ಸಾರಾಂಶ
ಹೋಟೆಲ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 14 ಜನರು ಸಾವನ್ನಪ್ಪಿ, 13 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಕೋಲ್ಕತಾದಲ್ಲಿ ಸಂಭವಿಸಿದೆ.
ಕೋಲ್ಕತಾ: ಹೋಟೆಲ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 14 ಜನರು ಸಾವನ್ನಪ್ಪಿ, 13 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಕೋಲ್ಕತಾದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತರ ಕುಟುಂಬದವರಿಗೆ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಜೊತೆಗೆ ಮೃತರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 2 ಲಕ್ಷ ರು. ಹಾಗೂ ಗಾಯಾಳುಗಳಿಗೆ ತಲಾ 50000 ರು. ಪರಿಹಾರ ಘೋಷಿಸಿವೆ.
ಸಿಎಂ ಮಮತಾ ಘಟನೆ ಸಂಬಂಧ ತನಿಖೆಗೆ ಸೂಚಿಸಿದ್ದು, ಕೋಲ್ಕತಾ ಪೊಲೀಸರು ವಿಶೇಷ ತನಿಖಾ ತಂಡ ಚಿಸಿದ್ದಾರೆ.
ಆಗಿದ್ದೇನು?:
ಮಂಗಳವಾರ ಸಂಜೆ 7.30ರ ಸುಮಾರಿಗೆ ‘ರಿತುರಾಜ್ ಹೋಟೆಲ್’ನ ಮೊದಲ ಮಹಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಡ್ಯಾನ್ಸ್ ಬಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿರ್ಮಾಣ ನಡೆಯುತ್ತಿದ್ದ ಕಾರಣ ಕಿಟಕಿಗಳನ್ನು ಇಟ್ಟಿಗೆ, ಕಾಂಕ್ರೀಟ್‌ನಂತಹ ವಸ್ತುಗಳಿಂದ ಮುಚ್ಚಿಲಾಗಿದ್ದು, 2ನೇ ಮಹಡಿಗೆ ಹೋಗುವ ಮೆಟ್ಟಿಲುಗಳನ್ನೂ ಮುಚ್ಚಲಾಗಿತ್ತು. ಹೀಗಾಗಿ ಬೆಂಕಿ ಕಾಣಿಸಿಕೊಂಡ ಬಳಿಕ ಹೊರಗೆ ಬರಲಾಗದೆ 13 ಜನರು ಹೊಗೆಯಿಂದ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ.
ಹೋಟೆಲ್ ಸಿಬ್ಬಂದಿ ಮನೋಜ್ ಪಾಸ್ವಾನ್ ಮಾತ್ರ ಜೀವಭಯದಿಂದ 2ನೇ ಮಹಡಿಯಿಂದ ಹಾರಿ ಬಚಾವಾಗಲು ಯತ್ನಿಸಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಬಹುತೇಕರ ದೇಹಗಳು 2ನೇ ಮತ್ತು 3ನೇ ಮಹಡಿಯ ಮೆಟ್ಟಿಲುಗಳ ಮೇಲೆ ಪತ್ತೆಯಾಗಿದೆ. ಘಟನೆ ಸಂಭವಿಸಿದಾಗ 42 ಕೋಣೆಗಳಲ್ಲಿ 88 ಅತಿಥಿಗಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಿಯಮ ಉಲ್ಲಂಘನೆ:
25 ವರ್ಷಗಳಿಂದ ಇರುವ ಈ ಹೋಟೆಲ್‌ನಲ್ಲಿ 50 ಕೋಣೆಗಳಿದ್ದು, ಎಲ್ಲಾ ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಬೆಂಕಿ ಹತ್ತಿಕೊಂಡಾಗ ಕೆಲವರು ತಪ್ಪಿಸಿಕೊಳ್ಳಲು ಓಡಿದರಾದರೂ ಅದು ಸಾಧ್ಯವಾಗಿರಲಿಲ್ಲ. ಕಾರಣ, ಅದಕ್ಕಾಗಿ ಪರ್ಯಾಯ ಮಾರ್ಗವೇ ಇರಲಿಲ್ಲ. ಹೋಟೆಲ್‌ನಲ್ಲಿದ್ದ ಯಾವ ಅಗ್ನಿಶಾಮಕ ಯಂತ್ರವೂ ಕೆಲಸ ಮಾಡುತ್ತಿರಲಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಹಿಂದಿನ ಅವಘಡ
2010: ಪಾರ್ಕ್ ಸ್ಟ್ರೀಟ್‌ನ ಸ್ಟೀಫನ್ ಕೋರ್ಟ್ ಕಟ್ಟಡದಲ್ಲಿ ಲಿಫ್ಟ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕಿಟ್‌ನಿಂದಾಗಿ ಹೊತ್ತಿಕೊಂಡ ಬೆಂಕಿಯಿಂದ 43 ಮಂದಿ ಸಾವು
2011: ಕೋಲ್ಕತಾದ ಎಎಂಆರ್‌ಐ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಉಂಟಾಗಿ, ಸಿಬ್ಬಂದಿ ಸೇರಿ 93 ಜನ ಸಾವು.
2013: ಕೋಲ್ಕತಾದ ಸೂರ್ಯ ಸೇನ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ 20 ಜನ ಬಲಿ