ಸಾರಾಂಶ
‘ ಕೆ 47 ಸಿನಿಮಾದಲ್ಲಿ ನನ್ನದು ಮ್ಯಾಕ್ಸ್ ರೀತಿಯ ಸೀರಿಯಸ್ ಪಾತ್ರ ಅಲ್ಲ, ಮುತ್ತತ್ತಿ ಸತ್ಯರಾಜು ಥರದ ಹಿಲೇರಿಯಸ್ ಪಾತ್ರ. ಈಗ ನನಗೆ ಕ್ಯಾಲೆಂಡರ್ ನೋಡಿದರೆ ಭಯ ಆಗುತ್ತೆ - ಸುದೀಪ್
ಸಿನಿವಾರ್ತೆ : ‘ ಕೆ 47 ಸಿನಿಮಾದಲ್ಲಿ ನನ್ನದು ಮ್ಯಾಕ್ಸ್ ರೀತಿಯ ಸೀರಿಯಸ್ ಪಾತ್ರ ಅಲ್ಲ, ಮುತ್ತತ್ತಿ ಸತ್ಯರಾಜು ಥರದ ಹಿಲೇರಿಯಸ್ ಪಾತ್ರ. ಈಗ ನನಗೆ ಕ್ಯಾಲೆಂಡರ್ ನೋಡಿದರೆ ಭಯ ಆಗುತ್ತೆ. ಏಕೆಂದರೆ ಈ ವರ್ಷ ಡಿ.25ಕ್ಕೆ ಈ ಹೊಸ ಸಿನಿಮಾ ರಿಲೀಸ್ ಮಾಡಬೇಕು ಅಂದುಕೊಂಡಿದ್ದೇವೆ. ಬಿಗ್‌ಬಾಸ್, ಬಿಲ್ಲ ರಂಗ ಬಾಷ ಶೂಟಿಂಗ್ ನಡುವೆ ಈ ಸಿನಿಮಾ ಬರಬೇಕು. ಅಂದರೆ ನನ್ನ ಪಾಲಿಗೆ ಮುಂದಿನ ದಿನಗಳಲ್ಲಿ ಶನಿವಾರ, ಭಾನುವಾರಗಳೇ ಇರೋದಿಲ್ಲ..’
ಹೀಗೆ ಈ ವರ್ಷದ ತನ್ನ ಬಿಡುವಿಲ್ಲದ ಶೆಡ್ಯೂಲ್ ಬಗ್ಗೆ ಹೇಳಿದ್ದು ಸುದೀಪ್.
ಅವರ ನಟನೆಯಲ್ಲಿ ‘ಮ್ಯಾಕ್ಸ್’ ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ‘ಕೆ 47’ ಸಿನಿಮಾ ಸೆಟ್ಟೇರಿದ್ದು, ಇಂದೇ (ಜು.7) ಶೂಟಿಂಗ್ ಸಹ ಆರಂಭವಾಗುತ್ತಿದೆ.
ಈ ವೇಳೆ ಮಾತನಾಡಿದ ಸುದೀಪ್, ‘ಇದು ಎಲ್ಲರೂ ಊಹಿಸಿರುವಂತೆ ಮ್ಯಾಕ್ಸ್ ಸಿನಿಮಾದ ಮುಂದುವರಿದ ಭಾಗ ಅಲ್ಲ. ವಾಸ್ತವದಲ್ಲಿ ಮ್ಯಾಕ್ಸ್ 2 ಸಿನಿಮಾ ಮಾಡಲೆಂದೇ ಹೊರಟಿದ್ದೆವು. ಆದರೆ ಕತೆ ಕೈ ಹಿಡಿಯಲಿಲ್ಲ. ಈ ಹೊಸ ಸಿನಿಮಾದಲ್ಲಿ
ಕಥೆ ಮೂರು ಲೇಯರ್‌ಗಳಲ್ಲಿದೆ. ನನ್ನ ಪಾತ್ರ ಮನರಂಜನೆ ನೀಡುವಂತಿದೆ. ಬಿಲ್ಲ ರಂಗ ಬಾಷ ಸಿನಿಮಾದಲ್ಲಿ ಬೇರೆ ಬೇರೆ ಶೆಡ್ಯೂಲ್ ನಡುವೆ ಇರುವ ಬ್ರೇಕ್ ಅನ್ನೇ ಕೊಂಚ ಹಿಗ್ಗಿಸಿ ಈ ಸಿನಿಮಾ ಮಾಡುತ್ತಿದ್ದೇನೆ. ಸೆಪ್ಟೆಂಬರ್ ಕೊನೆಯ ವಾರದಿಂದ ವೀಕೆಂಡ್‌ನಲ್ಲಿ ಬಿಗ್ ಬಾಸ್ ಇರುತ್ತದೆ. ಇದನ್ನೆಲ್ಲ ಹೇಗೋ ಮ್ಯಾನೇಜ್ ಮಾಡಬೇಕಿದೆ’ ಎಂದೂ ಹೇಳಿದ್ದಾರೆ.
ನಿರ್ದೇಶಕ ವಿಜಯ್ ಅವರನ್ನು ಹೊಗಳಿದ ಸುದೀಪ್, ‘ವರ್ಷಗಳ ಕೆಳಗೆ ಒಂದು ಬ್ಯಾಗ್ ನೇತಾಕ್ಕೊಂಡು ನಮ್ಮ ಮನೆಗೆ ಕತೆ ಹೇಳಲು ಬಂದ ವಿಜಯ್ ಅವರ ಲುಕ್ ನೋಡಿದ್ರೆ ಇವರಿಂದ ಮ್ಯಾಕ್ಸ್‌ನಂಥಾ ಅದ್ಭುತ ಸಿನಿಮಾ ಹೊರಹೊಮ್ಮುತ್ತೆ ಅನ್ನೋದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಒಂದು ವೇಳೆ ಅಂದು ನಾನು ಅವರ ಆ ಗೆಟಪ್ ನೋಡಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ ಇವತ್ತು ಮ್ಯಾಕ್ಸ್ ನಿಮ್ಮ ಮುಂದೆ ಇರುತ್ತಿರಲಿಲ್ಲ. ಹೊಸ ಸಿನಿಮಾಕ್ಕೆ ಅವರು ಮತ್ತಷ್ಟು ಶ್ರಮ ಸುರಿದಿದ್ದಾರೆ’ ಎಂದರು.
ಜೊತೆಗೆ ಕನ್ನಡ ಸಿನಿಮಾ ನಿರ್ಮಿಸಲು ಬರುವ ಅನ್ಯಭಾಷೆಯವರು ಈಗ ಕನ್ನಡ ಭಾಷೆಯಲ್ಲೇ ಮಾತನಾಡಿ ಗೌರವ ತೋರಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ನಿರ್ದೇಶಕ ವಿಜಯ್ ಕಾರ್ತಿಕೇಯ, ‘ಈ ಸಿನಿಮಾದಲ್ಲೂ ಸುದೀಪ್‌ಗೆ ಹೀರೋಯಿನ್ ಇರೋದಿಲ್ಲ’ ಎಂದು ಹೇಳಿದರು.
ತಮಿಳಿನ ಸತ್ಯಜ್ಯೋತಿ ಫಿಲಂಸ್ ಕನ್ನಡ ಹಾಗೂ ತಮಿಳಿನಲ್ಲಿ ಈ ಸಿನಿಮಾ ನಿರ್ಮಿಸುತ್ತಿದೆ.