ಸಾರಾಂಶ
ನವದೆಹಲಿ: ಐಎಎಸ್, ಐಪಿಎಸ್, ಐಎಫ್‌ಎಸ್‌ನಂಥ ನಾಗರಿಕ ಸೇವಾ ಸೇವೆಗಳ ಹುದ್ದೆಗೆ ಭರ್ತಿಗೆ ನಡೆಸಲಾಗುವ 2023ನೇ ಸಾಲಿನ ಕೇಂದ್ರೀಯ ಲೋಕಸೇವಾ ಆಯೋಗದ ಪರೀಕ್ಷೆ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಗಿದೆ. ಹಾಲಿ ಐಪಿಎಸ್ ತರಬೇತಿ ಪಡೆಯುತ್ತಿರುವ ಉತ್ತರಪ್ರದೇಶದ ಲಖನೌ ಮೂಲದ ಆದಿತ್ಯ ಶ್ರೀವಾಸ್ತವ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಅನಿಮೇಶ್ ಪ್ರಧಾನ್ ಮತ್ತು ದೊನುರು ಅನನ್ಯಾ ರೆಡ್ಡಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ವರ್ಷದ ಮೇ 28ರಂದು ನಡೆದ ಪರೀಕ್ಷೆಗೆ 10 ಲಕ್ಷ ಅಭ್ಯರ್ಥಿಗಳು ಹೆಸರು ನೊಂದಾಯಿಸಿಕೊಂಡು, ಅಂತಿಮವಾಗಿ 5.92 ಲಕ್ಷ ಜನರು ಭಾಗಿಯಾಗಿದ್ದರು. ಈ ಪೈಕಿ 14624 ಜನರು ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದರು. ಈ ಪೈಕಿ 2855 ಅಭ್ಯರ್ಥಿಗಳು ಅಂತಿಮ ಹಂತದ ಪರೀಕ್ಷೆಗೆ ಒಳಗಾಗಿದ್ದರು. ಈ ಪೈಕಿ ಇದೀಗ 1016 ಜನರು ವಿವಿಧ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.ಆಯ್ಕೆಯಾದ 1016 ಜನರಲ್ಲಿ 664 ಪುರುಷ ಮತ್ತು 352 ಜನ ಮಹಿಳೆಯರು. ಟಾಪ್ 25ರಲ್ಲಿ 15 ಪುರುಷರು, 10 ಮಹಿಳೆಯರು. ಅದೇ ರೀತಿ ಟಾಪ್ 5ರಲ್ಲಿ 3 ಪುರುಷರು, ಇಬ್ಬರು ಮಹಿಳೆಯರು. ಜೊತೆಗೆ 347 ಜನರು ಸಾಮಾನ್ಯ ವರ್ಗ, 115 ಆರ್ಥಿಕವಾಗಿ ಹಿಂದುಳಿದವರು, 303 ಜನರು ಇತರೆ ಹಿಂದುಳಿದ ವರ್ಗ, 165 ಎಸ್‌ಸಿ, 86 ಎಸ್ಟಿ ಸಮುದಾಯಕ್ಕೆ ಸೇರಿದವರು.
ಟಾಪರ್ ಆದಿತ್ಯ:ಪ್ರಸಕ್ತ ಸಾಲಿನಲ್ಲಿ ಟಾಪರ್ ಆಗಿ ಹೊರಹೊಮ್ಮಿರುವ ಆದಿತ್ಯ 2022ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 236ನೇ ರ್‍ಯಾಂಕ್ ಪಡೆದು, ಐಪಿಎಸ್ ಹುದ್ದೆ ಆಯ್ಕೆ ಮಾಡಿಕೊಂಡಿದ್ದರು. ಅದರ ಭಾಗವಾಗಿ ಹಾಲಿ ಹೈದ್ರಾಬಾದ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದರ ಹೊರತಾಗಿಯೂ ಐಐಎಸ್ ಕನಸು ಕಂಡು ಪರೀಕ್ಷೆ ಬರೆದಿದ್ದ ಅವರೀಗ ಅಖಿಲ ಭಾರತ ನಂ.1 ಆಗಿ ಹೊರಹೊಮ್ಮಿದ್ದಾರೆ.ಯುಪಿಎಸ್‌ಸಿ ಪರೀಕ್ಷೆ ಬರೆಯುವುದಕ್ಕೂ ಮುನ್ನ ಐಐಟಿ ಖರಗ್‌ಪುರದಲ್ಲಿ ಎಲೆಕ್ಟ್ರಿಕ್ ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪುರಸ್ಕೃತರಾಗಿದ್ದ ಆದಿತ್ಯ ಕೆಲ ಕಾಲ ಗೋಲ್ಡ್‌ಮನ್ ಸ್ಯಾಚ್ಸ್ ಕಂಪನಿಯಲ್ಲೂ ಸೇವೆ ಸಲ್ಲಿಸಿದ್ದರು.