ನವದೆಹಲಿ: ದೇಶದಲ್ಲಿ ಭಾರೀ ಕೋಲಾಹಲವೆಬ್ಬಿಸಿದ್ದ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಯೊಂದಿಗೆ ಶಾಂತವಾಗುತ್ತಿದ್ದಂತೆ, ಇ-20 ಪೆಟ್ರೋಲ್‌ ವಿರುದ್ಧ ಚಳವಳಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ರಾಜಕೀಯ ವಿಶ್ಲೇಷಕ ತೆಹ್ಸೀನ್‌ ಪೂನಾವಾಲಾ ಮತ್ತು ದೆಹಲಿ ಸಾರಿಗೆದಾರರ ಸಂಘದವರು ಪೆಟ್ರೋಲ್‌ಗೆ ಎಥನಾಲ್‌ ಮಿಶ್ರಣ ವಿರೋಧಿಸಿ 2 ಪ್ರತ್ಯೇಕ ದಿನ ಸಂಸತ್‌ವರೆಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದಾರೆ.

ಜು.31 ಹಾಗೂ ಆ.4ರಂದು ಈ ಪ್ರತ್ಯೇಕ ಪ್ರತಿಭಟನೆಗಳು ನಡೆಯಲಿವೆ.

ಜು.31ರಂದು ಗಾಡಿ ಮಾರ್ಚ್:

ಏಪ್ರಿಲ್‌ನಿಂದ ಸರ್ಕಾರ ಕಡ್ಡಾಯಗೊಳಿಸಿರುವ ಇ-20ರಿಂದಾಗಿ ವಾಹನಗಳ ಮೈಲೇಜ್‌ ಕುಸಿಯುತ್ತಿದೆ ಹಾಗೂ ಕೆಲ ಭಾಗಗಳು ಹಾಳಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ, ಇ-10 ಇಂಧನದ ಆಯ್ಕೆಯನ್ನೂ ಕೊಡುವುದು, ಪೆಟ್ರೋಲ್‌ ಬೆಲೆಯನ್ನು ಶೇ.20ರಷ್ಟು ಇಳಿಸುವುದು, ಇದಕ್ಕೆ ಸಂಬಂಧಿಸಿದ ನೀತಿಯನ್ನು ಪಾರದರ್ಶಕವಾಗಿರಿಸುವುದು, 2023ಕ್ಕಿಂತ ಹಳೆಯ(ಇ-20 ಬೆಂಬಲಿಸದ) ಗಾಡಿಗಳಿಗಾಗಿರುವ ಹಾನಿಗೆ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪೂನಾವಾಲಾ ಮತ್ತು ಟೀಂ ಭಾರತ್‌, ಜು.31ರಂದು ‘ಗಾಡಿ ಮಾರ್ಚ್‌’ಗೆ ಕರೆ ನೀಡಿದ್ದಾರೆ.


ಇಂಡಿಯಾ ಗೇಟ್‌ನಿಂದ ಶುರುವಾಗುವ ಈ ಮೆರವಣಿಗೆ, ಸಾರಿಗೆ ಸಚಿವ ನತಿನ್‌ ಗಡ್ಕರಿ ಮತ್ತು ಇಂಧನ ಸಚಿವ ಹರ್ದೀಪ್‌ ಪುರಿ ಅವರ ನಿವಾಸದೆದುರು ಸಾಗಿ ಪಾರ್ಲಿಮೆಂಟ್‌ ಸ್ಟ್ರೀಟ್‌ ತಲುಪಲಿದೆ.

ಜು.31ಕ್ಕೆ ಸಂಸತ್‌ ಚಲೋ:

ಅತ್ತ ದೆಹಲಿ ಸಾರಿಗೆದಾರರ ಸಂಘ ಆ.4ರಂದು ಸಂಸತ್‌ ವರೆಗೆ ಮೆರವಣಿಗೆಗೆ ಕರೆ ನೀಡಿದೆ. ವಾಹನ ತಯಾರಕರು, ಮಾಲೀಕರು, ಗ್ರಾಹಕರು, ಸಾರಿಗೆ ನಿರ್ವಾಹಕರು ಮತ್ತು ತಾಂತ್ರಿಕ ತಜ್ಞರನ್ನು ಒಳಗೊಂಡಂತೆ, ಎಥನಾಲ್ ಮಿಶ್ರಣ ನೀತಿಯ ಕುರಿತು ಸ್ವತಂತ್ರ ವೈಜ್ಞಾನಿಕ ಪರಿಶೀಲನೆಗೆ ಅದು ಆಗ್ರಹಿಸಿದೆ.