ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಮನೆ ಮನೆಗೂ ಭೇಟಿ ನೀಡಿ 30 ವರ್ಷ ಮೇಲ್ಪಟ್ಟವರ ಸಾಂಕ್ರಾಮಿಕ ಅಲ್ಲದ ರೋಗಗಳ ತಪಾಸಣೆ ನಡೆಸುವುದು, ಔಷಧ ವಿತರಣೆ, ಅಗತ್ಯ ಚಿಕಿತ್ಸೆಗೆ ಸಹಕರಿಸುವ ‘ಗೃಹ ಆರೋಗ್ಯ’ ಯೋಜನೆ ಸೋಮವಾರದಿಂದ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ವಿಕಾಸಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಜನೆ ಕುರಿತು ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸುವ ಜೊತೆಗೆ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೋಲಾರ ಜಿಲ್ಲೆಯಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ತೀರ್ಮಾನಿಸಲಾಗಿದೆ
ಗೃಹ ಆರೋಗ್ಯ:
ಮನೆ-ಮನೆಗೆ ತೆರಳಿ 30 ವರ್ಷ ಮೇಲ್ಪಟ್ಟವರ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ನಡೆಸಿ ರೋಗ ತಪಾಸಣೆ ಜತೆಗೆ ರೋಗ ಪೀಡಿತರಿಗೆ ಉಚಿತ ಔಷಧ ವಿತರಿಸಲಾಗುವುದು. ಈ ಮೂಲಕ ಅಕಾಲಿಕ ಮರಣ ತಡೆಯುವುದು ಯೋಜನೆಯ ಮುಖ್ಯ ಉದ್ದೇಶ. ಇದಕ್ಕಾಗಿ ಉಚಿತ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ, ಅಂತಹ ರೋಗಿಗಳನ್ನು ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ.
ಈ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೆ ತಂದು ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಸಹಾಯದಿಂದ ಮನೆ ಬಾಗಿಲಿಗೆ ತೆರಳಿ ತಪಾಸಣೆ ನಡೆಸುತ್ತಾರೆ. ಕಾಯಿಲೆಯನ್ನು ಮೊದಲೇ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಈ ಕಾರ್ಯಕ್ರಮ ಆರಂಭದ ಹಿಂದಿನ ಉದ್ದೇಶ. ಈ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿ ಮೈಸೂರು ಸೇರಿ ಇತರ ಜಿಲ್ಲೆಗಳಿಗೂ ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
100 ಕೋಟಿ ರು. ವೆಚ್ಚದಲ್ಲಿ ವಿಸ್ತರಣೆ:
2025-26ನೇ ಸಾಲಿನ ಬಜೆಟ್‌ನಲ್ಲಿ ಆರು ಸಾಂಕ್ರಾಮಿಕವಲ್ಲದ ರೋಗಗಳನ್ನು (ಎನ್‌ಸಿಡಿ) ಪರೀಕ್ಷಿಸಲು ಮತ್ತು ಚಿಕಿತ್ಸೆ ನೀಡಲು ರಾಜ್ಯಾದ್ಯಂತ ₹100 ಕೋಟಿ ವೆಚ್ಚದಲ್ಲಿ ‘ಗೃಹ ಆರೋಗ್ಯ’ ಯೋಜನೆ ವಿಸ್ತರಿಸಲು ಪ್ರಸ್ತಾಪಿಸಲಾಗಿತ್ತು. ಇದೀಗ 14 ರೋಗಗಳ ತಪಾಸಣೆಗೆ ನಿರ್ಧರಿಸಲಾಗಿದೆ.
ಪ್ರಸ್ತುತ, ರಾಜ್ಯದ ಜನಸಂಖ್ಯೆಯ ಶೇ.26.9ಕ್ಕೂ ಅಧಿಕ ಮಂದಿ ರಕ್ತದ ಒತ್ತಡ, ಶೇ.15.6 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಜತೆಗೆ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಗ್ರಾಮೀಣ ಸಮುದಾಯಗಳು ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಿರ್ಲಕ್ಷಿಸುತ್ತಿದ್ದು, ಈ ಬಗ್ಗೆ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ 30 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳ ರಕ್ತದೊತ್ತಡ ಮತ್ತು ಮಧುಮೇಹದ ಮಟ್ಟ ಪರಿಶೀಲಿಸುತ್ತಾರೆ.
ಪ್ರತಿ ಸಿಬ್ಬಂದಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ಪ್ರತಿದಿನ ಸುಮಾರು 15 ಮನೆಗಳನ್ನು ಪರಿಶೀಲಿಸುತ್ತಾರೆ. ಈ ಭೇಟಿಗಳ ಸಮಯದಲ್ಲಿ ಮೌಖಿಕ, ಗರ್ಭಕಂಠದ ಮತ್ತು ಸ್ತನ ಕ್ಯಾನ್ಸರ್‌ಗಳ ಮೌಲ್ಯಮಾಪನಗಳನ್ನು ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.