ಸಾರಾಂಶ
18ನೇ ಆವೃತ್ತಿಗೆ ಜೈಪುರ ಲಿಟರೇಚರ್ ಫೆಸ್ಟಿವಲ್ ಹುರಿಗೊಳ್ಳುತ್ತಿದೆ. ತಣ್ಣನೆಯ ಮುಂಜಾನೆ ಸಂಜೆಯ ನಡುವೆ ಉಗುರು ಬೆಚ್ಚಗಿನ ಹಗಲು ಹಬ್ಬಿರುವ ಜೈಪುರದ ಕ್ಲಾರ್ಕ್ಸ್ ಅಮೀರ್ ಹೋಟೆಲಿನ ಹುಲ್ಲುಗಾವಲಿನಲ್ಲಿ ಸಾಹಿತ್ಯದ ಚಪ್ಪರ ಎದ್ದು ನಿಂತಿದೆ
- ಜೋಗಿ
ಜೈಪುರ : ಅಲ್ಲಲ್ಲಿ ಹರಡಿರುವ ಹೊಚ್ಚ ಹೊಸ ಪುಸ್ತಕಗಳು, ಲೇಖಕರನ್ನು ಭೇಟಿಯಾಗಿ ಪುಸ್ತಕ ಸಹಿ ಮಾಡಿಸಿಕೊಳ್ಳಲು ಆಪ್ತತಾಣ, ಎಂಟು ವೇದಿಕೆ, ಪ್ರಕಾಶಕರಿಗೆಂದೇ ಪ್ರತ್ಯೇಕ ಮಾತಿನ ಮನೆ, ಔತಣಕೂಟಕ್ಕೆ ವಿಶೇಷ ಚಪ್ಪರ, ರಾತ್ರಿಯ ಸಂಗೀತ ವೈಭವಕ್ಕೆ ಮ್ಯೂಸಿಕ್ ಸ್ಟೇಜ್.
18ನೇ ಆವೃತ್ತಿಗೆ ಜೈಪುರ ಲಿಟರೇಚರ್ ಫೆಸ್ಟಿವಲ್ ಹುರಿಗೊಳ್ಳುತ್ತಿದೆ. ತಣ್ಣನೆಯ ಮುಂಜಾನೆ ಸಂಜೆಯ ನಡುವೆ ಉಗುರು ಬೆಚ್ಚಗಿನ ಹಗಲು ಹಬ್ಬಿರುವ ಜೈಪುರದ ಕ್ಲಾರ್ಕ್ಸ್ ಅಮೀರ್ ಹೋಟೆಲಿನ ಹುಲ್ಲುಗಾವಲಿನಲ್ಲಿ ಸಾಹಿತ್ಯದ ಚಪ್ಪರ ಎದ್ದು ನಿಂತಿದೆ. ಮುಂಜಾನೆ ಸಾಹಿತ್ಯ ಪ್ರಿಯರಿಂದ ತುಳುಕಲು ಕಾದಿರುವ ಹಲವು ಗೂಡುಗಳು ನೊಬೆಲ್ ಪುರಸ್ಕೃತರ, ಬೂಕರ್ ವಿಜೇತರ, ಪುಲಿಟ್ಜರ್, ಸಾಹಿತ್ಯ ಅಕಾಡೆಮಿ ಗಳಿಸಿದವರ ಮಾತುಗಳಿಗೆ ಕಾಯುತ್ತಾ ಚಳಿಯ ಇರುಳನ್ನು ಕಳೆಯುತ್ತಿವೆ.
ಈ ಸಲ ವಿಶೇಷ ಗೋಷ್ಠಿಗಳನ್ನು ಜೈಪುರ್ ಲಿಟ್ ಫೆಸ್ಟ್ ಆಯೋಜಿಸಿದೆ. ಉದ್ಘಾಟನಾ ಸಮಾರಂಭದಲ್ಲಿ ನೊಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣನ್ ಕಲೆ ಮತ್ತು ವಿಜ್ಞಾನದ ನಡುವೆ ಸೇತುವೆ ಸಾಧ್ಯವೇ ಎಂಬ ಕುರಿತು ಮಾತಾಡಲಿದ್ದಾರೆ. ಲೇಖಕರು, ಚಿಂತಕರು, ಪ್ರಕಾಶಕರು ಮತ್ತು ಓದುಗರು ಒಟ್ಟಾಗುವ ಸಾಹಿತ್ಯ ಕುಂಭಮೇಳದಲ್ಲಿ ಹಲವು ಅಚ್ಚರಿಗಳು ಅನಾವರಣಗೊಳ್ಳಲಿವೆ. ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಭಾರತೀಯ ಆಹಾರ, ಸಂಸ್ಕೃತಿ ಮತ್ತು ಸಮಾಜದ ಕುರಿತು ಮಾತಾಡಿದರೆ, ಮತ್ತೊಬ್ಬ ನೊಬೆಲ್ ವಿಜೇತೆ ಎಸ್ತರ್ ಡಫ್ಲೋ ಮಕ್ಕಳಿಗಾಗಿ ಅರ್ಥಶಾಸ್ತ್ರ ತೆರೆದಿಡಲಿದ್ದಾರೆ. ಸುಧಾ ಮೂರ್ತಿಯವರು ನಾನು ನಮ್ಮಮ್ಮ ಮತ್ತು ನನ್ನೊಳಗಿನ ಮಗು ಎಂಬ ಎರಡು ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.
‘ಅನೇಕ ಸ್ಫೂರ್ತಿದಾಯಕ ಗೋಷ್ಠಿಗಳಿರುವ ಜೈಪುರ್ ಲಿಟ್ ಫೆಸ್ಟ್ ಈ ಸಲವೂ ತರುಣ ಓದುಗರತ್ತ ಕಣ್ಣು ನೆಟ್ಟಿದೆ. ಜನವರಿ 30ರಿಂದ ಫೆಬ್ರವರಿ 3ರ ತನಕ ಐದು ದಿನಗಳ ಕಾಲ ಸುಮಾರು ಎರಡು ಲಕ್ಷ ಹದಿಹರೆಯದ ಓದುಗರು ಸಾಹಿತ್ಯದಲ್ಲಿ ಮಿಂದೇಳುತ್ತಾರೆ’ ಎನ್ನುವುದು ನಿರ್ದೇಶಕ ಸಂಜಯ್ ಕೆ ರಾಯ್ ಅಭಿಮತ.
ಈ ಸಲದ ಜೈಪುರ ಸಾಹಿತ್ಯೋತ್ಸವದಲ್ಲಿ ದೇಶವಿದೇಶಗಳ ಸುಮಾರು 600 ಮಂದಿ ಲೇಖಕರು ಮತ್ತು ಚಿಂತಕರು ಭಾಗವಹಿಸುತ್ತಿದ್ದಾರೆ. ವಿಭಿನ್ನ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಪ್ರಾದೇಶಿಕ ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದಿಸುವ ಅಗತ್ಯ, ಈ ಕಾಲದ ಸಾಹಿತ್ಯ, ಸಾಹಿತ್ಯ ಮತ್ತು ರಾಜಕಾರಣದ ಸಂಬಂಧ, ಧರ್ಮ ಮತ್ತು ರಾಜಕಾರಣ ಹೀಗೆ ಹಲವು ಸಂಗತಿಗಳು ವಿವಿಧ ವೇದಿಕೆಗಳಲ್ಲಿ ಚರ್ಚೆಯಾಗಲಿವೆ.
‘ಜೈಪುರ ಸಾಹಿತ್ಯೋತ್ಸವದ ಆಹ್ವಾನ ಪತ್ರಿಕೆಯೇ ಸಾಹಿತ್ಯ ಸತ್ತರನ್ನು ಸೆಳೆಯುವಂತಿದೆ. ಇಲ್ಲಿ ಕೇವಲ ಸಾಹಿತ್ಯಕ್ಕೆ ಮಾತ್ರ ಜಾಗವಲ್ಲ, ಇದು ಸಂಗೀತ, ಚಿತ್ರಕಲೆ ಮತ್ತು ಜನಪದದ ಕೇಂದ್ರಬಿಂದು. ನೀರಸವಾಗುತ್ತಿರುವ ಬದುಕನ್ನು ಹೇಗೆ ಕಲೆಯ ಮೂಲಕ ಆಕರ್ಷಕವಾಗಿಸಬಹುದು ಅನ್ನೋದನ್ನ ಜೈಪುರ ಸಾಹಿತ್ಯ ಉತ್ಸವ ಹಲವು ವರ್ಷಗಳಿಂದ ತೋರಿಸಿಕೊಡುತ್ತಿದೆ’ ಎನ್ನುತ್ತಾರೆ ಸಂಜಯ್ ಕೆ ರಾಯ್. ಸಾಹಿತ್ಯೋತ್ಸವದ ಕಲಾ ನಿರ್ದೇಶಕ ಅನುಭವ ನಾಥ್ ಕಣ್ಣುಗಳಿಗೆ ಹಬ್ಬವಾಗುವಂತೆ ಇಡೀ ಪರಿಸರವನ್ನು ರೂಪಿಸಿದ್ದಾರೆ. ಬೊಂಬೆಯಾಟ, ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳು, ದೇಶದ ವಿವಿಧ ಭಾಗಗಳ ಪ್ರಕಾಶಕರ ಜೊತೆ ಪುಸ್ತಕ ಉದ್ಯಮದ ಕುರಿತು ಚರ್ಚೆ ಈ ಸಲ ನಡೆಯಲಿದೆ. ಛಂದ ಪುಸ್ತಕದ ವಸುದೇಂದ್ರ ಪ್ರಕಾಶಕರ ವೇದಿಕೆಯಲ್ಲಿ ಮಾತಾಡಲಿದ್ದಾರೆ.
18 ರಿಂದ 25 ವರ್ಷಗಳ ನಡುವಿನ ತರುಣ ತರುಣಿಯರು ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವ ಏಕೈಕ ಸಾಹಿತ್ಯ ಉತ್ಸವ ಎಂದೆ ಹೆಸರಾಗಿರುವ ಜೈಪುರ ಲಿಟರೇಚರ್ ಫೆಸ್ಟಿವಲ್‌ನಲ್ಲಿ ಸಾಹಿತ್ಯದ ಶಕ್ತಿ, ಬದಲಾಗುತ್ತಿರುವ ಹವಾಮಾನ, ಮುನ್ನೆಲೆಗೆ ಬರುತ್ತಿರುವ ಪತ್ತೇದಾರಿ ಸಾಹಿತ್ಯ, ನಾನೇಕೆ ಬರೆಯುತ್ತೇನೆ ಎಂಬ ಪ್ರಶ್ನೆಗೆ ಲೇಖಕರ ಉತ್ತರಗಳು, ಸಿನಿಮಾ ಕುರಿತು ಮಾತುಕತೆ ಮುಂತಾದ ಹಲವು ಸಂಗತಿಗಳನ್ನು ಚರ್ಚಿಸಲಿದೆ.
;Resize=(690,390))
)
)
;Resize=(128,128))
;Resize=(128,128))
;Resize=(128,128))