ಸಾರಾಂಶ
ಇಂಫಾಲ್: ಕಳೆದ ಕೆಲ ದಿನಗಳಿಂದ ಮತ್ತೆ ಸಣ್ಣಪುಟ್ಟ ಹಿಂಸಾಚಾರದ ಮೂಲಕ ಉದ್ವಿಗ್ನ ಪರಿಸ್ಥಿತಿಗೆ ಸಾಕ್ಷಿಯಾಗಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಸೋಮವಾರ ಭಾರೀ ಪ್ರಮಾಣದ ಹಿಂಸಾಚಾರ ನಡೆದಿದೆ. ಜಿರಿಬಮ್ ಜಿಲ್ಲೆಯ ಪೊಲೀಸ್ ಠಾಣೆ ಮತ್ತು ಸಿಆರ್‌ಪಿಎಫ್ ಕ್ಯಾಂಪ್‌ನ ಮೇಲೆ ಕುಕಿ ಉಗ್ರರ ಗುಂಪೊಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿದೆ.
ಈ ವೇಳೆ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ 11 ಕುಕಿ ಉಗ್ರರು ಸಾವನ್ನಪ್ಪಿದ್ದಾರೆ. ಜೊತೆಗೆ ಗುಂಡಿನ ಚಕಮಕಿ ವೇಳೆ ಸಿಆರ್‌ಪಿಎಫ್‌ನ ಇಬ್ಬರು ಯೋಧರು ಕೂಡಾ ಗಾಯಗೊಂಡಿದ್ದು ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಏನಾಯ್ತು?:
ಕುಕಿ ಉಗ್ರರ ಗುಂಪೊಂದು ಸೋಮವಾರ ಮಧ್ಯಾಹ್ನ ಜಿರಿಬಮ್ ಜಿಲ್ಲೆಯ ಬೊರೊಬೆಕ್ರಾ ಪೊಲೀಸ್ ಠಾಣೆ ಹಾಗೂ ಬಳಿಯಲ್ಲಿದ್ದ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಮಧ್ಯಾಹ್ನ ದಾಳಿ ನಡೆಸಿದೆ. ಜೊತೆಗೆ ಸಮೀಪದ ಮಾರುಕಟ್ಟೆಗೂ ಹೋಗಿ ಅಂಗಡಿಗಳಿಗೆ ಬೆಂಕಿ ಇಟ್ಟು, ಹಲವು ಮನೆಗಳ ಮೇಲೆ ದಾಳಿ ನಡೆದಿದೆ.ಈ ವೇಳೆ ಈ ವೇಳೆ ಯೋಧರು ಪ್ರತಿದಾಳಿ ನಡೆಸಿದ್ದು, ಒಂದು ಗಂಟೆ ಕಾಲ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ 11 ಉಗ್ರರು ಸಾವನ್ನಪ್ಪಿದ್ದಾರೆ. 11 ಕುಕಿಗಳ ಸಾವಿನ ಹಿನ್ನೆಲೆಯಲ್ಲಿ ಕುಕಿ ಸಂಘಟನೆಯಾದ ಕುಕಿ ಝೋ, ಮಂಗಳವಾರ ಬೆಳಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆವರೆಗೆ ಗುಡ್ಡಗಾಡು ಪ್ರದೇಶದಲ್ಲಿ ಬಂದ್‌ಗೆ ಕರೆ ಕೊಟ್ಟಿದೆ.
ಈ ನಡುವೆ ಘಟನಾ ಸ್ಥಳದಿಂದ ಉಗ್ರರು ಕೆಲ ನಾಗರಿಕರನ್ನು ಅಪಹರಿಸಿರುವ ಶಂಕೆ ಕೂಡಾ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಭದ್ರತಾ ಪಡೆಗಳು ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿವೆ.
ಕಳೆದ ವರ್ಷದ ಮೇ ತಿಂಗಳ ಬಳಿಕ ರಾಜ್ಯದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯದ ನಡುವೆ ನಡೆದ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
- ಕಳೆದ ವರ್ಷದಿಂದ ಕುಕಿ ಮತ್ತು ಮೈತೇಯಿ ಜನಾಂಗಗಳ ಘರ್ಷಣೆಯಿಂದ ಉದ್ವಿಗ್ನ ಸ್ಥಿತಿಗೆ ತಲುಪಿರುವ ಮಣಿಪುರ
- ವ್ಯಾಪಕ ಸೇನಾ ಕಾರ್ಯಾಚರಣೆ ಬಳಿಕ ಇತ್ತೀಚೆಗೆ ಪರಿಸ್ಥಿತಿ ಶಾಂತ
- ಈಗ ಏಕಾಏಕಿ ಮತ್ತೆ ಜಿರಿಬಮ್ ಜಿಲ್ಲೆಯಲ್ಲಿ ಕುಕಿಗಳಿಂದ ಹಿಂಸಾಚಾರ
- ಪೊಲೀಸ್ ಠಾಣೆ, ಸಿಆರ್‌ಪಿಎಫ್ ಕ್ಯಾಂಪ್, ಅಂಗಡಿಗಳ ಮೇಲೆ ದಾಳಿ
- ಯೋಧರು ನಡೆಸಿದ ಭೀಕರ ಪ್ರತಿ ದಾಳಿಯಲ್ಲಿ 11 ಕುಕಿ ಉಗ್ರರ ಹತ್ಯೆ