ಸಾರಾಂಶ
ಮುಂಬೈ : ರಿಸರ್ವ್ ಬ್ಯಾಂಕ್ ಸತತ 11ನೇ ಬಾರಿಗೆ ಸಾಲದ ಬಡ್ಡಿ ದರಗಳನ್ನು ಬದಲಾವಣೆ ಮಾಡದೇ ಇರಲು ನಿರ್ಧರಿಸಿದೆ. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರವನ್ನು ಈ ಹಿಂದಿನ ಅಂದಾಜಿನ ಶೇ.7.2ರ ಬದಲು ಶೇ.6.6ಕ್ಕೆ ಇಳಿಸಿದೆ.
ಇದೇ ವೇಳೆ, ಈ ವಿತ್ತೀಯ ವರ್ಷದಲ್ಲಿ ಹಣದುಬ್ಬರ ಈ ಹಿಂದಿನ ಅಂದಾಜಿನ ಶೇ.4.5ರ ಬದಲು ಶೇ.4.8ಕ್ಕೆ ಹೆಚ್ಚಬಹುದು ಎಂದು ಅದು ತನ್ನ ಗುರಿಯನ್ನು ಬದಲಿಸಿಕೊಂಡಿದೆ.
ಶುಕ್ರವಾರ ದ್ವೈಮಾಸಿಕ ವಿತ್ತ ನೀತಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಈ ಬಾರಿಯೂ ಬಡ್ಡಿದರ ಬದಲಾವಣೆ ಮಾಡದೇ ಇರಲು ನಿರ್ಧರಿಸಲಾಗಿದ್ದು ರೇಪೋ ದರ ಶೇ.6.5ರಲ್ಲೇ ಮುಂದುವರಿಯಲಿದೆ ಎಂದರು. ಕಳೆದ ವರ್ಷ ಏಪ್ರಿಲ್‌ನಿಂದ ಬಡ್ಡಿದರ ಯಥಾಸ್ಥಿತಿಯಲ್ಲಿದೆ. ಅದಕ್ಕಿಂತ ಹಿಂದೆ 6 ಬಾರಿ ಸತತವಾಗಿ ಶೇ.2.5ರವರೆಗೆ ಹೆಚ್ಚಳಮಾಡಲಾಗಿತ್ತು.
ಸಿಆರ್‌ಆರ್ ಶೇ.4ಕ್ಕಿಳಿಕೆ: ಬ್ಯಾಂಕ್‌ಗಳಿಗೆ ಸಿಗುತ್ತೆ 1.16 ಲಕ್ಷ ಕೋಟಿ ರು.
ಮುಂಬೈ: ಬ್ಯಾಂಕ್‌ಗಳ ಮೇಲಿನ ಒತ್ತಡವನ್ನು ತಗ್ಗಿಸಲು, ರಿಸರ್ವ್ ಬ್ಯಾಂಕ್ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಅನ್ನು ಶೇ4.5ರಿಂದ ಶೇ.4ಕ್ಕೆ ಇಳಿಸಿದೆ. ಇದರಿಂದ ಬ್ಯಾಂಕ್‌ಗಳಿಗೆ 1.16 ಲಕ್ಷ ಕೋಟಿ ರು. ಲಭಿಸಲಿದೆ. ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇಡುವ ಠೇವಣಿಗೆ ಸಿಆರ್‌ಆರ್ ಎನ್ನಲಾಗುತ್ತದೆ. ಸಿಆರ್‌ಆರ್ ಕಮ್ಮಿ ಮಾಡಿರುವ ಕಾರಣ ಆರ್‌ಬಿಐನಲ್ಲಿ ಬ್ಯಾಂಕ್‌ಗಳು ಇಡುವ ಠೇವಣಿ ಮೊತ್ತ ಕಡಿಮೆ ಆಗಲಿದೆ.
ಖಾತರಿ ರಹಿತ ಕೃಷಿ ಸಾಲದ ಮಿತಿ 2 ಲಕ್ಷ ರು.ಗೆ ಹೆಚ್ಚಳಹಣದುಬ್ಬರ ಮತ್ತು ಕೃಷಿ ಖರ್ಚು ವೆಚ್ಚಗಳ ಹೆಚ್ಚಳದ ಕಾರನ ರಿಸರ್ವ್ ಬ್ಯಾಂಕ್ ಶುಕ್ರವಾರ ಖಾತರಿ ರಹಿತ ಕೃಷಿ ಸಾಲದ ಮಿತಿಯನ್ನು ಪ್ರತಿ ಸಾಲಗಾರನಿಗೆಅಸ್ತಿತ್ವದಲ್ಲಿರುವ 1.6 ಲಕ್ಷ ರು.ನಿಂದ 2 ಲಕ್ಷ ರು.ಗೆ ಹೆಚ್ಚಿಸಿದೆ. ಇದರಿಂದಾಗಿ ಬ್ಯಾಂಕ್‌ಗಳು ಇನ್ನು ರೈತರಿಗೆ 2 ಲಕ್ಷ ರು.ವರೆಗೆ ಖಾತರಿ ರಹಿತ ಕೃಷಿ ಸಾಲ ನೀಡಬೇಕಾಗುತ್ತದೆ.
ಯುಪಿಐ ಮೂಲಕ ಸಾಲ: ಸಣ್ಣ ಹಣಕಾಸು ಬ್ಯಾಂಕ್‌ಗಳಿಗೆ ಅಸ್ತು
ಮುಂಬೈ: ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ಪೂರ್ವ ಮಂಜೂರಾದ ಸಾಲ ಸೌಲಭ್ಯವನ್ನು ನೀಡಲು ಸಣ್ಣ ಹಣಕಾಸು ಬ್ಯಾಂಕ್‌ಗಳಿಗೆ ಅವಕಾಶ ನೀಡಲಾಗುವುದು ಎಂದು ಆರ್‌ಬಿಐ ಘೋಷಿಸಿದೆ. ಇದರಿಂದ ತ್ವರಿತವಾಗಿ ಹಾಗೂ ಸುಲಭವಾಗಿ ಸಾಲ ಲಭ್ಯವಾಗಲಿದೆ.
ಅನಿವಾಸಿ ಭಾರತೀಯರಿಗೆ ಇನ್ನು ಹೆಚ್ಚು ಬಡ್ಡಿ
ಮುಂಬೈ: ವಿದೇಶಿ ಕರೆನ್ಸಿ ಅನಿವಾಸಿ ಭಾರತೀಯರ ಬ್ಯಾಂಕ್ ಠೇವಣಿ (ಎಫ್‌ಸಿಎನ್‌ಆರ್) ಠೇವಣಿಗಳ ಮೇಲಿನ ಬಡ್ಡಿದರದ ಮಿತಿಯನ್ನು ಆರ್‌ಬಿಐ ಶುಕ್ರವಾರ ಹೆಚ್ಚಿಸಿದೆ, ಇದು ಎನ್‌ಆರ್‌ಐಗಳು ತಮ್ಮ ಉಳಿತಾಯದ ಮೇಲೆ ಹೆಚ್ಚು ಗಳಿಸಲು ಅನುವು ಮಾಡಿಕೊಡುತ್ತದೆ. ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಗಳಿಂದ ಹಣ ಹೊರತೆಗೆಯುತ್ತಿದ್ದು, ಇದರಿಂದ ರುಪಾಯಿ ಒತ್ತಡಕ್ಕೆ ಸಿಲುಕುತ್ತಿದೆ. ಹೀಗಾಗಿ ಹೆಚ್ಚಿನ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಈ ಕ್ರಮ ಜರುಗಿಸಲಾಗಿದೆ.
ಆರ್‌ಬಿಐ ಗವರ್ನರ್ ಹುದ್ದೆಯಲ್ಲಿ ದಾಸ್ 3ನೇ ಸಲ ಮುಂದುವರಿಕೆ?
ನವದೆಹಲಿ: ಪ್ರಸ್ತುತ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಮುಂದಿನ ಅವಧಿಗೂ ಅದೇ ಹುದ್ದೆಯಲ್ಲಿ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಲು ದಾಸ್ ನಿರಾಕರಿಸಿದ್ದಾರೆ.2018ರ ಡಿ.12ರಂದು ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದ ದಾಸ್ ಅವರ ಅವಧಿ ಡಿ.10ರಂದು ಮುಕ್ತಾಯವಾಗಲಿದೆ. ಅದರ ಬಳಿಕವೂ ಅವರು ಅದೇ ಹುದ್ದೆಯಲ್ಲಿ ಮುಂದುವರೆಯುವ ನಿರೀಕ್ಷೆಯಿದೆ. ಇದು ಸಾಧ್ಯವಾದಲ್ಲಿ, 1960ರಲ್ಲಿ ಆರ್‌ಬಿಐ ಸ್ಥಾಪನೆಯಾದಂದಿನಿಂದ ದೀರ್ಘಾವಧಿ ಸೇವೆ ಸಲ್ಲಿಸಿದ ಗವರ್ನರ್ ಎಂಬ ಕೀರ್ತಿಗೆ ದಾಸ್ ಪಾತ್ರರಾಗುತ್ತಾರೆ.
ಈವರೆಗೆ 1949ರಿಂದ 1957 ವರೆಗೆ ಗವರ್ನರ್ ಆಗಿದ್ದ ಬೆನೆಗಲ್ ರಾಮ ರಾವ್ ಈ ಹುದ್ದೆಯಲ್ಲಿ ಸುದೀರ್ಘಾವಧಿಗೆ ಸೇವೆ ಸಲ್ಲಿಸಿದವರಾಗಿದ್ದಾರೆ.