ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರ : ಭಾರತದ ವಿರುದ್ಧ ಕೆನಡಾ ನಿರ್ಬಂಧ?

| Published : Oct 16 2024, 12:45 AM IST / Updated: Oct 16 2024, 05:18 AM IST

ಸಾರಾಂಶ

ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರದಲ್ಲಿ ಭಾರತ ಜತೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವ ಕೆನಡಾ, ಈಗ ಭಾರತದ ವಿರುದ್ಧ ನಿರ್ಬಂಧ ಹೇರುವ ಸುಳಿವು ನೀಡಿದೆ.

ಒಟ್ಟಾವಾ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರದಲ್ಲಿ ಭಾರತ ಜತೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವ ಕೆನಡಾ, ಈಗ ಭಾರತದ ವಿರುದ್ಧ ನಿರ್ಬಂಧ ಹೇರುವ ಸುಳಿವು ನೀಡಿದೆ.

ಮಂಗಳವಾರ ಸುದ್ದಿಗಾರರ ಮಾತನಾಡಿದ ಕೆನಡಾ ವಿದೇಶಾಂಗ ಸಚಿವೆ ಮೆಲಾನೀ ಜಾಲಿ ಅವರಿಗೆ ಪತ್ರಕರ್ತರು ‘ಭಾರತದ ವಿರುದ್ಧ ನಿರ್ಬಂಧ ಹೇರುತ್ತೀರಾ?’ ಎಂದು ಪ್ರಶ್ನೆ ಕೇಳಿದಾಗ, ‘ಎಲ್ಲ ಸಾಧ್ಯಾಸಾಧ್ಯತೆಗಳನ್ನೂ ನಾವು ಪರಿಶೀಲಿಸುತ್ತಿದ್ದೇವೆ’ ಎಂದಿದ್ದಾರೆ.

ಆದರೆ ಇದೇ ವೇಳೆ, ‘ಭಾರತದಿಂದ ನಾವು ನಿಜ್ಜರ್‌ ಹತ್ಯೆಯ ತನಿಖೆಗೆ ಸಹಕಾರ ಬಯಸುತ್ತೇವೆ. ಕೆನಡಾ ಪೊಲೀಸರ ವರದಿ ಆಧರಿಸಿ 6 ಭಾರತೀಯ ರಾಯಭಾರಿಗಳನ್ನು ಉಚ್ಚಾಟಿಸಿದ್ದೇವೆ. ಅವರ ವಿಚಾರಣೆಗೆ ನಾವು ನಿರ್ಧರಿಸಿದ್ದೆವು. ಆದರೆ ರಾಜತಾಂತ್ರಿಕ ರಕ್ಷಣೆ ನೆಪವೊಡ್ಡಿ ಭಾರತ ತನಿಖೆಯಿಂದ ಜಾರಿಕೊಂಡಿತು’ ಎಂದು ದೂರಿದರು.

‘ಕೆನಡಾಗೆ ಪ್ರತಿ ವರ್ಷ ಸಾವಿರಾರು ಭಾರತೀಯರು ಬರುತ್ತಾರೆ. ನಮ್ಮವರು ಭಾರತಕ್ಕೂ ಹೋಗುತ್ತಾರೆ. ರಾಜತಾಂತ್ರಿಕ ಬಿಕ್ಕಟ್ಟು ಜನರ ಮೇಲೆ ಪರಿಣಾಮ ಆಗಬಾರದು. ಹೀಗಾಗಿ ಭಾರತವು ತನಿಖೆಗೆ ಸಹಕರಿಸಬೇಕು’ ಎಂದು ಜಾಲಿ ಆಗ್ರಹಿಸಿದರು.