ಹೊಸ ನಾಯಕನನ್ನು ಘೋಷಿಸಿದ ಕೋಲ್ಕತಾ ನೈಟ್‌ರೈಡರ್ಸ್. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಬ್ಬರದ ಆಟವಾಡಿದ್ದಕ್ಕೆ ಅಜಿಂಕ್ಯ ರಹಾನೆಗೆ ಸಿಕ್ಕಿತು ನಾಯಕನ ಪಟ್ಟ. ದುಬಾರಿ ಆಟಗಾರ ವೆಂಕಿ ಅಯ್ಯರ್ ಉಪನಾಯಕ.
ನವದೆಹಲಿ: ಐಪಿಎಲ್ ಹರಾಜಿನ ಮೊದಲ ಸುತ್ತಿನಲ್ಲಿ ಬಿಕರಿಯಾಗದೆ, 2ನೇ ಸುತ್ತಿನಲ್ಲಿ ಮೂಲಬೆಲೆ (₹1.5 ಕೋಟಿ)ಗೆ ಖರೀದಿಸಲ್ಪಟ್ಟಿದ್ದ ಅಜಿಂಕ್ಯ ರಹಾನೆಯನ್ನು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್‌ರೈಡರ್ಸ್ 2025ರ ಆವೃತ್ತಿಗೆ ತನ್ನ ನಾಯಕನನ್ನಾಗಿ ನೇಮಿಸಿಕೊಂಡಿದೆ. ಸೋಮವಾರ ಕೆಕೆಆರ್ ಮಾಲಿಕರು ಹೊಸ ನಾಯಕನನ್ನು ಘೋಷಿಸಿದರು. ಇದೇ ವೇಳೆ ಹರಾಜಿನಲ್ಲಿ ಬರೋಬ್ಬರಿ ₹23.75 ಕೋಟಿಗೆ ಬಿಕರಿಯಾಗಿ, ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದ ಆಲ್ರೌಂಡರ್ ವೆಂಕಟೇಶ್ ಅಯ್ಯರ್‌ಗೆ ಉಪನಾಯಕನ ಜವಾಬ್ದಾರಿ ವಹಿಸಲಾಗಿದೆ.
36 ವರ್ಷದ ರಹಾನೆ, ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ರಾಯಲ್ಸ್, 2019ರ ಆವೃತ್ತಿಯ ಮಧ್ಯದಲ್ಲೇ ರಹಾನೆಯನ್ನು ಕೆಳಗಿಳಿಸಿ ಸ್ಟೀವ್ ಸ್ಮಿತ್‌ಗೆ ನಾಯಕತ್ವ ಕೊಟ್ಟಿತ್ತು.
ತಮ್ಮ ವೃತ್ತಿಬದುಕಿನ ಬಹುತೇಕ ಭಾಗ ಟೆಸ್ಟ್, ಪ್ರಥಮ ದರ್ಜೆ ಕ್ರಿಕೆಟನ್ನೇ ಆಡಿರುವ ರಹಾನೆ, ಇತ್ತೀಚೆಗೆ ಮುಕ್ತಾಯಗೊಂಡ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 164.56ರ ಸ್ಟ್ರೈಕ್‌ರೇಟ್‌ನಲ್ಲಿ 469 ರನ್ ಸಿಡಿಸಿ, ಟೂರ್ನಿಯ ಗರಿಷ್ಠ ರನ್ ಸರದಾರ ಎನಿಸಿದ್ದರು.
