ. ಇದು ನನ್ನ ಜೀವನ ಪಯಣದಲ್ಲಿ ಮತ್ತಷ್ಟು ಸಂತೋಷ ಮತ್ತು ಉತ್ಸಾಹ ತುಂಬಿದ ಅವಕಾಶ.ಇದರ ಜೊತೆಗೆ ಮುಂದಿನ ನನ್ನ ಗುರಿಗಳು ಎಂದರೆ ಉನ್ನತ ವ್ಯಾಸಂಗ ಮಾಡಬೇಕು ಎಂಬುದು. ಒಳ್ಳೆಯ ಕತೆ ಮತ್ತು ಒಳ್ಳೆಯ ಪಾತ್ರಗಳು ಸಿಗುತ್ತವೆ ಎನ್ನುವ ನಂಬಿಕೆ ಜತೆಗೆ ಅಂಥ ಪಾತ್ರಗಳಲ್ಲಿ ನಟಿಯಾಗಿ ಗುರುತಿಸಿಕೊಳ್ಳುತ್ತಿರುವಾಗಲೇ ಶಿಕ್ಷಣ ಕೂಡ ಪಡೆಯಬೇಕು ಎಂಬುದು ನನ್ನ ನಿರ್ಧಾರ.ನಾನು 2023ರಲ್ಲಿ ಕಲಿತಿದ್ದು ಏನೆಂದರೆ ಒಬ್ಬ ನಟಿಗೆ ಇರಬೇಕಾದ ತಯಾರಿ ಏನು, ಪಾತ್ರ ಪೋಷಣೆ ಹೇಗಿರಬೇಕು, ನಿರ್ದೇಶಕ ಕಾಣುವ ಕನಸಿಗೆ ನಟಿಯಾಗಿ ಹೇಗೆ ನ್ಯಾಯ ಸಲ್ಲಿಸಬೇಕು ಎಂಬುದನ್ನು. ತೆಳ್ಳಗೆ, ಬೆಳ್ಳಗೆ ಇದ್ದ ಮಾತ್ರಕ್ಕೆ ನಟಿ ಆಗಲು ಸಾಧ್ಯವಿಲ್ಲ ಎನ್ನುವ ಅರಿವು ಮೂಡಿಸಿದ್ದು ಕೂಡ ಇದೇ 2023ನೇ ವರ್ಷ. ಪ್ರತಿಭೆ ಇದ್ದಾಗ, ಆ ಪ್ರತಿಭೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ನಮ್ಮನ್ನ ಜನ ಗುರುತಿಸುತ್ತಾರೆ.ತುಂಬಾ ಕನಸು ಕಟ್ಟಿಕೊಂಡು, ಕುಟುಂಬದವರ ಪ್ರೋತ್ಸಾಹದಿಂದ ನಟನಾ ಕ್ಷೇತ್ರಕ್ಕೆ ಬಂದೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಗಳು ನಿಜ ಮಾಡಬೇಕು. ಇದು ನನ್ನ ಜವಾಬ್ದಾರಿ ಕೂಡ. ನಮ್ಮ ಆಯ್ಕೆಯ ಕ್ಷೇತ್ರ, ನಾವು ಮಾಡುವ ಕೆಲಸ, ನಾವು ಹೋಗುವ ದಾರಿ ಸರಿ ಇದ್ದರೆ ಪ್ರತಿ ದಿನವೂ ನಮಗೆ ಹೊಸ ವರ್ಷ, ಹೊಸ ದಿನಗಳು ಎದುರಾಗುತ್ತಲೇ ಇರುತ್ತವೆ.ಓಟಿಟಿಗಳಲ್ಲಿ ಕನ್ನಡದ ಸ್ಟ್ಯಾಂಡಪ್ ಕಾಮಿಡಿ ಪ್ರಸಾರವಾಗಲಿ

- ರಾಘವೇಂದ್ರ ಆಚಾರ್ಯನನಗೆ ಮೊದಲಿನಿಂದಲೂ ಹಾಸ್ಯ ಪ್ರವೃತ್ತಿ ಇತ್ತು. ಪತ್ರಿಕೋದ್ಯಮದಲ್ಲಿ ಇದ್ದಾಗಲೇ ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಿದ್ದೆ. ಆದರೆ, ನಾನು ಹಾಸ್ಯ ಕಲಾವಿದ ಎಂಬುದು ಬಹುತೇಕರಿಗೆ ಗೊತ್ತಿರಲಿಲ್ಲ. ಕೋವಿಡ್ ಬಂದ ಮೇಲೆ ಜನ ಸೋಷಿಯಲ್ ಮೀಡಿಯಾ, ಯೂಟ್ಯೂಬ್ ಹೆಚ್ಚು ಹೆಚ್ಚು ನೋಡಲಾರಂಭಿಸಿದರು. ಈ ಹಂತದಲ್ಲಿ ಮನಸ್ಸಿಗೆ ಮುದ ನೀಡುವ ಮನರಂಜನೆ ಅಗತ್ಯ ಇತ್ತು. ಆಗಲೇ ನಾವು ಜನಕ್ಕೆ ಹತ್ತಿರ ಆಗಿದ್ದು.ನನಗೆ ಮಾತ್ರವಲ್ಲ ನನ್ನಂಥ ಹಲವರನ್ನು ಸೆಲೆಬ್ರಿಟಿ ಮಾಡಿದ್ದು ಕಳೆದ ವರ್ಷದ ಹೆಗ್ಗಳಿಕೆ. ಬೆಂಗಳೂರಿನಲ್ಲಿ ನಗಿಸುತ್ತಿದ್ದ ನಾನು ಸಿಂಗಾಪುರ್, ಆಸ್ಟ್ರೇಲಿಯಾ, ಕುವೈತ್, ಐರ್ಲ್ಯಾಂಡ್‌ ಹೀಗೆ ಹಲವು ದೇಶಗಳಲ್ಲಿ ಕಾಮಿಡಿ ಶೋಗಳನ್ನು ಕೊಡುವ ಮಟ್ಟಕ್ಕೆ ಬೆಳೆದಿದ್ದು ನನ್ನ ಬದುಕಿನ ಮುಖ್ಯ ತಿರುವು ಮತ್ತು ಹೆಜ್ಜೆ. ಹೊಸ ಹೊಸ ದೇಶಗಳ ಸುತ್ತಾಟ, ಜಗತ್ತನ್ನುಎಕ್ಸ್‌ಪ್ಲೋರ್ ಮಾಡುತ್ತಾ ನಾನೂ ಕೂಡ ಹೊಸದಾಗಿ, ಖುಷಿಯಾಗಿ ಬದುಕುವ ಅವಕಾಶ ಕೊಟ್ಟಿದ್ದೇ ಈ ಸ್ಟ್ಯಾಂಡಪ್ ಕಾಮಿಡಿ ವೇದಿಕೆಗಳು.ಈಗ ಕಾಮಿಡಿ ಮಾಡುವವರನ್ನು ಹಗುರವಾಗಿ ನೋಡಲ್ಲ. ಗಂಭೀರವಾಗಿ ನೋಡುತ್ತಾರೆ. ಈತನಿಗೆ ತಿಳುವಳಿಕೆ ಇದೆ, ಈತ ಹೇಳುವುದು ಮನರಂಜನೆಗೆ ಮಾತ್ರ ಸೀಮಿತವಲ್ಲ ಏನೋ ವಿಷಯ ಇದೆ ಎನ್ನುವ ಮಟ್ಟಕ್ಕೆ ನಮ್ಮನ್ನು ಸೆಲೆಬ್ರಿಟಿ ಮಾಡಿದ್ದಾರೆ.ಗತಿಸಿದ ವರ್ಷದಲ್ಲಿ ನನ್ನ ಬದುಕಿಗೆ ಹೊಸ ವೇದಿಕೆ, ಗುರುತು ಕೊಟ್ಟ ಕನ್ನಡದ ಸ್ಟ್ಯಾಂಡಪ್ ಕಾಮಿಡಿ ಶೋಗಳನ್ನು ಹೊರ ದೇಶಗಳಲ್ಲೂ ಟಿಕೆಟ್ ಕೊಟ್ಟು ನೋಡುವ ಪರಂಪರೆ ಮತ್ತಷ್ಟು ಹೆಚ್ಚು ಮಾಡಬೇಕು.ತೆಲುಗು, ತಮಿಳು, ಹಿಂದಿ ಭಾಷೆಯ ಕಾಮಿಡಿ ಶೋಗಳಿಗೆ ಇರುವ ಅಂತಾರಾಷ್ಟ್ರೀಯ ಕ್ರೇಜು ಕನ್ನಡ ಕಾಮಿಡಿ ಶೋಗಳಿಗೂ ದಕ್ಕಬೇಕು. ಈ ನಿಟ್ಟಿನಲ್ಲಿ ಹೊಸ ಈ ವರ್ಷದಲ್ಲಿ ನನ್ನ ಒಂದೇ ಒಂದು ಕನಸು ಮತ್ತು ಗುರಿ ಎಂದರೆ ಅಮೆಜಾನ್ ಪ್ರೈಮ್‌, ನೆಟ್‌ಪ್ಲಿಕ್ಸ್‌ನಂತಹ ಓಟಿಟಿಗಳಲ್ಲಿ ಬೇರೆ ಭಾಷೆಗಳಂತೆಯೇ ಕನ್ನಡದ ಸ್ಟ್ಯಾಂಡಪ್ ಕಾಮಿಡಿ ಶೋಗಳು ಪ್ರಸಾರ ಆಗಬೇಕು.ಓಟಿಟಿಗಳಲ್ಲಿ ಕಾಮಿಡಿ ಶೋಗಳನ್ನು ನೋಡುವವರಲ್ಲಿ ಹೆಚ್ಚಿನವರು ಬೆಂಗಳೂರಿನವರು. ಆದರೆ, ಈ ಓಟಿಟಿಗಳಲ್ಲಿ ಕನ್ನಡದ ಸ್ಟ್ಯಾಂಡಪ್ ಕಾಮಿಡಿ ಶೋಗಳು ಇಲ್ಲ. ಈ ಹೊಸ ವರ್ಷ ಅಂದರೆ 2024 ಮುಗಿಯುವ ಹೊತ್ತಿಗೆ ಕನ್ನಡ ಯಾರದೇ ಒಬ್ಬರ ಶೋ ಆದರೂ ಈ ಓಟಿಟಿಗಳಲ್ಲಿ ಪ್ರಸಾರ ಆಗಬೇಕು.ಹೊಸ ವರ್ಷ ಆಗಮಿಸುತ್ತಿದೆ. ಹೊಸದಾಗಿ ಬದುಕಬೇಕು ಅಂದುಕೊಂಡರೆ ಮಾತ್ರ ಸಾಲದು. ಹಳೆಯ ಮಾರ್ಗಗಳಲ್ಲಿ ಸಾಗಿದರೆ ಹೊಸದು ಏನೂ ಸಿಗಲ್ಲ. ನಮ್ಮೊಳಗಿನ ಕೀಳರಿಮೆ ದೂರವಾಗಬೇಕು. ಮನಸು ಸ್ವಚ್ಛಗೊಂಡು ಎಲ್ಲವೂ ಬದಲಾಗಿ ಹೊಸ ದಾರಿಯಲ್ಲಿ ಹೆಜ್ಜೆ ಹಾಕಿದರೆ ಎಲ್ಲವೂ ಹೊಸದಾಗಿ ಕಾಣುತ್ತದೆ.