ಎರಡನೇ ದಿನ ಶಿವಣ್ಣ ಮೇಲುಗೈ

| Published : Dec 27 2023, 01:30 AM IST / Updated: Dec 27 2023, 01:31 AM IST

ಸಾರಾಂಶ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಎರಡನೇ ದಿನವೂ ತಾರೆಗಳ ಅಭಿಮಾನಿಗಳಿಂದ ಮತ್ತಷ್ಟು ರಂಗೇರಿತ್ತು. ಸಿನಿಮಾ ತಾರೆಗಳು ಹಾಗೂ ಅಂತಾರಾಷ್ಟ್ರೀಯ ವೃತ್ತಿಪರ ಕ್ರಿಕೆಟಿಗರನ್ನು ಒಳಗೊಂಡ ಕೆಸಿಸಿ, 6 ಪಂದ್ಯಗಳಿಗೆ ಸಾಕ್ಷಿ ಆಗುವ ಜತೆಗೆ ಎಂದಿನಂತೆ ಆಟದ ಜತೆಗೆ ಹಾಡು, ಕುಣಿತ ಮತ್ತು ಡೈಲಾಗ್‌ಳಿಗೂ ವೇದಿಕೆ ಆಯಿತು.

ಕನ್ನಡಪ್ರಭ ಸಿನಿವಾರ್ತೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಎರಡನೇ ದಿನವೂ ತಾರೆಗಳ ಅಭಿಮಾನಿಗಳಿಂದ ಮತ್ತಷ್ಟು ರಂಗೇರಿತ್ತು. ಸಿನಿಮಾ ತಾರೆಗಳು ಹಾಗೂ ಅಂತಾರಾಷ್ಟ್ರೀಯ ವೃತ್ತಿಪರ ಕ್ರಿಕೆಟಿಗರನ್ನು ಒಳಗೊಂಡ ಕೆಸಿಸಿ, 6 ಪಂದ್ಯಗಳಿಗೆ ಸಾಕ್ಷಿ ಆಗುವ ಜತೆಗೆ ಎಂದಿನಂತೆ ಆಟದ ಜತೆಗೆ ಹಾಡು, ಕುಣಿತ ಮತ್ತು ಡೈಲಾಗ್‌ಳಿಗೂ ವೇದಿಕೆ ಆಯಿತು. ಮೊದಲ ಪಂದ್ಯವಾಗಿ ನಟ ಗಣೇಶ್‌ ಸಾರಥ್ಯದ ಗಂಗಾ ವಾರಿಯರ್ಸ್‌ ಹಾಗೂ ಡಾಲಿ ಧನಂಜಯ್‌ ಸಾರಥ್ಯದ ಕದಂಬ ಲಯನ್ಸ್‌ ನಡುವೆ ಸ್ಪರ್ಧೆ ಏರ್ಪಟ್ಟಿತು. ಟಾಸ್‌ ಗೆದ್ದ ಕದಂಬ ಲಯನ್ಸ್‌, ಗಂಗಾ ವಾರಿಯರ್ಸ್‌ಗೆ ಬ್ಯಾಟಿಂಗ್‌ ಬಿಟ್ಟುಕೊಟ್ಟು ಫೀಲ್ಡಿಂಗ್‌ ಆಯ್ದುಕೊಂಡಿತು. ಗಂಗಾ ವಾರಿಯರ್ಸ್‌ ತಂಡದ ಸದಸ್ಯರು10 ಓವರ್‌ಗಳು ಮುಗಿಯುವ ಹೊತ್ತಿಗೆ 4 ವಿಕೆಟ್‌ ಕಳೆದುಕೊಂಡು 110 ರನ್‌ಗಳನ್ನು ತಲುಪಿದರು. ನಂತರ ಕದಂಬ ಲಯನ್ಸ್‌ ತಂಡದ ಆಟಗಾರರು 10 ಓವರ್‌ಗಳಲ್ಲಿ 76 ರನ್‌ ಗಳಿಸಿ, 7 ವಿಕೆಟ್‌ ಕಳೆದುಕೊಂಡ ಕದಂಬ ವಾರಿಯರ್ಸ್‌ ತಂಡ ಸೋಲೊಪ್ಪಿಕೊಂಡಿತು. ಸುದೀಪ್‌ ಅವರ ಹೊಯ್ಸಳ ಈಗಲ್ಸ್‌ ಬ್ಯಾಟಿಂಗ್‌ ಆಯ್ದುಕೊಂಡರೆ, ನಾವು ಚೇಸಿಂಗ್‌ ಮಾಡುವುದರಲ್ಲಿ ಎಕ್ಸ್‌ಫರ್ಟ್‌ ಎಂದು ಫೀಲ್ಡ್‌ ಇಳಿದಿದ್ದು ಉಪೇಂದ್ರ ಅವರ ಒಡೆಯರ್‌ ಚಾರ್ಜರ್ಸ್‌ ತಂಡ. ಹೊಯ್ಸಳ ಈಗಲ್ಸ್‌ ತಂಡದ ಟಿ ದಿಲ್ಶಾನ್ ಹಾಗೂ ನಟ ಡಾರ್ಲಿಂಗ್‌ ಕೃಷ್ಣ ಅವರು ಆರಂಭಿಕ ಆಟಗಾರರಾಗಿ ಬಂದು ಒಂದೇ ಒಂದು ವಿಕೆಟ್‌ ಕಳೆದುಕೊಳ್ಳದೆ 10 ಓವರ್‌ಗಳಲ್ಲೇ 166 ರನ್‌ಗಳನ್ನು ಗಳಿಸಿದರು. ನಂತರ ಹೊಯ್ಸಳ ಈಗಲ್ಸ್‌ ತಂಡದವರ ಎಸೆತಗಳಿಗೆ ಎದುರಾಗಿ ನಿಂತ ಉಪೇಂದ್ರ ತಂಡದ ಆಟಗಾರರು 10 ಓವರ್‌ಗಳು ಮುಗಿಯುವ ಹೊತ್ತಿಗೆ 5 ವಿಕೆಟ್‌ ಕಳೆದುಕೊಂಡು 110 ರನ್‌ಗಳಿಗೆ ಸೀಮಿತಗೊಂಡರು. ಕೊನೆಯ ಓವರ್‌ನ ಮೂರೇ ಮೂರು ಎಸೆತಗಳು ಇದ್ದಾಗ ಉಪೇಂದ್ರ ಬ್ಯಾಟ್‌ ಹಿಡಿದು ಬಂದು ಆಟಕ್ಕಿಂತ ಹೆಚ್ಚಾಗಿ ಮನರಂಜನೆ ಕೊಟ್ಟರು.

ವಿಜಯನಗರ ಪೇಟ್ರಿಯಾಟ್ಸ್‌ನಿಂದ ದುನಿಯಾ ವಿಜಯ್‌ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್‌ನಿಂದ ಶಿವರಾಜ್‌ಕುಮಾರ್‌ ಅವರು ಮುಖಾಮುಖಿ ಆದರು. ವಿಜಯನಗರ ಪೇಟ್ರಿಯಾಟ್ಸ್‌ ತಂಡದ ವಿಜಯ್‌ ಭಾರದ್ವಾಜ್‌ ಹಾಗೂ ಜೆಕೆ ಅವರು ಆರಂಭಿಕ ಆಟಗಾರರಾಗಿ 10 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಕೇವಲ 73 ರನ್‌ ದಾಖಲಿಸಿತು. ನಂತರ ಬ್ಯಾಟಿಂಗ್‌ಗೆ ಇಳಿದ ರಾಷ್ಟ್ರಕೂಟ ತಂಡದ ಸುರೇಶ್‌ ರೈನಾ 38 ಹಾಗೂ ಪ್ರದೀಪ್‌ ಅವರು 16 ರನ್‌ ಮಾಡಿ 5 ಓವರ್‌ಗಳಿಗೇ ಗೇಮ್‌ ಮುಗಿಸಿದರು.

ಒಡೆಯರ್ ಚಾರ್ಜರ್ಸ್ ಮೇಲೆ ಗೆದ್ದ ಸುದೀಪ್‌ ಅವರ ಹೊಯ್ಸಳ ಈಗಲ್ಸ್‌ ತಂಡ, 142 ರನ್‌ ಗಳಿಸಿದ ಡಾಲಿ ಧನಂಜಯ್‌ ಅವರ ಕದಂಬ ಲಯನ್ಸ್‌ ಮುಂದೆ 69 ರನ್‌ ಮಾಡಿ 73 ರನ್‌ಗಳ ಅಂತರದಲ್ಲಿ ಸೋಲು ಕಂಡಿತು. ಬಾಕ್ಸ್‌ 1

ಕೆಸಿಸಿಯ ಮೊದಲ ಶತಕದ ವೀರ

ಕೆಸಿಸಿ ಇತಿಹಾಸದಲ್ಲಿ ಮೊದಲ ಶತಕ ಬಾರಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟಿಗ ಟಿ ದಿಲ್ಶಾನ್ ಅವರು. 40 ಎಸೆತಗಳಲ್ಲಿ 101 ರನ್‌ಗಳಿಸುವ ಮೂಲಕ ಕೆಸಿಸಿ ಮೊದಲ ಶತಕದ ವೀರ ಎನಿಸಿಕೊಂಡು ಮ್ಯಾನ್‌ ಆಫ್‌ ದಿ ಮ್ಯಾಚ್‌ ಕಿರೀಟಕ್ಕೆ ಪಾತ್ರರಾದರು.

ಬಾಕ್ಸ್‌ 2

ಆಟೋಗ್ರಾಫ್‌ ಟೋಪಿ ಕೊಟ್ಟ ಶಿವಣ್ಣ

ತಮ್ಮ ಸರದಿ ಕಾಯುತ್ತಾ ನಿಂತಿದ್ದ ಶಿವಣ್ಣ ಅವರು ತಮ್ಮ ತಂಡದ ಜತೆಗೆ ಇಡೀ ಮೈದಾನವನ್ನು ಒಂದು ಸುತ್ತು ಹಾಕಿದರು. ಜತೆಗೆ ತಾವೇ ಆಟೋಗ್ರಾಫ್‌ ಹಾಕಿದ ಕೆಂಪು ಟೋಪಿಗಳನ್ನು ಗ್ಯಾಲರಿಯತ್ತ ಎಸೆಯುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಬಾಕ್ಸ್‌ 3

ಶರ್ಟ್‌ ಬಿಚ್ಚಿ ಮೈದಾನಕ್ಕೆ ನುಗ್ಗಿದ ವಿಜಯ್‌ ಅಭಿಮಾನಿ

ಅಖಾಡದಲ್ಲಿ ದುನಿಯಾ ವಿಜಯ್‌ ಫೀಲ್ಡಿಂಗ್‌ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿದ ಇಬ್ಬರು ಅಭಿಮಾನಿಗಳು ದುನಿಯಾ ವಿಜಯ್‌ ಅವರ ಕಾಲು ಹಿಡಿದುಕೊಂಡರು. ಬೌನ್ಸರ್‌ಗಳು ಬರುವ ಹೊತ್ತಿಗೆ ಒಬ್ಬ ತನ್ನ ಶರ್ಟ್‌ ಬಿಚ್ಚಿ ವಿಜಯ್‌ ಅವರ ಟ್ಯಾಟೂ ಹಾಕಿಸಿಕೊಂಡಿರುವುದು ತೋರಿಸಿದರು. ಕೂಡಲೇ ಪೊಲೀಸರು ಬಂದು ಇಬ್ಬರನ್ನು ವಶಕ್ಕೆ ಪಡೆದುಕೊಂಡರೂ ಸೆಲ್ಫಿ ಫೋಟೋ ಬೇಡಿಕೆ ಇಟ್ಟ ಅಭಿಮಾನಿಗಳಿಬ್ಬರ ಅಭಿಮಾನಕ್ಕೆ ಸೋತು ಇಬ್ಬರ ಜತೆಗೆ ಫೋಟೋಗೆ ಪೋಸು ಕೊಟ್ಟರು ದುನಿಯಾ ವಿಜಯ್‌. ಬಾಕ್ಸ್‌ 4

ಮಿಂಚಿದ ತಾರೆಗಳು

ಬೌಲಿಂಗ್‌ನಲ್ಲಿ ಮೂರು ವಿಕೆಟ್‌ ಕಬಳಿಸುವ ಮೂಲಕ ನಿರ್ಮಾಪಕ ಶ್ರೀಕಾಂತ್‌, ಆಕರ್ಷಿಕ ಫೀಲ್ಡಿಂಗ್ ಮೂಲಕ ನಟರಾದ ಶಿವಣ್ಣ, ಗಣೇಶ್‌, ಅಮೋಘ ಬ್ಯಾಟಿಂಗ್‌ನಿಂದ ಡಾರ್ಲಿಂಗ್‌ ಕೃಷ್ಣ, ಧರ್ಮ ಕೀರ್ತಿರಾಜ್‌, ಪ್ರದೀಪ್‌ ಅವರು ಮಿಂಚಿದರು.