ಸಾರಾಂಶ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಲೋತ್ತಮಾ, ಜೈಲಿನ ಖೈದಿಗಳು ತನ್ನ ಯೋಚನೆ ಬದಲಿಸಿದ ಬಗೆಯನ್ನು ಹೇಳಿದರು. ಅದನ್ನು ಮಾತಲ್ಲೇ ಅದನ್ನು ಕೇಳುವುದು ಇಂಟರೆಸ್ಟಿಂಗ್.
ಬಾಲಿವುಡ್‌ನ ಕ್ಲಾಸ್ ನಟಿ ತಿಲ್ಲೋತ್ತಮ ಶೋಮ್ ಅವರ ‘ಜುಗ್ನುಮಾ’ ಸಿನಿಮಾ ಈ ವಾರ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ‘ಸರ್’ ಎಂಬ ಸಿನಿಮಾದಲ್ಲಿ ಈ ನಟಿಯ ಮನೆಕೆಲಸದ ಹೆಣ್ಣಿನ ಪಾತ್ರ ಬಹಳ ಜನಪ್ರಿಯವಾಗಿತ್ತು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಲೋತ್ತಮಾ, ಜೈಲಿನ ಖೈದಿಗಳು ತನ್ನ ಯೋಚನೆ ಬದಲಿಸಿದ ಬಗೆಯನ್ನು ಹೇಳಿದರು. ಅದನ್ನು ಮಾತಲ್ಲೇ ಅದನ್ನು ಕೇಳುವುದು ಇಂಟರೆಸ್ಟಿಂಗ್.
‘ನನ್ನ ತಂದೆ ಏರ್ ಫೋರ್ಸ್ ಅಧಿಕಾರಿ. ಅಪ್ಪನಿಗೆ ಪದೇ ಪದೇ ದೇಶದ ಬೇರೆ ಬೇರೆ ಭಾಗಗಳಿಗೆ ವರ್ಗಾವಣೆ ಆಗುತ್ತಿತ್ತು. ಹೀಗಾಗಿ ನಾನು ಹೊಸ ಹೊಸ ಜಾಗಗಳಲ್ಲಿ ಬೆಳೆದೆ. ಮುಂದೆ ನ್ಯೂಯಾರ್ಕ್‌ನಲ್ಲಿ ರಂಗಭೂಮಿ ಅಧ್ಯಯನ ನಡೆಸಿದೆ. ಅಲ್ಲಿಯವರೆಗೆ ಮೇಲ್ಮಧ್ಯಮ ವರ್ಗದ ಸಾಮಾನ್ಯ ಬದುಕು ನನ್ನದಾಗಿತ್ತು.
ಆದರೆ ಒಂದು ಹಂತದಲ್ಲಿ, ನಾನು ಕಂಡದ್ದಷ್ಟೇ ಬದುಕಲ್ಲ, ಇದಕ್ಕೆ ಇನ್ನೊಂದು ಆಯಾಮವೂ ಇದೆ ಅಂತ ತಿಳಿಯಿತು. ಅದಕ್ಕೆ ಕಾರಣವಾಗಿದ್ದು ಜೈಲುವಾಸ. ಅಂದರೆ ನಾನೇನೋ ಅಪರಾಧ ಮಾಡಿ ಜೈಲು ಸೇರಿದ್ದಲ್ಲ. ನ್ಯೂಯಾರ್ಕ್‌ನಲ್ಲಿ ನಾಟಕ ಕಲಿತ ಬಳಿಕ, ಹ್ಯೂಮನ್ ಸೈಕಾಲಜಿ ಬಗೆಗಿನ ಹೊಸ ಅಧ್ಯಯನಕ್ಕಾಗಿ ಜೈಲು ಖೈದಿಗಳ ಜೊತೆಗೆ ಎರಡು ವರ್ಷಗಳನ್ನು ಕಳೆದೆ. ನ್ಯೂಯಾರ್ಕ್ ಹೊರವಲಯದ ದ್ವೀಪವೊಂದರಲ್ಲಿದ್ದ ಆ ಜೈಲಿನಲ್ಲಿ ಕುಖ್ಯಾತ ಕೊಲೆಗಾರರು, ಬೇರೆ ಬೇರೆ ಅಪರಾಧಿ ಕೃತ್ಯ ಮಾಡಿದವರೆಲ್ಲ ಇದ್ದರು.
ನನಗೆ ಇಲ್ಲಿ ಸಿಕ್ಕ ದೊಡ್ಡ ರಿಯಲೈಸೇಶನ್ - ವಿವೇಕ ಮತ್ತು ಅವಿವೇಕಗಳ ನಡುವೆ ಇರುವುದು ಬಹಳ ತೆಳುವಾದ ಗೆರೆ ಎನ್ನುವ ಅರಿವು. ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಮನಸ್ಸು ನೈತಿಕತೆ ಬಗ್ಗ ಯೋಚಿಸೋದಿಲ್ಲ. ಹಸಿವು ನೀಗಿಸುವುದಷ್ಟೇ ತುರ್ತು ಆಗಿರುತ್ತದೆ. ಮೇಲ್ಮಧ್ಯಮ ವರ್ಗದಲ್ಲಿ ಬೆಳೆದ ನನಗೆ ಸತ್ಯದ ದರ್ಶನವಾದದ್ದು ಜೈಲಿನಲ್ಲಿ. ಇದು ಬದುಕಿನ ಕುರಿತಾದ ನನ್ನ ದೃಷ್ಟಿಕೋನವನ್ನೇ ಬದಲಿಸಿತು. ಮನುಷ್ಯತ್ವದ ಗಾಢ ಪರಿಚಯ ಮಾಡಿಸಿತು’ ಎನ್ನುತ್ತಾರೆ.
‘ಬಣ್ಣದ ಜಗತ್ತಿನ ಸಮ್ಮೋಹನ ಶಕ್ತಿ ಅಪಾರ. ಆದರೆ ಜೈಲಿನ ಅನುಭವ ಅದಕ್ಕಿಂತ ಗಾಢ, ತೀವ್ರ. ಇಂಥಾ ಎರಡು ಭಿನ್ನ ಜಗತ್ತುಗಳನ್ನು ಸಮೀಪದಿಂದ ಕಂಡಿದ್ದು ಬದುಕಿನ ಧನ್ಯತೆ’ ಎಂಬುದು ತಿಲೋತ್ತಮಾ ಅಂತರಂಗದ ನುಡಿ.