ಸಾರಾಂಶ
ಬಿಸಿ ಬಿಸಿ ಐಸ್‌ಕ್ರೀಂ ಸಿನಿಮಾದಲ್ಲಿ ಸೆಕ್ಸ್ ವರ್ಕರ್ ಪಾತ್ರದಲ್ಲಿ ಸಿರಿ ರವಿಕುಮಾರ್.
ಅರವಿಂದ ಶಾಸ್ತ್ರಿ ನಿರ್ದೇಶನ, ಅರವಿಂದ ಅಯ್ಯರ್ ನಟನೆಯ ‘ಬಿಸಿ ಬಿಸಿ ಐಸ್‌ಕ್ರೀಂ’ ಸಿನಿಮಾದ ಟ್ರೇಲರ್ ಬಾಯಿಲ್ಡ್ ಬೀನ್ಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಿರಿ ರವಿಕುಮಾರ್ ಸೆಕ್ಸ್ ವರ್ಕರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿರಿ, ‘ ಕಾಮಿಡಿ, ಥ್ರಿಲ್ಲರ್, ಅಡ್ವೆಂಚರ್, ವಿಲಕ್ಷಣತೆ ತುಂಬಿರುವ ಸಿನಿಮಾದಲ್ಲಿ ಹೆಸರೇ ಇಲ್ಲದ ಪಾತ್ರ ನನ್ನದು. ಇಂಥಾ ಸಿನಿಮಾ ಹಿಂದೆಂದೂ ನೋಡಿಲ್ಲ. ಇಡೀ ತಂಡವೇ ಬಹಳ ಕ್ರಿಯೇಟಿವ್ ಆಗಿದೆ. ಈ ಹಿಂದೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ಪ್ರೌಢ ಮನಸ್ಸಿನ ಕೌನ್ಸಿಲರ್ ಪಾತ್ರ ಮಾಡಿದ್ದೆ. ಇದರಲ್ಲಿ ಮತ್ತೊಂದು ಅಭಿನಯಕ್ಕೆ ಅವಕಾಶ ಇರುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇಂಥಾ ಪಾತ್ರಗಳು ಸಿಗುವುದೇ ಅದೃಷ್ಟ’ ಎಂದರು.
ನಾಯಕ ಅರವಿಂದ ಅಯ್ಯರ್, ‘ಸ್ಕ್ರಿಪ್ಟ್ ಸಿಕ್ಕಿದಾಗ ನನಗೆ ಬೇರೆ ಯಾವುದೋ ಪಾತ್ರ ಕೊಡ್ತಾರೆ ಅಂದುಕೊಂಡಿದ್ದೆ. ಟ್ಯಾಕ್ಸಿ ಡ್ರೈವರ್ ಪಾತ್ರ ಮಾಡಲು ಹೇಳಿದಾಗ ನನ್ನೊಳಗಿನ ಆ್ಯಕ್ಟರ್ ಗೆ ಖುಷಿ ಆಯ್ತು. ಇದಕ್ಕಾಗಿ ಜಿಮ್ ಬಿಟ್ಟೆ, ಡಾರ್ಕ್ ಸರ್ಕಲ್ ಎದ್ದು ಕಾಣಲು ನಿದ್ದೆ ಬಿಟ್ಟೆ, ಡ್ರೈವರ್ ಬದುಕು ತಿಳಿಯಲು ಬೀದಿ ಬೀದಿ ಅಲೆದೆ. ನಂಗೂ ಕಾರ್, ಜೀಪ್ ಗಾಳಿಯಲ್ಲಿ ಹಾರಿಸೋ ಮಾಸ್ ಸಿನಿಮಾ ಇಷ್ಟ. ಆದ್ರೆ ಕಲಾವಿದನಾಗಿ ಎಲ್ಲ ವೆರೈಟಿ ಪಾತ್ರ ಮಾಡಬೇಕು’ ಎಂದರು.ನಿರ್ದೇಶಕ ಅರವಿಂದ ಶಾಸ್ತ್ರಿ, ‘ಜೀವನಾಸಕ್ತಿ ಕಳೆದುಕೊಂಡ ಕ್ಯಾಬ್ ಡ್ರೈವರ್ ಬದುಕಿನಲ್ಲಿ ಒಬ್ಬ ಸೆಕ್ಸ್ ವರ್ಕರ್ ಬರುತ್ತಾಳೆ. ಆಮೇಲಿಂದ ಆತನ ಬದುಕಿನಲ್ಲಾಗುವ ಬದಲಾವಣೆಗಳೇನು ಅನ್ನುವುದು ಸಿನಿಮಾದ ಒನ್‌ಲೈನ್. ಬಿಸಿ ಬಿಸಿ ಐಸ್‌ಕ್ರೀಂ ಅನ್ನುವ ಶೀರ್ಷಿಕೆಯನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ’ ಎಂದರು. ಗೋಪಾಲಕೃಷ್ಣ ದೇಶಪಾಂಡೆ ಪಿಂಪ್ (ತಲೆಹಿಡುಕ) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಮಾಂಟೋ ನನ್ನಿಷ್ಟದ ಕತೆಗಾರ. ಚಿತ್ರದ ನನ್ನ ಪಾತ್ರದ ಹೆಸರೂ ಮಾಂಟೊ’ ಎಂದರು. ನಿರ್ಮಾಪಕಿ ಅಕ್ಷರಾ ಭಾರದ್ವಾಜ್ ಸುದ್ದಿಗೋಷ್ಠಿಯಲ್ಲಿದ್ದರು.