ಈಗಿನ ಸಿನಿಮಾ ಮೇಕರ್‌ಗಳಿಗೆ ಜೀವನಾನುಭವ ಕೊರತೆ ಇದೆ : ಚಿತ್ರೋತ್ಸದ ರಾಯಭಾರಿ ಬಹುಭಾಷಾ ನಟ ಕಿಶೋರ್

| N/A | Published : Mar 03 2025, 12:22 PM IST

actor kishor

ಸಾರಾಂಶ

ಈಗಿನ ಸಿನಿಮಾ ಮೇಕರ್‌ಗಳಿಗೆ ಜೀವನಾನುಭವ ಕೊರತೆ ಇದೆ: ಕಿಶೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ಸಂವಾದದಲ್ಲಿ ಬಹುಭಾಷಾ ನಟ

  ಸಿನಿವಾರ್ತೆ

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಮೊದಲ ದಿನ ನಡೆದ ಪತ್ರಿಕಾಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಚಿತ್ರೋತ್ಸದ ರಾಯಭಾರಿ, ಬಹುಭಾಷಾ ನಟ ಕಿಶೋರ್ ಭಾಗವಹಿಸಿದರು. ಅವರು ಸಂವಾದದಲ್ಲಿ ಆಡಿದ ಮಾತುಗಳು ಇಲ್ಲಿವೆ. 

- ನಾನು ರಾಯಬಾರಿ ಆಗಿರುವ ಈ ಚಿತ್ರೋತ್ಸವದಲ್ಲಿ ನನ್ನ ನಟನೆಯ ಸಿನಿಮಾ ಇಲ್ಲ ಎಂಬುದರ ಬಗ್ಗೆ ನನಗೆ ಬೇಸರ ಇಲ್ಲ. ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ನನಗೂ ಇದೆ. ಆದರೆ ಇದು ಅವಕಾಶಗಳ ಮೇಲೆ ನಿಂತಿರುವ ಆಸೆ. ನಾನು ಒಂದು ರೀತಿಯ ಅಲ್ಪತೃಪ್ತ.

- ತಾಂತ್ರಿಕವಾಗಿ ನಾವು ಸಾಕಷ್ಟು ಮುಂದುವರಿದಿದ್ದೇವೆ. ಇಂದಿನ ಆಧುನಿಕ ಜಗತ್ತಿನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಎಲ್ಲರಿಗೂ ಸಿಗುತ್ತಿವೆ. ಆದರೆ ಇಲ್ಲಿ ಕೊರತೆ ಇರುವುದು ಜೀವನಾನುಭವ. - ನನ್ನ ಪ್ರಕಾರ ಸಿನಿಮಾ ಮಾಡಲು ಹೆಚ್ಚು ಹೆಚ್ಚು ಅವಕಾಶ ಸಿಗುವ ನಗರ ಕೇಂದ್ರಿತ ಮೇಕರ್‌ಗಳಿಗೆ ನಗರದ ಅನುಭವದ ಹೊರತಾಗಿ ಜೀವನದ ಸಂಪೂರ್ಣ ಅನುಭವ ಇರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಈಗಿನ ಸಿನಿಮಾ ಮೇಕರ್‌ಗಳಲ್ಲಿ ಜೀವನಾನುಭವ ಕೊರತೆ ಎದ್ದು ಕಾಣುತ್ತಿದೆ.

- ನಗರದ ಅನುಭವದ ಹಿನ್ನೆಲೆಯಲ್ಲಿ ಎಲ್ಲಾ ಜನರ ಸಮಸ್ಯೆಗಳನ್ನು ಅಥವಾ ಎಲ್ಲಾ ಜನರ ಸ್ಥಿತಿಗತಿಗಳನ್ನು ಎತ್ತಿಕೊಂಡು ಸಿನಿಮಾ ಮಾಡುವುದಕ್ಕೆ ಸಾಧ್ಯವಿಲ್ಲ. - ಸಿನಿಮಾ ಮೇಕರ್‌ಗಳು ಹೆಚ್ಚು ಹೆಚ್ಚು ನೆಲಕ್ಕೆ ಇಳಿಯಬೇಕು. ಮಣ್ಣಿನ ಎಲ್ಲಾ ತರದ ಅನುಭವಗಳಿಗೆ, ಎಲ್ಲಾ ಸ್ತರಗಳಿಗೆ ತೆರೆದುಕೊಳ್ಳಬೇಕು. ಆ ಮೂಲಕ ಅನುಭವವನ್ನು ವಿಸ್ತಾರ ಮಾಡಿಕೊಳ್ಳಬೇಕು. ಹಾಗೆ ಅನುಭವ ದೊಡ್ಡದು ಮಾಡಿಕೊಂಡಾಗ ಸಿನಿಮಾ ದೊಡ್ಡದಾಗುತ್ತದೆ. 

- ಮುಂದಿನ ಪೀಳಿಗೆಗೆ ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಿನಿಮಾ ಮಾಧ್ಯಮವನ್ನು ಸದೃಢವಾಗಿ ಮತ್ತು ಸಮರ್ಥವಾಗಿ ದುಡಿಸಿಕೊಳ್ಳಬೇಕು.

ಚಿತ್ರೋತ್ಸವಗಳಿಂದ ಏನು ಅನುಕೂಲ ಎಂಬುದನ್ನು ಕೇಳಬಾರದು. ಯಾಕಂದ್ರೆ ಇದು ಕಲೆ. ಕಲೆಯಿಂದ ಅನುಕೂಲಗಳನ್ನು ಹುಡುಕಿಕೊಳ್ಳುವುದು ಅಷ್ಟು ಸಮಂಜಸವಲ್ಲ. ಇದು ಅಭಿವ್ಯಕ್ತಿ ಮಾಧ್ಯಮ. ಇಲ್ಲಿ ಪ್ರದರ್ಶನ ಮಾಡುತ್ತಿರುವ ಸಿನಿಮಾಗಳು ಆಯಾ ದೇಶದ, ಆಯಾ ನೆಲದ, ಆಯಾ ಭಾಷೆಯ ಅಸ್ಮಿತೆಯನ್ನು ಹೇಳುತ್ತವೆ. ಹೀಗಾಗಿ ಕಲೆಯನ್ನು ಅನುಕೂಲ ಎಂದು ನೋಡುವುದಕ್ಕಿಂತ ಅಭಿವ್ಯಕ್ತಿ ಮಾಧ್ಯಮ ಎಂದು ನೋಡಬೇಕು. 

-ವಿದ್ಯಾಶಂಕರ್ ಎನ್, ಚಿತ್ರೋತ್ಸವದ ಕಲಾ ನಿರ್ದೇಶಕ