ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ನಾವು ತಿನ್ನೋ ಅನ್ನದ ಹಿಂದೆ ರೈತರ ಶ್ರಮದ ದುಡಿಮೆ ಇದೆ, ದೇಶ ಕಾಯೋ ಯೋಧ ಅನ್ನ ನೀಡೋ ರೈತರನ್ನು ಗೌರವಿಸುವುದನ್ನು ನಮ್ಮ ಕರ್ತವ್ಯ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ತಾಲ್ಲೂಕು ಕಲ್ಯಾಣ ರೈತ ಸಂಘ ಆಯೋಜಿಸಿದ್ದ ಮಣ್ಣಿಗೆ ಮರು ಜೀವ, ಮಣ್ಣು ರಕ್ಷಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಪ್ರಧಾನವಾದ ದೇಶದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿರುವ, ಆಹಾರ ಭದ್ರತೆ ಒದಗಿಸಿರುವ ರೈತರ ಪರಿಶ್ರಮವನ್ನು ಆಹಾರ ಸ್ವೀಕರಿಸುವ ಪ್ರತಿಯೊಬ್ಬರು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕು, ನನ್ನ ತಂದೆ ಮಾಜಿ ಸಂಸದ ಆರ್. ಧ್ರುವನಾರಾಯಣ ಕೃಷಿ ಪದವಿ ಪಡೆದವರು, ಓದಿನ ನಡುವೆ ಬಿಡುವಿನಲ್ಲಿ ನಮ್ಮ ಗ್ರಾಾಮದ ಕೃಷಿ ಭೂಮಿಯಲ್ಲಿ ರೈತನಾಗಿ ದುಡಿದಿರುವುದರಿಂದ ರೈತರ ಕಷ್ಟಸ ಅರಿವಿದೆ, ದೇಶದ ಹೆಮ್ಮೆೆಯ ಪ್ರತೀಕ ನಮ್ಮ ರೈತ ಬಾಂಧವರು ಎಂದು ಹೇಳಿದರು.ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ್ ಗೌಡ ಮಾತನಾಡಿ, ಪ್ರಪಂಚದಲ್ಲಿ ಕಷ್ಟದಲ್ಲಿರುವವರು ರೈತರು ಮಾತ್ರ, ಅದರಲ್ಲೂ ನಮ್ಮ ದೇಶದಲ್ಲಿ ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವುದಿಲ್ಲ, ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಪಡೆಯಲು ಸರತಿಯಲ್ಲಿ ನಿಂತು ಹೋರಾಟ ಮಾಡಿ ಪಡೆಯಬೇಕಾದ ಸ್ಥಿತಿ ಇದೆ ಎಂದರು.
ಅತಿಯಾದ ರಾಸಾಯನಿಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗಿದೆ, ಬೂಮಿ ತಾಯಿಯನ್ನು ರಕ್ಷಿಸದಿದ್ದರೆ ಮಣ್ಣಿನ ಆರೋಗ್ಯ ಕಾಪಾಡುವತ್ತ ಪ್ರಯತ್ನಗಳು ನಡೆಯದಿದ್ದರೆ, ದೇಶ ಶೋಚನೀಯ ಪರಿಸ್ಥಿತಿ ಅನುಭವಿಸಬೇಕಾಗುತ್ತದೆ. ರಾಸಾಯನಿಕಗಳಿಗೆ ಹೊರತಾದ ಕೃಷಿಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ, ಮಣ್ಣಿಗೆ ಮರು ಜೀವ ನೀಡಿ ಭೂಮಿಯ ಸಂಪತ್ತನ್ನು ಕಾಪಾಡೋಣ ಎಂದು ಹೇಳಿದರು.ಬಿಜೆಪಿ ಮುಖಂಡ ಎಸ್. ಮಹದೇವಯ್ಯ ಮಾತನಾಡಿ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ,ಗೊಬ್ಬರವನ್ನು ಸರಿಯಾದ ಸಮಯಕ್ಕೆ ಒದಗಿಸಬೇಕು, ರಾಜ್ಯ ಸರ್ಕಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಬೇಕು, ಬ್ಯಾಂಕುಗಳು ರೈತರಿಗೆ ಹೆಚ್ಚಿನ ನೆರವು ನೀಡಬೇಕು, ಸರ್ಕಾರಗಳು ರೈತರ ನೆರವಿಗೆ ನಿಂತಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಂಜುಂಡಸ್ವಾಮಿ, ಕಳಲೆ ಕೇಶವಮೂರ್ತಿ, ಕಲ್ಯಾಣ ರೈತ ಸಂಘದ ಗೌರವಾಧ್ಯಕ್ಷ ಹೇಮಂತ್ ಗೌಡ, ಹಳೇಪುರ ಗಿರೀಶ್, ಜಗದೀಶ್, ತೊರೆಮಾವು ಗಿರೀಶ್, ಸೌಭಾಗ್ಯ, ಚಂದನ್ಗೌಡ, ಸಂದೇಶ್ ಸ್ಯಾಂಡಿ ಇದ್ದರು.