ಸಾರಾಂಶ
ಬೈರೂತ್: ಸಿರಿಯಾ ಪದಚ್ಯುತ ಸರ್ವಾಧಿಕಾರಿ ಅಧ್ಯಕ್ಷ ಬಶಾರ್ ಅಸಾದ್ ಸರ್ಕಾರ ಪತನ ಬಳಿಕ ದೇಶದಲ್ಲೀಗ ಎರಡು ದಿನಗಳಿಂದ ಅಂತರ್‌ಯುದ್ಧ ಭುಗಿಲೆದ್ದಿದೆ ಹಾಗೂ 1000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಅಸಾದ್ ಸರ್ಕಾರ ಕೆಡವಿ ಅಧಿಕಾರಕ್ಕೇರಿರುವ ಬಂದಿರುವ ಗುಂಪು ಮತ್ತು ಅಸಾದ್ ಬೆಂಬಲಿಗರ ನಡುವೆ ಕಾದಾಟ ಭುಗಿಲೆದ್ದಿದ್ದು, ಇದಕ್ಕೆ ಪ್ರತೀಕಾರವಾಗಿ ಅಸಾದ್ ಪರ ಇರುವ ಅಲಾವಿ ಸಮುದಾಯದ ನರಮೇಧ ನಡೆಯುತ್ತಿದೆ ಎಂದು ಬ್ರಿಟನ್ ಮೂಲದ ಮಾನವಹಕ್ಕುಗಳ ಸಂಸ್ಥೆ ಹೇಳಿದೆ.ಸಿರಿಯಾದ ಅಲ್ಪಸಂಖ್ಯಾತ ಅಲಾವಿ ಸಮುದಾಯವು ಅಸಾದ್ ಸರ್ಕಾರದ ಪರವಾಗಿತ್ತು. ಅಸಾದ್ ಸರ್ಕಾರ ಪತನದ ಬಳಿಕ ಸುಮ್ಮನಿದ್ದ ಬೆಂಬಲಿಗರು ಇದೀಗ ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟ ಆರಂಭಿಸಿದ್ದಾರೆ. ಇವರಲ್ಲಿ ಅಲಾವಿ ಸಮುದಾಯದವರೇ ಹೆಚ್ಚಿರುವ ಕಾರಣ ಸರ್ಕಾರದ ಪರವಾಗಿರುವ ಗುಂಪುಗಳು ಇವರ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಅಲಾವಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ನಗರಗಳು, ಪಟ್ಟಣಗಳ ಮೇಲೆ ದಾಳಿ ನಡೆಸುತ್ತಿರುವ ಸರ್ಕಾರಿ ಬೆಂಬಲಿತ ಗುಂಪುಗಳು ನೂರಾರು ಮಂದಿಯನ್ನು ಹತ್ಯೆ ಮಾಡುತ್ತಿವೆ.
ಕಳೆದ ಎರಡು ದಿನಗಳಿಂದ 745 ನಾಗರಿಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. 125 ಸರ್ಕಾರಿ ಭದ್ರತಾ ಸಿಬ್ಬಂದಿ ಹಾಗೂ ಅಸಾದ್ ಗುಂಪಿನೊಂದಿಗೆ ಗುರುತಿಸಿಕೊಂಡಿರುವ ಸಶಸ್ತ್ರಧಾರಿ ಗುಂಪಿನ ಸದಸ್ಯರನ್ನೂ ಹತ್ಯೆ ಮಾಡಲಾಗಿದೆ. ಈ ಕಾದಾಟದ ಪರಿಣಾಮ ಲಟಾಕಿಯಾ ನಗರದಲ್ಲಿ ವಿದ್ಯುತ್, ಕುಡಿಯುವ ನೀರಿನ ಪೂರೈಕೆ ಸಂಪೂರ್ಣ ಬಂದ್ ಆಗಿದೆ ಎಂದು ಹೇಳಲಾಗಿದೆ.ಅಲಾವಿ ಸಮುದಾಯದವರ ಶವಗಳು ಅನಾಥವಾಗಿ ಬಿದ್ದಿವೆ. ಹೆಸರು, ಗುರುತಿನ ಚೀಟಿ ಕೇಳಿ ಬಳಿಕ ಅಲಾವಿಗಳನ್ನು ಹತ್ಯೆ ಮಾಡಲಾಗುತ್ತಿದೆ. ಸಿರಿಯಾದಿಂದ ಹೊರಗಿನವರೂ ದಾಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.