ಸಾರಾಂಶ
ಭಾರತ ಮಾತ್ರವಲ್ಲದೇ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಪಹಲ್ಗಾಂನ 26 ಪ್ರವಾಸಿಗರ ಹತ್ಯೆ ನಡೆದು ಐದೇ ಐದು ದಿನ ಕೂಡಾ ಆಗಿಲ್ಲ. ಆಗಲೇ ಮತ್ತೆ ಪಹಲ್ಗಾಂಗೆ ಪ್ರವಾಸಿಗರು ಮರಳಿದ್ದಾರೆ.
ಪಹಲ್ಗಾಂ: ಭಾರತ ಮಾತ್ರವಲ್ಲದೇ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಪಹಲ್ಗಾಂನ 26 ಪ್ರವಾಸಿಗರ ಹತ್ಯೆ ನಡೆದು ಐದೇ ಐದು ದಿನ ಕೂಡಾ ಆಗಿಲ್ಲ. ಆಗಲೇ ಮತ್ತೆ ಪಹಲ್ಗಾಂಗೆ ಪ್ರವಾಸಿಗರು ಮರಳಿದ್ದಾರೆ. ಅಲ್ಲಿ ಯಾವುದೇ ನರಮೇಧ ನಡೆದೇ ಇಲ್ಲ ಎಂಬಂತೆ ಪ್ರವಾಸಿಗರು ಕಾಶ್ಮೀರದ ಸುಂದರ ತಾಣಕ್ಕೆ ಮತ್ತೆ ದೌಡಾಯಿಸತೊಡಗಿದ್ದಾರೆ.
ಪ್ರವಾಸಿಗರ ಪಾಲಿಗೆ ಸ್ವರ್ಗದಂತಿದ್ದ ‘ಮಿನಿ ಸ್ವಿಜರ್ಲೆಂಡ್’ ಖ್ಯಾತಿಯ ಪಹಲ್ಗಾಂನಲ್ಲಿ, ಏ.22ರ ದಾಳಿಯ ಬಳಿಕ ಆವರಿಸಿದ್ದ ಸ್ಮಶಾನ ಮೌನ ಕರಗತೊಡಗಿದ್ದು, ಮತ್ತೆ ಪ್ರವಾಸಿಗರ ಆಗಮನ ಶುರುವಾಗಿದೆ. ಆದರೆ ಅಮಾನವೀಯ ದಾಳಿ ನಡೆದ ಬೈಸರನ್ ಹುಲ್ಲುಗಾವಲಿನಲ್ಲಿ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿಲ್ಲ.
ಈ ಮೊದಲು, ನೌಸರ್ಗಿಕ ಸೌಂದರ್ಯ ಸವಿಯಲು ದಿನವೊಂದಕ್ಕೆ 5ರಿಂದ 7 ಸಾವಿರ ಜನ ಬರುತ್ತಿದ್ದ ಪ್ರದೇಶಕ್ಕೆ, ಉಗ್ರದಾಳಿಯ ಬಳಿಕ ಕನಿಷ್ಠ 100 ಮಂದಿಯೂ ಬರುತ್ತಿರಲಿಲ್ಲ. ಇದರಿಂದ, ಪ್ರವಾಸೋದ್ಯಮವನ್ನೇ ಆದಾಯದ ಮೂಲ ಮಾಡಿಕೊಂಡಿದ್ದ ಸ್ಥಳೀಯರ ಸಂಪಾದನೆಗೆ ಪೆಟ್ಟು ಬಿದ್ದಿತ್ತು. ಆದರೆ ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ.
ಪಹಲ್ಗಾಂಗೆ ಭಾನುವಾರ, ದೇಶ-ವಿದೇಶಗಳಿಂದ ಹಲವು ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಮಹಾರಾಷ್ಟ್ರದ ತಂಡವೊಂದು, ‘ಆಗಬೇಕಾದ್ದು ಆಗಿಯೇ ಆಗುತ್ತದೆ’ ಎಂದು ಹೇಳಿದೆ.
ಕ್ರೊಯೇಷಿಯಾದ ಪ್ರವಾಸಿಗರೊಬ್ಬರು ಮಾತನಾಡಿ, ‘ನಾನೀಗ 10ನೇ ಬಾರಿ ಕಾಶ್ಮೀರಕ್ಕೆ ಬರುತ್ತಿದ್ದೇನೆ. ನನ್ನ ಪಾಲಿಗೆ ಇದು ನಂ.1 ಪ್ರವಾಸಿ ತಾಣವಾಗಿದ್ದು, ಇಲ್ಲಿನ ಜನರೂ ಮೃದು ಸ್ವಭಾವದವರು. ನನಗೇನೂ ಭಯವಿಲ್ಲ’ ಎಂದಿದ್ದಾರೆ.