ಯಶ್‌ ನಟನೆಯ ‘ರಾಮಾಯಣ’ ಗ್ಲಿಂಪ್ಸ್‌ಗೆ ಜಗತ್ತಿನಾದ್ಯಂತ ಮೆಚ್ಚುಗೆ ಹರಿದುಬಂದಿದೆ. ಆದರೆ ಅದಕ್ಕೂ ಹೆಚ್ಚಾಗಿ ಈ ಸಿನಿಮಾ ನಿರ್ಮಿಸುತ್ತಿರುವ ಪ್ರೈಮ್‌ ಫೋಕಸ್‌ ಸಂಸ್ಥೆ ಸಿನಿಮಾ ರಿಲೀಸ್‌ಗೂ ಮೊದಲೇ ದಾಖಲೆಯ 1000 ಕೋಟಿ ರು. ಗಳಿಕೆ ಮಾಡಿ ಹೆಮ್ಮೆಯಿಂದ ಬೀಗುತ್ತಿದೆ.

 ಸಿನಿವಾರ್ತೆ

ಯಶ್‌ ನಟನೆಯ ‘ರಾಮಾಯಣ’ ಗ್ಲಿಂಪ್ಸ್‌ಗೆ ಜಗತ್ತಿನಾದ್ಯಂತ ಮೆಚ್ಚುಗೆ ಹರಿದುಬಂದಿದೆ. ಆದರೆ ಅದಕ್ಕೂ ಹೆಚ್ಚಾಗಿ ಈ ಸಿನಿಮಾ ನಿರ್ಮಿಸುತ್ತಿರುವ ಪ್ರೈಮ್‌ ಫೋಕಸ್‌ ಸಂಸ್ಥೆ ಸಿನಿಮಾ ರಿಲೀಸ್‌ಗೂ ಮೊದಲೇ ದಾಖಲೆಯ 1000 ಕೋಟಿ ರು. ಗಳಿಕೆ ಮಾಡಿ ಹೆಮ್ಮೆಯಿಂದ ಬೀಗುತ್ತಿದೆ.

ಈ ಬೃಹತ್‌ ಮೊತ್ತ ಬಂದದ್ದು ‘ರಾಮಾಯಣ’ ತುಣುಕಿನ ವೀಕ್ಷಣೆಯಿಂದಲ್ಲ. ಬದಲಿಗೆ ಸ್ಟಾಕ್‌ ಮಾರ್ಕೆಟ್‌ನಿಂದ. ನಮಿತ್‌ ಮಲ್ಹೋತ್ರ ಮಾಲಿಕತ್ವದ ಪ್ರೈಮ್‌ ಫೋಕಸ್‌ ಸಂಸ್ಥೆಯ ಹೆಸರು ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಪಟ್ಟಿಯಲ್ಲಿದೆ. ಈಗಾಗಲೇ ಏರಿಕೆಯಲ್ಲಿದ್ದ ಕಂಪನಿ ಶೇರುಗಳು ‘ರಾಮಾಯಣ’ತುಣುಕು ಬಿಡುಗಡೆಯಾದ ಕೂಡಲೇ ದಾಖಲೆಯ ಏರಿಕೆ ಕಂಡವು. ಕಂಪನಿಯ ಒಂದು ಪ್ರತಿ ಷೇರಿನ ದರ ರು. 149.69ನಿಂದ ರು. 176ಕ್ಕೆ ಜಿಗಿಯಿತು. ಪರಿಣಾಮ 4638 ಕೋಟಿ ರು. ಇದ್ದ ಕಂಪನಿಯ ಮಾರುಕಟ್ಟೆ ಮೌಲ್ಯ ಎರಡೇ ದಿನದಲ್ಲಿ 5641 ಕೋಟಿಗೆ ಏರಿಕೆ ಆಗಿದೆ. ‘ರಾಮಾಯಣ’ದ ದಯದಿಂದ ಕಂಪನಿ ಕೇವಲ ಎರಡೇ ದಿನಗಳಲ್ಲಿ ತನ್ನ ಮೌಲ್ಯವನ್ನು 1000 ಕೋಟಿ ಏರಿಸಿಕೊಂಡಿದೆ.

ಈ ಸಿನಿಮಾದಲ್ಲಿ ರಾಮನ ಪಾತ್ರ ನಿರ್ವಹಿಸುತ್ತಿರುವ ರಣಬೀರ್‌ ಕಪೂರ್‌ ಸಹ ಹೂಡಿಕೆದಾರರಾಗಿದ್ದು, ಅವರ ಕಂಪನಿಯ ಶೇರುಗಳೂ ಜಿಗಿತ ಕಂಡಿವೆ. ಈ ಬೆಳವಣಿಗೆಯಿಂದ ರಣಬೀರ್‌ ಅವರ ಗಳಿಕೆಯಲ್ಲಿ 20 ಕೋಟಿ ರು. ಏರಿಕೆಯಾಗಿದೆ ಎನ್ನಲಾಗಿದೆ.

ಯಶ್‌ ರಾವಣ ಪಾತ್ರಕ್ಕೆ ರಾಜ್‌ ಬಿ ಶೆಟ್ಟಿ ಮೆಚ್ಚುಗೆ 

‘ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೆ’

- ಹೀಗೆ ಹೇಳುತ್ತಾ ‘ರಾಮಾಯಣ’ ಚಿತ್ರದಲ್ಲಿನ ಯಶ್‌ ಅವರ ರಾವಣ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿರುವುದು ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ. ರಾಜ್‌ ಬಿ ಶೆಟ್ಟಿ ಅವರ ಈ ಮೆಚ್ಚುಗೆಗೆ ನಟ ಯಶ್‌ ಅವರು ‘ಥ್ಯಾಂಕ್ಯೂ ಶೆಟ್ರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಭಿನವ ಪಂಪ ಎಂದೇ ಪ್ರಸಿದ್ಧಿಯಾಗಿದ್ದ ನಾಗಚಂದ್ರನ ‘ಪಂಪ ರಾಮಾಯಣ’ ಕಾವ್ಯದಲ್ಲಿ ರಾವಣನನ್ನು ಪ್ರತಿ ನಾಯಕನನ್ನಾಗಿ ತೆಗೆದುಕೊಂಡು ಕೊಂಡಾಡಿದ್ದಾರೆ. ‘ರಾವಣ ದುಷ್ಟನಲ್ಲ, ಆಕಸ್ಮಿಕವಾಗಿ ಸೀತೆಯನ್ನು ಕಂಡು ಆಕೆಯ ಮೇಲೆ ಮೋಹಗೊಂಡು ಕೊನೆಗೆ ಸಾಯುವಂತಾಯಿತು’ ಎಂದು ಹೇಳುವ ಸಂದರ್ಭದಲ್ಲಿ ‘ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೆ’ (ಇದರರ್ಥ- ಸಮುದ್ರ ಕೂಡ ಒಮ್ಮೊಮ್ಮೆ ಕಾಲವಶದಿಂದ ತನ್ನ ಮೇರೆ ಮೀರುತ್ತದೆ ಅಲ್ಲವೇ?) ಎಂದು ಬರೆಯಲಾಗಿದೆ. ಕವಿ ನಾಗಚಂದ್ರನ ಈ ಸಾಲುಗಳನ್ನೇ ಪ್ರಸ್ತಾಪಿಸಿ ಯಶ್‌ ಅವರ ರಾವಣ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ ರಾಜ್‌ ಬಿ ಶೆಟ್ಟಿ.