ಸಾರಾಂಶ
ಬೆಂಗಳೂರು : ಪ್ಲಾಸ್ಟಿಕ್ ಕವರ್ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರೀ ಪ್ರಮಾಣದ ವಸ್ತುಗಳು ಸುಟ್ಟು ಕರಲಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬ್ಯಾಡರಹಳ್ಳಿ ಸಮೀಪದ ಅಂಜನಾನಗರದ ಕೆಇಬಿ ರಸ್ತೆಯ ಕೆ.ಆರ್.ಗಂಗಾಧರ್ ಆ್ಯಂಡ್ ಸನ್ಸ್ ಹೆಸರಿನ ಪ್ಲಾಸ್ಟಿಕ್ ಕವರ್ ತಯಾರಿಕಾ ಕಾರ್ಖಾನೆಯಲ್ಲಿ ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಈ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಯಂತ್ರೋಪಕರಣಗಳು, ಕಚ್ಚಾವಸ್ತುಗಳು, ಪ್ಲಾಸ್ಟಿಕ್ ಕವರ್ ದಾಸ್ತಾನು ಸೇರಿದಂತೆ 2 ಕಾರ್ಖಾನೆಗಳು ಬಹುತೇಕ ಸುಟ್ಟು ಹೋಗಿವೆ. ಕಾರ್ಖಾನೆಗಳ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ವ್ಯಾಪಿಸಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:ಗುರುವಾರ ಮಧ್ಯಾಹ್ನ ಕಾರ್ಖಾನೆಯಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರ್ಮಿಕರು ಊಟಕ್ಕೆ ಹೊರಗೆ ಬಂದಿದ್ದರು. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೂಡಲೇ ಸ್ಥಳೀಯರು ಅಗ್ನಿಶಾಮಕದವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಎರಡು ವಾಹನಗಳೊಂದಿಗೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಕಾರ್ಖಾನೆಯಲ್ಲಿ ಕ್ಷಣ ಕ್ಷಣಕ್ಕೂ ಬೆಂಕಿಯ ಪ್ರಮಾಣ ಹೆಚ್ಚಾಗಿ ಇಡೀ ಕಾರ್ಖಾನೆಗೆ ವ್ಯಾಪಿಸಿದ ಹಿನ್ನೆಲೆಯಲ್ಲಿ ಮತ್ತೆ 12 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡು ಸತತ ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ.
ಜನರ ಹೊರಗೆ ಕರೆತಂದ ಪೊಲೀಸರು:
ಮತ್ತೊಂದೆಡೆ ಕಾರ್ಖಾನೆಯ ಬೆಂಕಿ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಿದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಆ ಮನೆಗಳಿದ್ದ ನಿವಾಸಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಮನೆಗಳಿಗೆ ಹೆಚ್ಚು ಹಾನಿಯಾಗದಂತೆ ಬೆಂಕಿ ನಂದಿಸಿ, ಭಾರೀ ಅನಾಹುತ ತಪ್ಪಿಸಿದರು. ಆದರೂ ನಾಲ್ಕು ಅಂತಸ್ತಿನ ಮನೆಯೊಂದರ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿ ಕಿಟಕಿ ಸೇರಿದಂತೆ ಕೆಲವಸ್ತುಗಳಿಗೆ ಹಾನಿಯಾಗಿದೆ.
ವಿದ್ಯುತ್ ಶಾರ್ಟ್ ಸರ್ಕಿಟ್ ಶಂಕೆ:
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮಧ್ಯಾಹ್ನ ಪ್ಲಾಸ್ಟಿಕ್ ಕವರ್ ತಯಾರಿಕಾ ಕಾರ್ಖಾನೆಯಲ್ಲಿ ದೊಡ್ಡ ಯಂತ್ರವು ಚಾಲನೆಯಲ್ಲಿತ್ತು. ಈ ಯಂತ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅವಘಡದಲ್ಲಿ ಉಂಟಾದ ನಷ್ಟದ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಕಾರ್ಖಾನೆ ಮಾಲೀಕ ರಾಘವೇಂದ್ರ ಈ ಸಂಬಂಧ ದೂರು ನೀಡಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.