ಬುರ್ಕಿನಾ ಫಾಸೋದ ಬರ್ಸಲೋಘೋ ಪಟ್ಟಣದಲ್ಲಿ ಅಲ್‌ ಖೈದಾ ಉಗ್ರರು ನಡೆಸಿದ ದಾಳಿಯಲ್ಲಿ ಸುಮಾರು 600 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಉಗ್ರರು ಗುಂಡಿ ತೋಡುತ್ತಿದ್ದ ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಉಗ್ರ ದಾಳಿಗೆ ಕಾರಣವೇನು?

ಒವಾಗಡೊಗು (ಬುರ್ಕಿನಾ ಫಾಸೋ): ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೋ ದೇಶದ ಬರ್ಸಲೋಘೋ ಪಟ್ಟಣದ ಮೇಲೆ ಆಗಸ್ಟ್‌ 24ರಂದು ಅಲ್‌ ಖೈದಾ ಉಗ್ರರು ದಾಳಿ ಮಾಡಿ ಸುಮಾರು 600 ಜನರನ್ನು ಹತ್ಯೆ ಮಾಡಿದ್ದಾರೆ ಎಂಬ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಅಲ್‌ ಖೈದಾ ಉಗ್ರರ ಪ್ರಮುಖ ತಾಣವಾಗಿರುವ ಮಾಲಿ ದೇಶದ ಪಕ್ಕದಲ್ಲೇ ಬುರ್ಕಿನಾ ಫಾಸೋ ಇದ್ದು, 2015ರಿಂದ ಖೈದಾ ಉಗ್ರರ ಸಹವರ್ತಿ ಸಂಘಟನೆಯಾದ ನುಸ್ರತ್‌ ಅಲ್‌ ಇಸ್ಲಾಂ ವಲ್‌ ಮಸ್ಲಿಮೀನ್‌ (ಜೆಎನ್‌ಐಎಂ) ಸಂಘಟನೆಯ ಹಾವಳಿಯಿಂದ ಬಾಧಿತವಾಗಿದೆ. 

ಬರ್ಸಲೋಘೋ ಪಟ್ಟಣದ ಜನರು ಈ ಉಗ್ರರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಊರಿನ ಸುತ್ತ ರಕ್ಷಣಾ ಕಂದಕ ತೋಡುತ್ತಿದ್ದರು. ಆಗ ಬೈಕ್‌ಗಳಲ್ಲಿ ಬಂದ ಉಗ್ರರು, ಗುಂಡಿ ತೋಡುವುದನ್ನು ನೋಡಿ ಸಿಟ್ಟಾಗಿ ಯದ್ವಾತದ್ವಾ ಗುಂಡು ಹಾರಿಸಿ 600 ಜನರನ್ನು ಸಾಯಿಸಿದರು ಎಂದು ಮಾಧ್ಯಮ ವರದಿಗಳು ಹೇಳಿವೆ.ವಿಶ್ವಸಂಸ್ಥೆಯು ಇಲ್ಲಿ 200 ಜನರು ಸತ್ತಿದ್ದಾರೆ ಎಂದು ಹೇಳಿದ್ದರೂ, ಮಾಲಿ ಹಾಗೂ ಬುರ್ಕಿನಾ ಫಾಸೋ ದೇಶಗಳಿಗೆ ಸೇನಾ ನೆರವು ನೀಡುತ್ತಿರುವ ಫ್ರಾನ್ಸ್‌, 600 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಉಗ್ರರಿಂದ ಬಚಾವಾಗಲು ಕೆಲವು ಗ್ರಾಮಸ್ಥರು ಸತ್ತಂತೆ ನಟಿಸುತ್ತಿರುವ ವಿಡಿಯೋಗಳೂ ವೈರಲ್‌ ಆಗಿವೆ.ಇಲ್ಲಿ ಉಗ್ರರ ಅಟ್ಟಹಾಸ ಏಕೆ?:ಮಾಲಿ, ನೈಜೇರ್‌ ಹಾಗೂ ಬುರ್ಕಿನಾ ಫಾಸೋ ದೇಶಗಳು ಇಸ್ಲಾಮಿಕ್‌ ದೇಶಗಳಾಗಿವೆ. ಆದರೆ ಬಹುಕಾಲದಿಂದ ಇಲ್ಲಿ ಫ್ರಾನ್ಸ್‌ ಹಾಗೂ ಅಮೆರಿಕ ಪಡೆಗಳು ಬೇರೂರಿ ಪರೋಕ್ಷವಾಗಿ ವಸಾಹತುಶಾಹಿ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದವು. ಆದರೆ ಇದನ್ನು ವಿರೋಧಿಸಿ ಅಲ್‌ಖೈದಾ ಹಾಗೂ ಸಹವರ್ತಿ ಸಂಘಟನೆಗಳು ವಿದೇಶಿ ಪಡೆಗಳ ವಿರುದ್ಧ ಹೋರಾಟ ನಡೆಸಿದ್ದವು. 

ಈ ಪ್ರತಿರೋಧಕ್ಕೆ ಮಣಿದು ವಿದೇಶಿ ಪಡೆಗಳು ಇಲ್ಲಿಂದ ವಾಪಸಾಗಿವೆ. ಆದರೆ ಬಳಿಕ ಈ ದೇಶಗಳಲ್ಲಿ ಸರಿಯಾದ ಸ್ಥಳೀಯ ಆಡಳಿತ ಇಲ್ಲದೇ ಅಧಿಕಾರದ ನಿರ್ವಾತ ಸ್ಥಿತಿ ಸೃಷ್ಟಿಯಾಗಿದೆ. ಕ್ಷಿಪ್ರಕ್ರಾಂತಿ ಯತ್ನಗಳೂ ನಡೆದಿವೆ. ಇದೇ ಸಂದರ್ಭ ಬಳಸಿಕೊಂಡು ಉಗ್ರರು ಇಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ.ಈಗಾಗಲೇ 2015ರಿಂದ ಬುರ್ಕಿನಾ ಫಾಸೋ ಉಗ್ರರ ದಾಳಿಯಿಂದ ನಲುಗಿದ್ದು 20 ಸಾವಿರ ಜನ ಬಲಿಯಾಗಿದ್ದಾರೆ ಹಾಗೂ 20 ಲಕ್ಷ ಜನ ಗುಳೆ ಹೋಗಿದ್ದಾರೆ.