ಧನ್‌ತೇರಾಸ್‌ಗೆ ದೇಶದಲ್ಲಿ 30 ಟನ್‌ ಚಿನ್ನ ಮಾರಾಟ!

| Published : Nov 11 2023, 01:18 AM IST / Updated: Nov 11 2023, 01:19 AM IST

ಸಾರಾಂಶ

ಉತ್ತರ ಭಾರತದಲ್ಲಿ ದೀಪಾವಳಿಯ ಆರಂಭದ ದಿನವೆಂದು ಪರಿಗಣಿಸಲಾಗುವ ಧನ್‌ತೇರಾಸ್‌ ನಿಮಿತ್ತ ಶುಕ್ರವಾರ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ

ದೀಪಾವಳಿ ಆರಂಭದ ದಿನ ಮುಗಿಬಿದ್ದು ಬಂಗಾರ ಕೊಂಡ ಜನ

18000 ಕೋಟಿ ರು.ಗೂ ಹೆಚ್ಚಿನ ಮೊತ್ತದ ಚಿನ್ನ, ಆಭರಣ ಸೇಲ್‌

ಪಿಟಿಐ ನವದೆಹಲಿಉತ್ತರ ಭಾರತದಲ್ಲಿ ದೀಪಾವಳಿಯ ಆರಂಭದ ದಿನವೆಂದು ಪರಿಗಣಿಸಲಾಗುವ ಧನ್‌ತೇರಾಸ್‌ ನಿಮಿತ್ತ ಶುಕ್ರವಾರ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ. ಒಂದು ಅಂದಾಜಿನ ಪ್ರಕಾರ 30 ಟನ್‌ಗೂ ಮಿಕ್ಕಿ ಹಳದಿ ಲೋಹವನ್ನು ಜನರು ಒಂದೇ ದಿನ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಅಂದರೆ ಅಂದಾಜು 18000 ಕೋಟಿ ರು. ಮೊತ್ತದ ಚಿನ್ನ ಒಂದೇ ದಿನ ಮಾರಾಟವಾಗಿದೆ.ಈ ಬಾರಿ ಧನ್‌ತೇರಾಸ್‌ಗೆ ಸರಿಯಾಗಿ ಚಿನ್ನದ ದರ ಇಳಿಕೆಯಾಗಿದೆ. 24 ಕ್ಯಾರೆಟ್‌ ಚಿನ್ನದ 10 ಗ್ರಾಮ್‌ಗೆ 63000ಕ್ಕೆ ಹೋಗಿದ್ದ ದರವೀಗ ಸುಮಾರು 60-61 ಸಾವಿರ ರು.ಗೆ ಇಳಿದಿದೆ. ಹೀಗಾಗಿ ಹೂಡಿಕೆ ಹಾಗೂ ಹಬ್ಬದ ಖರೀದಿಗೆ ಇದು ಪ್ರಶಸ್ತವೆಂದು ಪರಿಗಣಿಸಿದ ಜನರು ಮುಗಿಬಿದ್ದು ಚಿನ್ನ ಖರೀದಿಸಿದ್ದಾರೆ.ಚಿನ್ನದ ಜೊತೆಗೆ ಬೆಳ್ಳಿ ಹಾಗೂ ಇನ್ನಿತರ ಲೋಹಗಳು ಹಾಗೂ ಗೃಹಬಳಕೆ ವಸ್ತುಗಳ ಮಾರಾಟವೂ ಶುಕ್ರವಾರ ಭರ್ಜರಿಯಾಗಿ ನಡೆದಿದೆ. ಧನ್‌ತೇರಾಸ್‌ ದಿನ ಯಾವುದಾದರೂ ಹೊಸ ವಸ್ತು ಖರೀದಿಸಬೇಕು, ಅದು ಅಮೂಲ್ಯ ವಸ್ತುವಾಗಿದ್ದರೆ ಒಳ್ಳೆಯದು ಎಂಬ ನಂಬಿಕೆಯಿದೆ.‘ಚಿನ್ನದ ದರ ಸಾಕಷ್ಟು ಇಳಿಕೆಯಾಗಿದೆ. ಇದು ವ್ಯಾಪಾರಿಗಳಿಗೆ ಅನುಕೂಲವಾಗಿದೆ. ಹೀಗಾಗಿ ಶುಕ್ರವಾರ ವ್ಯಾಪಾರ ಚೆನ್ನಾಗಿ ನಡೆದಿದೆ. ಚಿನ್ನದ ಅಂಗಡಿಗಳಿಗೆ ಗ್ರಾಹಕರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ’ ಎಂದು ಅಖಿಲ ಭಾರತ ಆಭರಣ ವ್ಯಾಪಾರಿಗಳ ಮಂಡಳಿಯ ನಿರ್ದೇಶಕ ದಿನೇಶ್‌ ಜೈನ್‌ ತಿಳಿಸಿದ್ದಾರೆ.ಕಳೆದ ವರ್ಷದ ಧನ್‌ತೇರಾಸ್‌ಗೆ 24 ಕ್ಯಾರೆಟ್‌ ಚಿನ್ನ 10 ಗ್ರಾಮ್‌ಗೆ 50,000 ರು. ಆಸುಪಾಸಿನಲ್ಲಿತ್ತು. ಈ ಬಾರಿ 60,000 ರು. ದಾಟಿದೆ. ಅಂದರೆ ಒಂದೇ ವರ್ಷದಲ್ಲಿ ಚಿನ್ನದ ಮೇಲಿನ ಹೂಡಿಕೆದಾರರಿಗೆ ಶೇ.20ರಷ್ಟು ಲಾಭ ಬಂದಿದೆ.