ಸಾರಾಂಶ
ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಭಯೋತ್ಪಾದನಾ ದಾಳಿ ಖಂಡಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಗುರುವಾರ ಮಜಲಿಸ್ ಎ ಮುಂತಾಜಿಮಾ ಮತ್ತು ಅಂಜುಮನ್ ಕಮಿಟಿ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಾಗರ: ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಭಯೋತ್ಪಾದನಾ ದಾಳಿ ಖಂಡಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಗುರುವಾರ ಮಜಲಿಸ್ ಎ ಮುಂತಾಜಿಮಾ ಮತ್ತು ಅಂಜುಮನ್ ಕಮಿಟಿ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಏ.22 ರಂದು ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ನಡೆಸಿರುವ ಗುಂಡಿನ ದಾಳಿಗೆ ಸುಮಾರು ೨೬ಕ್ಕಿಂತ ಹೆಚ್ಚು ಜನರು ಬಲಿಯಾಗಿದ್ದಾರೆ. ಈ ದಾಳಿಯಿಂದ ಸಾವನ್ನಪ್ಪಿರುವವರಲ್ಲಿ ಕರ್ನಾಟಕದ ಇಬ್ಬರು ಸೇರಿದ್ದಾರೆ. ಉಗ್ರರಿಂದ ಅಮಾಯಕರನ್ನು ರಕ್ಷಿಸಲು ಮುಂದಾದ ಸ್ಥಳೀಯ ಯುವಕ ಸೈಯದ್ ಹುಸೇನ್ ಎಂಬವರ ಮೇಲೆಯೂ ಉಗ್ರರು ಗುಂಡಿನ ದಾಳಿ ನಡೆಸಿ, ಕೊಂದು ಹಾಕಿದ್ದಲ್ಲದೆ, ಇನ್ನೊಬ್ಬ ಮುಸ್ಲಿಂ ಯುವಕನನ್ನೂ ಕೊಂದಿದ್ದಾರೆ. ಈ ಘಟನೆಗಳು ಅತ್ಯಂತ ಖಂಡನೀಯ ಎಂದು ಮುಖಂಡರು ಹೇಳಿದರು.
ಧರ್ಮದ ಹೆಸರಿನಲ್ಲಿ ಇಂತಹ ಕೃತ್ಯಗಳು ಆತಂಕಕಾರಿಯಾಗಿದೆ. ಇದರಿಂದಾಗಿ ಅಮಾಯಕರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಭದ್ರತಾ ಪಡೆಯಾಗಲಿ, ಪೊಲೀಸರಾಗಲಿ ಇಲ್ಲದೇ ಇರುವುದು ವಿಪರ್ಯಾಸದ ಸಂಗತಿ. ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ ಮತ್ತು ಇಂಟಲಿಜೆನ್ಸ್ ವೈಫಲ್ಯ ಎದ್ದುಕಾಣುತ್ತಿದೆ. ಈ ಅಮಾನವೀಯ ಘಟನೆಯನ್ನು ತಾಲೂಕಿನ ಸಮಸ್ತ ಮುಸ್ಲಿಂ ಸಮಾಜ ಖಂಡಿಸುತ್ತದೆ. ತಕ್ಷಣ ದುಷ್ಕರ್ಮಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಮೃತರ ಕುಟುಂಬಗಳಿಗೆ ಜಮ್ಮು ಕಾಶ್ಮೀರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ, ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಸಂಘಟನೆ ಪ್ರಮುಖರಾದ ಆರ್.ಕೆ. ಫಯಾಜ್, ಮಕ್ಬೂಲ್ ಸಾಬ್, ಅನಿಸ್, ಇಮಾಮ್ ಸಾಬ್, ಜಿಕ್ರಿಯಾ, ನದೀಮ್, ಸೈಯದ್ ಜಾಕೀರ್, ಪರ್ವೀಜ್, ಇರ್ಫಾನ್, ನಸ್ರುಲ್ಲಾ ಇನ್ನಿತರರು ಹಾಜರಿದ್ದರು.