ಸಾರಾಂಶ
ನವದೆಹಲಿ: ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಈ ವರ್ಷ ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಅಕ್ರಮವಾಗಿ ಚಿನ್ನಾಭರಣಗಳನ್ನು ಸಾಗಿಸುತ್ತಿದ್ದವರ ಭರ್ಜರಿ ಬೇಟೆಯಾಡಿದ್ದು , ವರ್ಷದಲ್ಲೇ ಬರೋಬ್ಬರಿ 13 ಸಾವಿರ ಕೋಟಿ ರು. ಮೊತ್ತದ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದೆ.
ಬಿಎಸ್‌ಎಫ್ ಸಂಸ್ಥಾಪನಾ ದಿನದಂದು ಬಿಡುಗಡೆಯಾದ ಅಂಕಿ ಅಂಶದ ಪ್ರಕಾರ, ಒಂದು ವರ್ಷದಲ್ಲಿ ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಅಕ್ರಮ ಮಾರ್ಗವಾಗಿ ಭಾರತಕ್ಕೆ ಸಾಗಿಸುತ್ತಿದ್ದ 172 ಕೇಜಿ ಬಂಗಾರ, 178 ಕೇಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ 11,866 ಕೇಜಿ ಮಾದಕ ವಸ್ತುಗಳು, 3.26 ಕೋಟಿ ಮೊತ್ತದ ಖೋಟಾ ನೋಟು ಪತ್ತೆಯಾಗಿದೆ. ಅಲ್ಲದೇ 4,168 ಮಂದಿಯನ್ನು ಬಂಧಿಸಿದ್ದಾರೆ.
ನಾಡಿದ್ದು ಬಾಂಗ್ಲಾಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಮಿಸ್ರಿ
ನವದೆಹಲಿ: ನೆರೆಯ ಬಾಂಗ್ಲಾದೇಶದಲ್ಲಿ ಇಸ್ಕಾನ್ ಸನ್ಯಾಸಿ ಬಂಧನ, ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವ ನಡುವೆಯೇ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಡಿ.9ರಂದು ಬಾಂಗ್ಲಾಗೆ ಭೇಟಿ ನೀಡಲಿದ್ದಾರೆ.ಈ ಕುರಿತು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದು, ‘ಡಿ.9ರಂದು ಬಾಂಗ್ಲಾಗೆ ತೆರಳಲಿರುವ ಮಿಸ್ರಿ ಹಲವು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಉಭಯ ದೇಶಗಳ ಸಂಬಂಧದ ಕುರಿತು ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ’ ಎಂದರು.
ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದಡಿ ಭಾರತ- ಬಾಂಗ್ಲಾ ಸಂಬಂಧ ಹದಗೆಡುವ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ ಈ ಭೇಟಿ ನಿಗದಿಯಾಗಿರುವುದು ಮಹತ್ವ ಪಡೆದುಕೊಂಡಿದೆ.