ಸಾರಾಂಶ
ನವದೆಹಲಿ: ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 121 ಬಾಂಗ್ಲಾ ಪ್ರಜೆಗಳನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಶೀಘ್ರ ಗಡೀಪಾರು ಮಾಡಲು ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ವಲಸಿಗರಯ ಬೇಟೆಗೆ ಇಳಿದ ದಿಲ್ಲಿ ಪೊಲೀಸರು ಕಳೆದ 1 ವಾರದಿಂದ 831 ಶಂಕಿತ ಬಾಂಗ್ಲಾ ವಲಸಿಗರ ದಾಖಲೆಗಳನ್ನು ಪರಿಶೀಲಿಸಿದೆ. ಇದರಲ್ಲಿ 121 ಜನರು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ. ಅದಕ್ಕಾಗಿ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ ಮುಖಾಂತರ ಗಡೀಪಾರು ಪ್ರಕ್ರಿಯೆ ಆರಂಭವಾಗಿದೆ. ಜೊತೆಗೆ ಇವರಿಗೆ ಮನೆ ಬಾಡಿಗೆ ಕೊಟ್ಟಿದ್ದ, ಅಕ್ರಮವಾಗಿ ವಿದ್ಯುತ್ ಸಂಪರ್ಕ ಒದಗಿಸಿದ್ದ ಆರೋಪದ ಮೇಲೆ ಐವರು ಭಾರತೀಯರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಟಿದ ಷೇರುಪೇಟೆ: ಸೆನ್ಸೆಕ್ಸ್ 760, ನಿಫ್ಟಿ 243 ಅಂಕ ಏರಿಕೆ
ಮುಂಬೈ: ಗುರುವಾರ ಕುಸಿದಿದ್ದ ಭಾರತೀಯ ಷೇರುಪೇಟೆ ಶುಕ್ರವಾರ ಮತ್ತೆ ಏರುಹಾದಿ ಹಿಡಿದಿದೆ. ಬಾಂಬೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 769.09 ಅಂಕ (ಶೇ.1ರಷ್ಟು) ಏರಿಕೆ ಕಂಡು 81,721.08 ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 243.45 ಅಂಕ ಹೆಚ್ಚಳವಾಗಿ 24,853.15ಕ್ಕೆ ಏರಿಕೆ ಕಂಡಿತು. ಪವರ್ ಕ್ಷೇತ್ರ, ಎಫ್‌ಎಂಜಿಸಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಬೆಳವಣಿಗೆಯು ಷೇರುಪೇಟೆ ಏರಿಕೆಗೆ ಕಾರಣವಾಗಿವೆ. ಗುರುವಾರ ಸೆನ್ಸೆಕ್ಸ್ 645 ಅಂಕ ಕುಸಿತ ಕಂಡಿತ್ತು.
ಐಪಿಎಲ್ ಹೆಸರಿನಲ್ಲಿ ಬೆಟ್ಟಿಂಗ್, ಜೂಜು: ಸುಪ್ರೀಂ ಕಿಡಿ
ನವದೆಹಲಿ: ‘ಇತ್ತೀಚಿನ ದಿನಗಳಲ್ಲಿ ಐಪಿಎಲ್ ಹೆಸರಿನಲ್ಲಿ ಜನರು ಬೆಟ್ಟಿಂಗ್, ಜೂಜಾಟದಲ್ಲಿ ತೊಡಗಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ ಹಾಗೂ ಬೆಟ್ಟಿಂಗ್ ಆ್ಯಪ್‌ಗಳ ನಿಯಂತ್ರಣದ ಬಗ್ಗೆ ಕೇಂದ್ರದಿಂದ ಪ್ರತಿಕ್ರಿಯೆ ಬಯಸಿದೆ.ಬೆಟ್ಟಿಂಗ್ ಆ್ಯಪ್‌ಗಳನ್ನು ಮಾಜಿ ಕ್ರಿಕೆಟಿಗರು, ತಾರೆಯರು, ಸಿನಿ ನಟ-ನಟಿಯರು ಉತ್ತೇಜಿಸುತ್ತಿದ್ದಾರೆ. ಇದರಿಂದಾಗಿ ಸಾವಿರಾರು ಮಕ್ಕಳು, ಜನರು ಬಲಿಯಾಗುತ್ತಿದ್ದಾರೆ. ಆ್ಯಪ್ ವೆಬ್‌ಸೈಟ್‌ಗಳ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಕೆ.ಎ.ಪಾಲ್ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ತನ್ನ ಅಸಹಾಯಕತೆ ಹೊರಹಾಕಿದ ದ್ವಿಸದಸ್ಯ ಪೀಠ,‘ಸಮಾಜಕ್ಕೆ ಬುದ್ಧಿಭ್ರಮಣೆಯಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು, ಜನರು ಐಪಿಎಲ್ ಹೆಸರಿನಲ್ಲಿ ಜೂಜಾಟಲ್ಲಿ ತೊಡಗಿದ್ದಾರೆ. ಈ ನಡುವೆ ಮಕ್ಕಳು ಶಾಲೆಗೂ ಮೊಬೈಲ್ ತೆಗೆದುಕೊಂಡು ಹೋಗುತ್ತಿದ್ದಾರೆ. ಅದರಲ್ಲಿ ಇಂಟರ್ನೆಟ್ ಸಹ ಇದೆ. ಇದು ಸಂಪೂರ್ಣ ಸಾಮಾಜಿಕ ವಿಪಥನ. ಜನರು ಸ್ವಯಂಪ್ರೇರಿತರಾಗಿ ಬೆಟ್ಟಿಂಗ್ ಆಡುತ್ತಿದ್ದಾರೆ. ಏನು ಮಾಡುವುದು?’ ಎಂದು ಅಭಿಪ್ರಾಯಪಟ್ಟಿತು.ಜೊತೆಗೆ ‘ಇದನ್ನು ನಿಲ್ಲಿಸುವ ಸ್ಥಾನದಲ್ಲಿಯೂ ನಾವಿಲ್ಲ. ಕಾನೂನು ಮೂಲಕ ನಿರ್ಬಂಧಿಸಬಹುದು ಎಂದು ಅಂದುಕೊಂಡರೆ ಅದು ತಪ್ಪು ತಿಳಿವಳಿಕೆ’ ಎಂದಿತು.
ಸಲ್ಲು ನಿವಾಸಕ್ಕೆ ಸಂದರ್ಶಕರ ಭೇಟಿಗೆ ಕಠಿಣ ನಿಯಮ
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ, ಬಾಂದ್ರಾ ನಿವಾಸಕ್ಕೆ ಇಬ್ಬರ ಅಕ್ರಮ ಪ್ರವೇಶ ಘಟನೆ ಬೆನ್ನಲ್ಲೇ ನಟನ ನಿವಾಸಕ್ಕೆ ಸಂದರ್ಶಕರ ಭೇಟಿ ನಿಯಮದಲ್ಲಿ ಕಠಿಣ ನಿಯಮವನ್ನು ಜಾರಿಗೆ ತರಲು ಮುಂಬೈ ಪೊಲೀಸರು ಚಿಂತನೆ ನಡೆಸಿದ್ದಾರೆ.ಇದು ಅಪಾರ್ಟ್‌ಮೆಂಟ್ ಆಗಿರುವ ಕಾರಣ ಪ್ರತಿಯೊಬ್ಬ ಸಂದರ್ಶಕರನ್ನು ತಪಾಸಣೆ ನಡೆಸುವುದು ಸವಾಲಿನ ಕೆಲಸ. ಹೀಗಾಗಿ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಹೊಸ ಸಂದರ್ಶಕರು ಪ್ರವೇಶ ಪಡೆಯಬೇಕಾದರೆ ಅವರು ತಮ್ಮ ಗುರುತನ್ನು ದೃಢಪಡಿಸುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ತಂಡದಿಂದ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಅವರಿಗೆ ವೈ ಪ್ಲಸ್ ಭದ್ರತೆ ಒದಗಿಸಲಾಗಿತ್ತು. ಈ ನಡುವೆ ಇತ್ತೀಚೆಗಷ್ಟೇ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಅಕ್ರಮ ಪ್ರವೇಶಕ್ಕೆ ಯತ್ನಿಸಿದ ಆರೋಪದ ಮೇಲೆ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಈ ಎಲ್ಲ ಘಟನೆಗಳನ್ನು ಪರಿಗಣಿಸಿ ಮುಂಬೈ ಪೊಲೀಸರು ಸಂದರ್ಶಕರ ಪ್ರವೇಶವನ್ನು ನಿಯಂತ್ರಿಸುವ ಮತ್ತು ಭದ್ರತಾ ವ್ಯವಸ್ಥೆಗಳನ್ನು ಸುಧಾರಿಸಲು ಚಿಂತನೆ ನಡೆಸಿದ್ದಾರೆ.