ಸಾರಾಂಶ
ಆರ್. ಕೇಶವಮೂರ್ತಿ
ಇತ್ತೀಚೆಗೆ ಹೆಚ್ಚು ಸಿನಿಮಾಗಳು ಒಪ್ಪಿಕೊಳ್ಳುತ್ತಿಲ್ಲ ಯಾಕೆ?
ಕತೆ ಕೇಳಿದ್ದೇನೆ. ಒಂದೆರಡು ಕತೆಗಳು ಮನಸ್ಸಿಗೆ ಹಿಡಿಸಿವೆ. ಸದ್ಯದಲ್ಲೇ ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ.
‘ರಂಗನಾಯಕ’ ನಂತರ ನಿಧಾನ ಆದ್ರಲ್ಲ?
ಹೌದು, ನನಗೆ ಆ ಸಿನಿಮಾ ಒಂದು ಪಾಠ. ಕತೆ, ಸ್ಕ್ರಿಪ್ಟ್ ಇಲ್ಲದೆ ಮಾಡಿದ ಸಿನಿಮಾ ಅದು. ಸಾಲದ್ದಕ್ಕೆ ಅತಿಥಿ ಪಾತ್ರ. ನಾನೇ ಹೀರೋ ಅನ್ನೋ ರೀತಿಯಲ್ಲಿ ಹೇಳಿದರು. ಇನ್ನು ಮುಂದೆ ಅಂಥಾ ಚಿತ್ರಗಳನ್ನು ದೂರ ಇಡಬೇಕಿದೆ.
ಇಂಥ ಚಿತ್ರಗಳಿಂದ ನೀವು ಕಲಿತಿದ್ದೇನು?
ಇನ್ನು ಮುಂದೆ ಬೌಂಡೆಡ್ ಸ್ಕ್ರಿಪ್ಟ್ ಇಲ್ಲದೆ ಕತೆ ಕೇಳಬಾರದು ಮತ್ತು ಒಪ್ಪಬಾರದು ಅಂದುಕೊಂಡಿದ್ದೇನೆ. ಪೋಲಿ ಮಾತಿನ ಸಿನಿಮಾ-ಕತೆಗಳನ್ನು ಯಾವ ಕಾರಣಕ್ಕೂ ಮಾಡಲ್ಲ. ನನಗೆ ಸಿನಿಮಾ ಅವಕಾಶಗಳು ಇಲ್ಲದಿದ್ದರೂ ಪರ್ವಾಗಿಲ್ಲ, ಐದು ವರ್ಷಕ್ಕೊಂದು ಸಿನಿಮಾ ಮಾಡಿದರೂ ತೊಂದರೆ ಇಲ್ಲ. ಇಲ್ಲಿವರೆಗೂ ಜನ ಕೊಟ್ಟಿರುವ ಪ್ರೀತಿ, ಅಭಿಮಾನವೇ ಸಾಕು.
ಸಿನಿಮಾ ಒಪ್ಪಿಕೊಳ್ಳಲು ಹಾಕಿಕೊಂಡಿರುವ ಷರತ್ತುಗಳೇನು?
ನಿರ್ದೇಶಕ, ಕತೆ, ನಿರ್ಮಾಪಕ ... ಈ ಮೂರು ವಿಷಯಗಳಲ್ಲಿ ನನಗೆ ಸ್ಪಷ್ಟತೆ ಇದ್ದರೆ ಮಾತ್ರ ನಾನು ಸಿನಿಮಾ ಮಾಡೋದು. ದುಡ್ಡಿಗಾಗಿ ಸಿನಿಮಾ ಮಾಡಲ್ಲ. ಕತೆ ಇಲ್ಲದೆ ಹಣ ತೆಗೆದುಕೊಂಡು ಬಂದವರನ್ನು ವಾಪಸ್ಸು ಕಳುಹಿಸಿದ್ದೇನೆ.
ನಿಮಗೆ ಸಿಕ್ಕ ಈ ಯಶಸ್ಸು ನಿಮ್ಮ ಮಕ್ಕಳಿಗೆ ಸಿಗಲಿಲ್ಲವಲ್ಲ?
ನನ್ನ ಮಕ್ಕಳು ಈಗ ದೊಡ್ಡ ಮಟ್ಟಕ್ಕೆ ಸಾಧನೆ ಮಾಡಿಲ್ಲ. ಆದರೆ, ಮುಂದೆ ಮಾಡುತ್ತಾರೆ. ಒಬ್ಬ ತಂದೆಯಾಗಿ ನನಗೆ ನಂಬಿಕೆ ಇದೆ. ನಾನು ಈ ಮೊದಲೇ ಇಂತಿಷ್ಟು ವರ್ಷದವರೆಗೂ ಏನೂ ಮಾಡಬೇಡ ಅಂತ ದೊಡ್ಡ ಮಗ ಗುರುಗೆ ಭವಿಷ್ಯ ಹೇಳಿದ್ದೆ. ಈಗ ಅವನಿಗೆ ಒಳ್ಳೆಯ ದಿನಗಳು ಬಂದಿವೆ.
ಮಗನ ಚಿತ್ರಕ್ಕೆ ನೀವೇ ನಿರ್ದೇಶನ ಮಾಡೋ ಪ್ಲಾನ್ ಇದೆಯಾ?
ಗುರುಗೆ ನಟನಾಗುವುದಕ್ಕಿಂತ ನಿರ್ದೇಶಕನಾಗುವ ಕನಸು ಮತ್ತು ಗುರಿ ಇದೆ. ನನ್ನ ಬಲವಂತಕ್ಕೆ ಅವನು ನಾಲ್ಕೈದು ಸಿನಿಮಾ ಮಾಡಿದ್ದಾನೆ. ಅವನ ಗುರಿ ಮಾತ್ರ ನಿರ್ದೇಶಕನಾಗಬೇಕು ಎಂಬುದು. ಅವನಿಗೆ ಸ್ಕ್ರಿಪ್ಟ್ ಬಗ್ಗೆ ಒಳ್ಳೆಯ ತಿಳಿವಳಿಕೆ ಇದೆ. ಹೊಂಬಾಳೆ ಫಿಲಮ್ಸ್‌ಗೆ ಹೊಸ ಕತೆ ಹೇಳಿದ್ದಾನೆ. ಓಕೆ ಆಗಿದೆ. ನಿರ್ದೇಶಕನಾಗಿ ಚಿತ್ರರಂಗಕ್ಕೆ ಬರಲಿದ್ದಾನೆ.
ನಿಮ್ಮ ನಿಜ ಜೀವನದ ಪ್ರೇಮ ಕತೆ ಸಿನಿಮಾ ಮಾಡೋ ಪ್ಲಾನ್ ಇತ್ತಲ್ಲ?ನನ್ನ ನಿಜ ಜೀವನದ ಪ್ರೇಮ ಕತೆಯನ್ನು ಸಿನಿಮಾ ಮಾಡಬೇಕು, ಅದಕ್ಕೆ ನನ್ನ ಮಗ ಗುರು ಹೀರೋ ಆಗಬೇಕು, ನಾನೇ ನಿರ್ದೇಶನ ಮಾಡಬೇಕು ಎನ್ನೋದು ನನ್ನ ಪತ್ನಿ ಪರಿಮಳಾ ಆಸೆ. ಯಾವಾಗ ಕೈಗೂಡುತ್ತೋ ಗೊತ್ತಿಲ್ಲ. ಇನ್ನೊಂದು ವಿಚಾರ ಇದೆ. ತಮಿಳಿನಿಂದ ಕನ್ನಡಕ್ಕೆ ಬಂದ ಗಣೇಶ್ ನಟನೆಯ ‘ಚೆಲುವಿನ ಚಿತ್ತಾರ’ ಚಿತ್ರದ್ದು ನನ್ನದೇ ನಿಜ ಜೀವನದ ಪ್ರೇಮ ಕತೆ. ಯಾಕೆಂದರೆ ತಮಿಳಿನ ‘ಕಾದಲ್’ ಚಿತ್ರಕ್ಕೆ ಕತೆ ಬರೆದಿದ್ದ ವ್ಯಕ್ತಿ ಪರಿಮಳಾ ಅವರ ತಂದೆ ಅವರ ಸ್ನೇಹಿತ. ಅವರು ತಮಿಳಿನ ಸಾಹಿತಿ. ಅವರು ಆಗಲೇ ನಮ್ಮ ಮಾವನಿಗೆ ಹೇಳಿದ್ದರಂತೆ, ‘ಇದು ನಿಮ್ಮ ಮಗಳು- ಅಳಿಯನ ಕತೆ’ ಅಂತ. ಸಿನಿಮಾದಲ್ಲಿ ತೋರಿಸೋ ಗ್ಯಾರೇಜು, ಅದು ಶ್ರೀರಾಮಪುರದಲ್ಲಿ ಈಗಲೂ ಇದೆ. ನನ್ನ ಪ್ರೇಮ ಕತೆ ಕೂಡ ಶುರುವಾಗಿದ್ದು ಕೂಡ ಅದೇ ಗ್ಯಾರೇಜಿನಿಂದಲೇ. ನಮ್ಮ ಪ್ರೇಮ ಕತೆಯನ್ನೇ ಕೊಂಚ ಬದಲಾಯಿಸಿಕೊಂಡು ‘ಕಾದಲ್’ ಚಿತ್ರದ ಕತೆ ಮಾಡಿದ್ದಾರೆ. ಅದು ಕನ್ನಡಕ್ಕೆ ‘ಚೆಲುವಿನ ಚಿತ್ತಾರ’ ಆಗಿ ಬಂತು.
ಸಿನಿಮಾ, ರಾಜಕೀಯ ಇದರಾಚೆಗೆ ನಿಮ್ಮ ಲೈಫು ಏನು?
ನಾನೊಮ್ಮೆ, ‘ಯಾಕೆ ಒಬ್ಬರೇ ಇರುತ್ತೀರಿ. ಹೊರಗೆ ಬನ್ನಿ. ಜೀವನ ಎಂಜಾಯ್ ಮಾಡಿ’ ಅಂತ ನಾನು ಅಣ್ಣಾವ್ರಿಗೆ ತಮಾಷೆ ಮಾಡಿದ್ದೆ. ಆಗ ಅವರು ಒಂದು ಮಾತು ಹೇಳಿದ್ದರು. ‘ನಿಮಗೂ 60 ವರ್ಷ ಆದ ಮೇಲೆ ನಾನೇನು ಅಂತ ಅರ್ಥ ಆಗುತ್ತದೆ’. ಈಗ ನನಗೆ 62 ವಯಸ್ಸು. ಶಿವನ ಆರಾಧಕನಾಗಿದ್ದೇನೆ. ಶಿವ ದೀಕ್ಷೆ ಪಡೆದುಕೊಂಡಿದ್ದೇನೆ. ಇದು ಸಿನಿಮಾ ಆಚೆಗಿನ ನನ್ನ ಜೀವನ.