ಸಾರಾಂಶ
ತೆಲಂಗಾಣ ವಿಧಾನಸಭೆ ಚುನಾವಣೆಗೂ ಮುನ್ನ ನಡೆದ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ರೇವಂತ್ ರೆಡ್ಡಿ ಅವರು ಪ್ರಚಾರಕ್ಕೆ ತೆರಳಿದ ಕಡೆಯಲ್ಲೆಲ್ಲಾ ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ರೇವಂತ್ ಅವರಿಗಾಗಿ ಸಿದ್ಧಪಡಿಸಿದ ಹಾಡುಗಳಿಗೆ ನರ್ತಿಸುವ ಮೂಲಕ ಭಾರಿ ಬೆಂಬಲ ಸೂಚಿಸಿದ್ದರು. ದೇಶದಲ್ಲಿ ರೇವಂತ್ ಅವರಿಗಲ್ಲದೇ ಮತ್ಯಾರಿಗೂ ಇಷ್ಟು ಪ್ರಮಾಣದಲ್ಲಿ ಜನ ಸೇರುವುದಿಲ್ಲ ಎಂದು ಭಾರಿ ಜನಸ್ತೋಮವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋವನ್ನು ರಿವರ್ಸ್ ಇಮೇಜ್ ತಂತ್ರಜ್ಞಾನ ಬಳಸಿ ಹುಡುಕಿದಾಗ ಇದು ತೆಲಂಗಾಣದ್ದಲ್ಲ ಎಂಬುದು ಸಾಬೀತಾಗಿದೆ. ಇದು ಗುಜರಾತ್‌ನ ಗೋದ್ರಾದಲ್ಲಿ ನಡೆದ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಜನ ಸೇರಿದ್ದ ವಿಡಿಯೋವಾಗಿದ್ದು, ಇದರಲ್ಲಿರುವ ಧ್ವನಿಯನ್ನು ಬದಲಾವಣೆ ಮಾಡಿ ತೆಲಂಗಾಣ ಚುನಾವಣೆಯದ್ದು ಎಂದು ಹಂಚಿಕೊಳ್ಳಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಅಲ್ಲದೇ ವಿಡಿಯೋದಲ್ಲಿ ಬೃಹತ್ ಗಣೇಶನ ವಿಗ್ರಹವಿರುವ ಜಾಗವನ್ನು ಬ್ಲರ್ ಮಾಡಿ ಕಾರ್ಯಕ್ರಮ ನಡೆಯುತ್ತಿರುವ ವೇದಿಕೆ ಎಂದು ಬಿಂಬಿಸಲಾಗಿದೆ. ಹಾಗಾಗಿ ಈ ಜನಸ್ತೋಮದ ವಿಡಿಯೋಗೂ ತೆಲಂಗಾಣದ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ.