ಸಾರಾಂಶ
ಕಳೆದುಹೋದವನನ್ನು ಹುಡುಕಿಕೊಂಡು ನಗರಕ್ಕೆ ಹೋಗುವ ಹಳ್ಳಿ ಹುಡುಗನೊಬ್ಬ, ಕಾಲನ ಕಾಟಕ್ಕೆ ಸಿಕ್ಕಿ ದಾರಿ ತಪ್ಪಿ ಕಳೆದುಹೋಗಿ ತನ್ನನ್ನು ತಾನೇ ಹುಡುಕಿಕೊಳ್ಳುವ ಕಥನ ಎಕ್ಕ.
ಚಿತ್ರ: ಎಕ್ಕ
ನಿರ್ದೇಶನ: ರೋಹಿತ್ ಪದಕಿ
ತಾರಾಗಣ: ಯುವ ರಾಜ್‌ಕುಮಾರ್, ಸಂಜನಾ ಆನಂದ್, ಸಂಪದಾ ಹುಲಿವಾನ, ಶ್ರುತಿ, ಅತುಲ್ ಕುಲಕರ್ಣಿ
ರೇಟಿಂಗ್: 3
ರಾಜೇಶ್
ಕಳೆದುಹೋದವನನ್ನು ಹುಡುಕಿಕೊಂಡು ನಗರಕ್ಕೆ ಹೋಗುವ ಹಳ್ಳಿ ಹುಡುಗನೊಬ್ಬ, ಕಾಲನ ಕಾಟಕ್ಕೆ ಸಿಕ್ಕಿ ದಾರಿ ತಪ್ಪಿ ಕಳೆದುಹೋಗಿ ತನ್ನನ್ನು ತಾನೇ ಹುಡುಕಿಕೊಳ್ಳುವ ಕಥನ ಎಕ್ಕ.
ಅವನು ಸಾಮಾನ್ಯ ಹುಡುಗ. ಮನೆಗೆ ಮಾಡಿರುವ ಸಾಲ ತೀರಿಸಬೇಕು, ಅಮ್ಮನೊಂದಿಗೆ ಖುಷಿಯಾಗಿ ಇರಬೇಕು. ಅಷ್ಟೇ ಆಸೆ. ಅದಕ್ಕಾಗಿ ನಗರಕ್ಕೆ ಬರುತ್ತಾನೆ. ಅಲ್ಲೊಂದು ಟ್ವಿಸ್ಟು. ಮಧ್ಯದಲ್ಲೊಂದು ಲವ್ವು. ಗ್ಯಾಪಲ್ಲಿ ಹಾಡು. ರುಚಿಗೆ ಬೇಕಾದಷ್ಟು ಸೆಂಟಿಮೆಂಟು. ಒಂದು ಘನಘೋರ ದುರಂತ. ಆ ಹುಡುಗ ಹಾದಿ ತಪ್ಪಿ ನಿಲ್ಲುವಲ್ಲಿಗೆ ಒಂದು ಸಣ್ಣ ವಿರಾಮ.
ಈ ಕತೆಯ ಮಾದರಿ ಹೊಸತಲ್ಲ. ಆ ಮಾದರಿಯಲ್ಲಿ ಹೊಸತು ಹುಡುಕುವ ಪ್ರಯತ್ನ ಮಾಡಲಾಗಿದೆ. ಆಂತರ್ಯದಲ್ಲಿ ಹುಡುಕಾಟವನ್ನು ಧರಿಸಿರುವ ಈ ಸಿನಿಮಾ ನಾಯಕ- ಖಳನಾಯಕರ ಮಧ್ಯದ ಹೋರಾಟದಂತೆ ಕಾಣಿಸುತ್ತದೆ. ತಪ್ಪನ್ನು ಸರಿ ಮಾಡಿಕೊಳ್ಳುವ ಅಂತರ್ಯುದ್ಧದಲ್ಲಿ ನಾಯಕ ಸದಾ ತೊಡಗಿರುತ್ತಾನೆ. ಅದರಲ್ಲಿ ಯಶಸ್ವಿಯಾಗುತ್ತಾನೋ ಇಲ್ಲವೋ ಎಂಬುದೇ ಈ ಕತೆ.
ಮೊದಲು ಸರಳವಾಗಿರುವ ಕತೆ ಮಧ್ಯಂತರದ ಹೊತ್ತಿಗೆ ಗಾಂಭೀರ್ಯ ಧರಿಸಿರುತ್ತದೆ. ಅನಂತರ ತಿರುವು ಮೇಲೆ ತಿರುವು. ಈ ಹೊತ್ತಲ್ಲಿ ಕೊಂಚ ಅವಸರ ಕಾಣಿಸುತ್ತದೆ. ಪಾತ್ರಗಳಿಗೆ ಬಣ್ಣ ಕಳಚುವ ಧಾವಂತ. ಇದ್ದಕ್ಕಿದ್ದಂತೆ ಪಾತ್ರಗಳು ರಂಗದಿಂದ ನಿರ್ಗಮಿಸುತ್ತವೆ. ಪೂರ್ಣತೆ ಇಲ್ಲ. ಕೊನೆಗೊಂದು ದೊಡ್ಡ ಆಸ್ಫೋಟ. ಆಮೇಲೊಂದು ಮಹಾಮೌನ.
ಯುವ ಅವರದು ಬಹಳ ತೀವ್ರವಾದ ಪಾತ್ರ. ತೂಕವೆತ್ತ ಪಾತ್ರ. ಸಂಜನಾ ಆನಂದ್, ಸಂಪದಾರದು ಸೊಗಸಾದ ನಟನೆ. ಅತುಲ್ ಕುಲಕರ್ಣಿ, ಶ್ರುತಿ ಪಾತ್ರಗಳ ಘನತೆ ಹೆಚ್ಚಿಸಿದ್ದಾರೆ. ಚರಣ್‌ರಾಜ್ ಹಾಡುಗಳು ಇಂಪಾಗಿವೆ. ನಾಗಾರ್ಜುನ ಶರ್ಮಾ ಹಾಡಿನ ಸಾಲುಗಳು ಮಜವಾಗಿವೆ.
ಇದೊಂದು ಅಲ್ಲಲ್ಲಿ ಸಣ್ಣ ಸಣ್ಣ ಮೌನಗಳನ್ನು ಅಡಗಿಸಿಟ್ಟುಕೊಂಡಿರುವ ದೊಡ್ಡ ಸದ್ದಿನ ಪಕ್ಕಾ ಕಮರ್ಷಿಯಲ್ ಸಿನಿಮಾ.