ದೆಹಲಿ ವಿಧಾನಸಭಾ ಚುನಾವಣೆ : ಬಿಜೆಪಿ ಜಯದ ಹಿಂದೆ ಆರೆಸ್ಸೆಸ್‌ನ ಸದ್ದಿಲ್ಲದ ಪ್ರಚಾರದ ಫಲ

| N/A | Published : Feb 10 2025, 01:45 AM IST / Updated: Feb 10 2025, 05:47 AM IST

ಸಾರಾಂಶ

ಮಹಾರಾಷ್ಟ್ರ, ಹರ್ಯಾಣ ಚುನಾವಣೆಯಂತೆ ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ 27 ವರ್ಷಗಳ ಬಳಿಕ ಪ್ರಚಂಡ ಗೆಲುವು ಸಾಧಿಸಿದ ಹಿಂದೆ ಆರೆಸ್ಸೆಸ್‌ ಮಹತ್ವದ ಪಾತ್ರವಹಿಸಿದೆ.

ನವದೆಹಲಿ: ಮಹಾರಾಷ್ಟ್ರ, ಹರ್ಯಾಣ ಚುನಾವಣೆಯಂತೆ ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ 27 ವರ್ಷಗಳ ಬಳಿಕ ಪ್ರಚಂಡ ಗೆಲುವು ಸಾಧಿಸಿದ ಹಿಂದೆ ಆರೆಸ್ಸೆಸ್‌ ಮಹತ್ವದ ಪಾತ್ರವಹಿಸಿದೆ. ಚುನಾವಣೆಗೂ ಮೊದಲೇ ಬಿಜೆಪಿ ಪರವಾಗಿ ಜನಾಭಿಪ್ರಾಯ ರೂಪಿಸಿ, ದಿಲ್ಲಿ ಗದ್ದುಗೆಯಿಂದ ಆಪ್‌ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷಗಳು ಬಹಿರಂಗವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದರೆ ಆರೆಸ್ಸೆಸ್‌ ಮಾತ್ರ ತಳಮಟ್ಟದಲ್ಲಿ ಸದ್ದಿಲ್ಲದೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿತ್ತು. ದೆಹಲಿಯಾದ್ಯಂತ ಸಾವಿರಾರು ಕಿರು ಸಭೆಗಳನ್ನು ನಡೆಸಿ ಸ್ವಚ್ಛತೆ, ಕುಡಿಯಲು ಯೋಗ್ಯ ನೀರು ಪೂರೈಕೆ ಮತ್ತು ಆರೋಗ್ಯ ಸೇವೆಗಳು, ವಾಯುಮಾಲಿನ್ಯ ಮತ್ತು ಯಮುನಾ ನದಿ ಸ್ವಚ್ಛತೆ ಕುರಿತು ಜನಾಭಿಪ್ರಾಯ ರೂಪಿಸಿತ್ತು.

ಈ ಸಭೆಗಳಲ್ಲಿ ಆಮ್‌ ಆದ್ಮಿ ಪಕ್ಷದ ದೆಹಲಿ ಮಾದರಿ ಆಡಳಿತದ ವೈಫಲ್ಯಗಳನ್ನು ಎತ್ತಿತೋರಿಸಿದ ಸ್ವಯಂಸೇವಕರು, ಭ್ರಷ್ಟಾಚಾರ ಹಾಗೂ ಕಳೆದ 10 ವರ್ಷಗಳಲ್ಲಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ಕೇಜ್ರಿವಾಲ್‌ ಸರ್ಕಾರದ ವೈಫಲ್ಯಗಳನ್ನು ಎತ್ತಿತೋರಿಸಲಾಯಿತು. ಅಕ್ರಮ ನಿವಾಸಿಗಳ ಕುರಿತೂ ಈ ವೇಳೆ ಚರ್ಚೆ ಮಾಡಲಾಯಿತು. ದ್ವಾರಕಾ ಪ್ರದೇಶವೊಂದರಲ್ಲೇ ಕನಿಷ್ಠ ಇಂಥ 500 ಸಣ್ಣ ಗುಂಪು ಸಭೆಗಳನ್ನು ಆಯೋಜಿಸಲಾಗಿತ್ತು ಎಂದು ಆರೆಸ್ಸೆಸ್‌ ಮೂಲಗಳು ತಿಳಿಸಿವೆ.

ವಿಶೇಷವೆಂದರೆ ಇಂಥ ಸಭೆಗಳಲ್ಲಿ ಜನರಿಗೇನು ಪರಿಣಾಮ ಬೀರುತ್ತವೆಯೋ ಆ ವಿಚಾರಗಳನ್ನಷ್ಟೇ ಚರ್ಚೆ ಮಾಡಲಾಗುತ್ತಿತ್ತು. ಎಲ್ಲೂ ಇದೇ ಪಕ್ಷಕ್ಕೆ ಮತಹಾಕಿ ಎಂದು ಆಗ್ರಹಿಸುವ ಕೆಲಸ ಮಾಡಲಿಲ್ಲ. ಈ ಮೂಲಕ ಜನ ಸುತ್ತಮುತ್ತಲಿನ ಸಮಸ್ಯೆಗಳನ್ನು ಅರಿತುಕೊಂಡು ಸಮರ್ಥ ಉತ್ತರದಾಯಿ ಸರ್ಕಾರವನ್ನು ಆಯ್ಕೆ ಮಾಡಲು ಪ್ರೇರೇಪಿಸಲಾಯಿತು.

ಹಾಗೆ ನೋಡಿದರೆ ಚುನಾವಣೆಗೆ ಒಂದು ತಿಂಗಳ ಮೊದಲೇ ಆರೆಸ್ಸೆಸ್‌ ಸ್ವಯಂಸೇವಕರು ಮೈದಾನಕ್ಕೆ ಇಳಿದಿದ್ದರು,

ಪ್ರಚಾರ ಕಾರ್ಯ ಆರಂಭಿಸಿದ್ದರು. ಆಪ್‌ಗೆ ಹೆಚ್ಚಿನ ಬೆಂಬಲ ಸಿಗುತ್ತಿದ್ದ ಸ್ಲಮ್‌ಗಳು ಮತ್ತು ಅನಧಿಕೃತ ಕಾಲನಿಗಳಲ್ಲಿ ಸಣ್ಣ ಸಣ್ಣ ಸಭೆಗಳನ್ನು ನಡೆಸಿದರು. ಸಮಾನ ಮನಸ್ಕ ವ್ಯಕ್ತಿಗಳು ಮತ್ತು ಸಂಘಟನೆಗಳ ಜತೆಗೂ ಸೇರಿಕೊಂಡು ಇಂಥ ಪ್ರದೇಶಗಳಲ್ಲಿ ಜಾಗೃತಿ ಕೆಲಸ ಮಾಡಲಾಯಿತು ಎಂದು ಆರೆಸ್ಸೆಸ್‌ ಮೂಲಗಳು ತಿಳಿಸಿವೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೆಸ್ಸೆಸ್‌ ಆ ಬಳಿಕ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಆರಂಭಿಸಿತು. ಮುಖ್ಯವಾಗಿ

ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಹೆಚ್ಚಿನ ಗಮನ ನೀಡಿತು. ಇದೀಗ ದೆಹಲಿಯಲ್ಲೂ ಬಿಜೆಪಿ ಮತ್ತು ಆರೆಸ್ಸೆಸ್‌ ಜತೆಯಾಗಿ ನಡೆಸಿದ ಪ್ರಚಾರದಿಂದಾಗಿ ಅಭೂತಪೂರ್ವ ಗೆಲುವು ಸಿಗುವಂತಾಯಿತು.

ಬಿಜೆಪಿ ಸಿಎಂ ‘ಶೀಷ್ ಮಹಲ್’ನಲ್ಲಿ ವಾಸಿಸಲ್ಲ: ದೆಹಲಿ ಬಿಜೆಪಿ ಅಧ್ಯಕ್ಷ ಘೋಷಣೆ

ನವದೆಹಲಿ: ಅರವಿಂದ ಕೇಜ್ರಿವಾಲ್ ದೆಹಲಿ ಸಿಎಂಗಾಗಿ ನೂತನವಾಗಿ ನಿರ್ಮಿಸಿದ ಶೀಷ್‌ಮಹಲ್‌ ಕುಖ್ಯಾತಿಯ ಐಷಾರಾಮಿ ಸರ್ಕಾರಿ ನಿವಾಸದಲ್ಲಿ ಬಿಜೆಪಿ ಮುಖ್ಯಮಂತ್ರಿಗಳು ಬಳಸುವುದಿಲ್ಲ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ ತಿಳಿಸಿದ್ದಾರೆ. ದೆಹಲಿಯ ಸಿವಿಲ್ ಲೈನ್ಸ್‌ನ ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ಶೀಷ್ ಮಹಲ್ ಬಂಗಲೆ ನವೀಕರಣದಲ್ಲಿ ಕೇಜ್ರಿವಾಲ್ ಅಕ್ರಮವೆಸಗಿದ್ದು, ಕೋಟ್ಯಂತರ ರು. ಹಗರಣ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದೇ ವಿಷಯವನ್ನಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸಿತ್ತು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿಗೆ ಶೀಷ್ ಮಹಲ್ ಪ್ರಕರಣ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದೀಗ ಬಿಜೆಪಿ ತಮ್ಮ ಮುಖ್ಯಮಂತ್ರಿ ಆ ನಿವಾಸವನ್ನು ಬಳಸುವುದಿಲ್ಲ ಎಂದು ಘೋಷಿಸಿದೆ.

ದಿಲ್ಲಿ ಸೋಲು ಆಪ್‌ ಪತನದ ಆರಂಭ, ಸೋಲಿಗೆ ಕೇಜ್ರಿ ಹೊಣೆ: ಪ್ರಶಾಂತ್‌ ಭೂಷಣ್‌

ನವದೆಹಲಿ: ದೆಹಲಿ ಚುನಾವಣೆಯಲ್ಲಿ ಆಪ್‌ ಸೋಲಿಗೆ ಪಕ್ಷದ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ನೇರ ಹೊಣೆ ಎಂದು ಪಕ್ಷದ ಉಚ್ಛಾಟಿತ ನಾಯಕ, ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಭೂಷಣ್‌, ‘ಇದು ಆಪ್‌ನ ಸೋಲಿನ ಆರಂಭ. ಆಪ್ ಸೋಲಿಗೆ ಕೇಜ್ರಿವಾಲ್‌ ಅವರೇ ನೇರ ಹೊಣೆ. 2012ರಲ್ಲಿ ಆಮ್‌ ಆದ್ಮಿ ಪಕ್ಷವನ್ನು ಪಾರದರ್ಶಕತೆ, ಪ್ರಜಾಪ್ರಭುತ್ವ, ಜವಾಬ್ದಾರಿಯುತ, ಭ್ರಷ್ಟಾಚಾರ ವಿರೋಧಿ ಸಿದ್ಧಾಂತ ಮತ್ತು ಪರ್ಯಾಯ ರಾಜಕಾರಣದ ಮೇಲೆ ಸ್ಥಾಪಿಸಿ ಅಧಿಕಾರ ಪಡೆಯಲಾಗಿತ್ತು. ಆದರೆ ಕೇಜ್ರಿವಾಲ್‌ ತಮ್ಮ ಶೀಷ್‌ಮಹಲ್‌, ಐಷಾರಾಮಿ ಜೀವನ ಮತ್ತು ಭ್ರಷ್ಟಾಚಾರಗಳಿಂದ ಕೂಡಿದ ಆಡಳಿತದಿಂದ ಸಿದ್ಧಾಂತವನ್ನು ತಲೆಕೆಳಗಾಗಿಸಿದರು. ಹೀಗಾಗಿ ಆಪ್‌ ಈ ರೀತಿ ಸೋಲು ಕಂಡಿದೆ’ ಎಂದು ಭೂಷಣ್‌ ಕಿಡಿಕಾರಿದ್ದಾರೆ.