ಸಾರಾಂಶ
ಮುಂಬೈ: ವೆಬ್‌ಸೈಟ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಅನುಮತಿಯಲ್ಲದೆ ಉದ್ಯಮ ಪ್ರಚಾರಕ್ಕಾಗಿ ತಮ್ಮ ಫೋಟೋವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ನಟ ಸುನೀಲ್ ಶೆಟ್ಟಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು ಖಾಸಗಿ ಹಕ್ಕು ರಕ್ಷಿಸುವಂತೆ ಮನವಿ ಮಾಡಿದ್ದಾರೆ.
‘ರಿಯಲ್ಸ್ ಎಸ್ಟೇಟ್ ಏಜೆನ್ಸಿ ಮತ್ತು ಜೂಜಾಟದ ವೇದಿಕೆಗಳಲ್ಲಿ ನನ್ನ ಫೋಟೋ ಅನುಮತಿಯಿಲ್ಲದೆ ಬಳಕೆಯಾಗುತ್ತಿದೆ. ವೆಬ್‌ಸೈಟ್‌ಗಳಲ್ಲಿ ಬಳಕೆಯಾಗಿರುವ ಫೋಟೋ ತೆಗೆದು ಹಾಕುಬೇಕು. ಭವಿಷ್ಯದಲ್ಲಿ ಬಳಕೆಗೆ ನಿರ್ಬಂಧ ವಿಧಿಸಬೇಕು’ ಎಂದು ಅವರು ಕೋರಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.ಸುನೀಲ್ ಶೆಟ್ಟಿ ಮಾತ್ರವಲ್ಲದೆ ಅವರ ಮೊಮ್ಮಗನ ಫೋಟೋಗಳು ದುರ್ಬಳಕೆ ಆಗುತ್ತಿದೆ ಎಂದು ನಟನ ಪರ ವಕೀಲರು ಕೋರ್ಟ್ ಗಮನ ಸೆಳೆದರು.
ಈ ಹಿಂದೆ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಕೂಡ ಇದೇ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದರು.==
ಪಟಾಕಿ ಸಂಪೂರ್ಣ ನಿಷೇಧ ಸಮಂಜಸವಲ್ಲ: ಸುಪ್ರೀಂ ಕೋರ್ಟ್- ದಿಲ್ಲಿಯಲ್ಲಿ ಪಟಾಕಿ ಅನುಮತಿ ಬಗ್ಗೆ ಶೀಘ್ರ ತೀರ್ಪು
ಪಿಟಿಐ ನವದೆಹಲಿ
ದೀಪಾವಳಿ ಹಬ್ಬದ ನಿಮಿತ್ತ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಪ್ರಾಯೋಗಿಕವಲ್ಲ. ಜೊತೆಗೆ ಅದು ಸಮಂಜಸವೂ ಅಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಮೂಲಕ ದಿಲ್ಲಿಯಲ್ಲಿ ಪಟಾಕಿಗಳ ಮೇಲಿನ ನಿಷೇಧ ತೆರವಿನ ಸುಳಿವು ನೀಡಿದ್ದು, ಅಂತಿಮ ತೀರ್ಪು ಕಾದಿರಿಸಿದೆ.ದೆಹಲಿಯಲ್ಲಿ ಹಸಿರು ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಬೇಕು ಎಂಬ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಬಿ.ಆರ್. ಗವಾಯಿ ಅವರ ದ್ವಿಸದಸ್ಯ ಪೀಠ, ‘ನಾವು ಸಂಪೂರ್ಣವಾಗಿ ನಿಷೇಧ ಮಾಡಿದರೂ ಸಹ ಜನರು ಪಟಾಕಿಗಳನ್ನು ಸಿಡಿಸುತ್ತಾರೆ. ಕಟ್ಟುನಿಟ್ಟಿನ ಆದೇಶವು ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ’ ಎಂದು ಹೇಳಿತು.ಇದೇ ವೇಳೆ ಕೇಂದ್ರ, ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಮಕ್ಕಳಿಗೆ ದೀಪಾವಳಿಯ 2 ದಿನಗಳು ಮಾತ್ರ ಸಿಗುತ್ತದೆ. ಅವರು ಅಂದು ಪಟಾಕಿ ಸಿಡಿಸಿ, ಸಂಭ್ರಮಿಸುತ್ತಾರೆ. ನಾನೂ ಸಹ ಮಕ್ಕಳಂತೆ ಸಂಭ್ರಮಿಸುತ್ತೇನೆ. 2 ದಿನದಲ್ಲಿ ದೆಹಲಿಯ ವಾಯುಗುಣಮಟ್ಟ ಹೆಚ್ಚೇನು ವಿಕೋಪಕ್ಕೆ ತಿರುಗದು’ ಎಂದು ವಾದಿಸಿದರು.
==ಗಾಯಕ ಗರ್ಗ್ ಶಂಕಾಸ್ಪದ ಸಾವು: ಇಬ್ಬರು ಅಂಗರಕ್ಷಕರ ಬಂಧನ
ಗುವಾಹಟಿ: ಸಿಂಗಾಪುರದಲ್ಲಿ ಸಂಭವಿಸಿದ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗರ್ಗ್ ಅವರ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಗರ್ಗ್ ಅವರ ಇಬ್ಬರು ಅಂಗರಕ್ಷಕರನ್ನು ಬಂಧಿಸಿದ್ದಾರೆ.ಗರ್ಗ್ ಸಾವಿನ ಬಳಿಕ ನಂದೇಶ್ವರ್ ಬೋರಾ ಮತ್ತು ಪರೇಶ್ ಬೈಶ್ಯಾರನ್ನು ಹಲವು ಸುತ್ತಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಜೊತೆಗೆ ಮಂಗಳವಾರವಷ್ಟೇ ಅಸ್ಸಾಂ ಪೊಲೀಸರು, ಇವರನ್ನು ಕೆಲಸದಿಂದ ಅಮಾನತುಗೊಳಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ.ಇವರಿಬ್ಬರ ಖಾತೆಗಳಲ್ಲಿ ಲಕ್ಷಾಂತರ ರು. ಹಣ ವಹಿವಾಟು ನಡೆದಿರುವುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ತನಿಖೆಗಾಗಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈಗಾಗಲೇ ಗರ್ಗ್ ಅವರ ಬಂಧುವೂ ಆದ ಡಿಎಸ್ಪಿ ಒಬ್ಬರನ್ನು ಇದೇ ಕೇಸಲ್ಲಿ ಬಂಧಿಸಲಾಗಿದೆ.
==ರಾಹುಲ್ ಕ್ಷೇತ್ರದಲ್ಲಿ ದಲಿತನ ಬಡಿದು ಹತ್ಯೆ ಮಾಡಿದ್ದ ವ್ಯಕ್ತಿ ಬಂಧನ
ರಾಯ್ಬರೇಲಿ: ರಾಹುಲ್ ಗಾಂಧಿ ಅವರ ಕ್ಷೇತ್ರ ರಾಯ್ ಬರೇಲಿಯಲ್ಲಿ ಇತ್ತೀಚೆಗೆ ಕಳ್ಳನೆಂದು ತಪ್ಪಾಗಿ ತಿಳಿದು ದಲಿತರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯ ಮುಖ್ಯ ರೂವಾರಿಯನ್ನು ಪೊಲೀಸರು ಎನ್‌ಕೌಟರ್ ಮಾಡಿ ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12 ಆಗಿದ್ದು, ಇನ್ನೂ 10-15 ಆರೋಪಿಗಳಿಗಾಗಿ ಶೋಧ ನಡೆದಿದೆ.ಫತೇಪುರ ಜಿಲ್ಲೆಯ ನಿವಾಸಿ ಹರಿಓಂ ವಾಲ್ಮೀಕಿ ಎಂಬುವವರು ಉಂಚಹರ್‌ನ ನಾಯಿ ಬಸ್ತಿಯಲ್ಲಿರುವ ತಮ್ಮ ಮಾವನ ಮನೆಗೆ ಹೊರಟಿದ್ದಾಗ ಅವರನ್ನು ಕಳ್ಳನೆಂದು ತಿಳಿದು ಹಳ್ಳಿಗರೆಲ್ಲ ಸೇರಿ ಹೊಡೆದು ಕೊಂದಿದ್ದರು. ಈ ಪ್ರಕರಣದ ಆರೋಪಿಗಳ ತಲೆಗೆ ಪೊಲೀಸರು 25,000 ರು. ಬಹುಮಾನವನ್ನೂ ಘೋಷಿಸಿದ್ದರು.ಈ ಕೃತ್ಯದಲ್ಲಿ ತೊಡಗಿದ್ದವರಲ್ಲಿ ಒಬ್ಬನಾಗಿರುವ ದೀಪಕ್ ಅಗ್ರಹಾರಿಯನ್ನು ಗಂಗಾ ಕತ್ರಿ ಬಳಿ ಪೊಲೀಸರು ತಡೆದಾಗ ಅವರ ಮೇಲೆ ಆತ ಗುಂಡು ಹಾರಿಸಿದ. ಇದಕ್ಕೆ ಪ್ರತಿಯಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.==
ಖಾಸಗಿ ವಾಹನಗಳ ಎಲ್‌ಇಡಿ, ಕೆಂಪು-ನೀಲಿ ಬೀಕನ್, ಸೈರನ್ ನಿಷೇಧಿಸಿ: ಸುಪ್ರೀಂನವದೆಹಲಿ: ಖಾಸಗಿ ವಾಹನಗಳಲ್ಲಿ ಎಲ್‌ಇಡಿ ಹೆಡ್‌ಲೈಟ್, ಕೆಂಪು-ನೀಲಿ ಬಣ್ಣದ ಬೀಕನ್‌ಗಳ ಖಾಸಗಿ ಬಳಕೆ, ತುರ್ತು ವಾಹನದ ಸೌಂಡ್‌ಗಳನ್ನು ಕೂಡಲೇ ನಿಷೇಧಿಸುವಂತೆ ಸುಪ್ರೀಂ ಕೋರ್ಟ್, ರಾಜ್ಯಗಳಿಗೆ ಸೂಚಿಸಿದೆ.ಪ್ರಕರಣವೊಂದರಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ದ್ವಿಸದಸ್ಯ ಪೀಠ, ‘ಕಾನೂನು ಬಾಹಿರ ಎಲ್‌ಇಡಿ ಲೈಟ್‌ಗಳು ರಸ್ತೆ ಅಪಘಾತಗಳನ್ನು ಹೆಚ್ಚಿಸುತ್ತದೆ. ತುರ್ತು ವಾಹನಗಳಿಗೆಂದು ಇರುವ ಕೆಂಪು-ನೀಲಿ ಬೀಕನ್‌ಗಳನ್ನು ಖಾಸಗಿ ವಾಹನಗಳು ಬಳಸುತ್ತಿದ್ದು, ಇದು ಜನರಿಗೆ ತಪ್ಪು ಸಂದೇಶ ಕಳುಹಿಸುತ್ತಿದೆ. ಜೊತೆಗೆ ತುರ್ತು ವಾಹನಗಳ ಎಚ್ಚರಿಕೆ ಶಬ್ದವನ್ನು ಸಹ ಖಾಸಗಿಯವರು ಬಳಸುತ್ತಿದ್ದು, ಇದರಿಂದ ಸಂಚಾರಿಗಳಲ್ಲಿ ಅಪಘಾತ, ಪಾದಾಚಾರಿಗಳಿಗೆ ಗಾಬರಿಯುಂಟು ಮಾಡುತ್ತಿದೆ. ಜೊತೆಗೆ ಸೈರನ್ ಮೇಲಿನ ಗೌರವ ಕಡಿಮೆಯಾಗುತ್ತಿದೆ’ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.
==ಸಮಾರಂಭಕ್ಕೆ ಅರೆಬರೆ ಬಟ್ಟೆಯಲ್ಲಿ ನಟಿಯರು: ಕೇರಳ ಶಾಸಕಿ ಕಿಡಿ
ಪಿಟಿಐ ಆಲಪ್ಪುಳ (ಕೇರಳ)ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಗಳಿಗೆ ಅರ್ಧಂಬರ್ಧ ಉಡುಪು ಧರಿಸಿ ಸಿನಿತಾರೆಯರು ಹಾಜರಾಗುವುದನ್ನು ಕೇರಳದ ಸಿಪಿಎಂ ಶಾಸಕಿ ಯು. ಪ್ರತಿಭಾ ಅವರು ಟೀಕಿಸಿದ್ದು, ‘ಎಲ್ಲಿ ಹೇಗೆ ಇರಬೇಕು ಎಂಬುದನ್ನು ನಟಿಯರು ತಿಳಿದುಕೊಳ್ಳಬೇಕು’ ಎಂದಿದ್ದಾರೆ.ಕಾಯಂಕುಲಂನಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಜನರು ಅರ್ಧ ಉಡುಪು ಧರಿಸಿದ ಸಿನಿ ತಾರೆಯರನ್ನು ಮಳಿಗೆಗಳ ಉದ್ಘಾಟನೆಗೆ ಆಹ್ವಾನಿಸುತ್ತಾರೆ. ಹೀಗೆ ಪಾರದರ್ಶಕ ಧರಿಸಿದ ತಾರೆಯರು ಬಂದಾಗ ಎಲ್ಲರೂ ಅವರನ್ನು ನೋಡಲು ಮುಗಿ ಬೀಳುತ್ತಾರೆ. ಇದು ಬದಲಾಗಬೇಕಿದೆ’ ಎಂದರು.
‘ನಾನು ಹೇಳಿದ್ದು ನೈತಿಕ ಪೊಲೀಸ್‌ಗಿರಿ ಎಂದು ಕೆಲವರು ಟೀಕಿಸಬಹುದು. ಉಡುಗೆ-ತೊಡುಗೆ ಅವರ ವೈಯಕ್ತಿಕ ಇಚ್ಛೆ ಎಂಬುದನ್ನು ನಾನೂ ಒಪ್ಪುವೆ. ಆದರೆ ಸಾರ್ವಜನಿಕ ಸಭೆಗಳಲ್ಲಿ ಸಭ್ಯ ಉಡುಗೆ ತೊಡುವುದನ್ನು ಕಲಿಯಬೇಕು’ ಎಂದರು.